
ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಮಾಡಿಕೊಂಡ ವಿವಾದಗಳು ಒಂದೆರಡಲ್ಲ. ರೇಣುಕಾಸ್ವಾಮಿ ಕೊಲೆ ಆರೋಪದಿಂದ ಅವರು ಹಲವು ತಿಂಗಳು ಜೈಲಿನಲ್ಲಿ ಕಳೆಯುವಂತಾಗಿತು. ಅದಲ್ಲದೇ, ದರ್ಶನ್ (Darshan) ಅವರು ತಮ್ಮ ಫಾರ್ಮ್ಹೌಸ್ನಲ್ಲಿ ವಿದೇಶಿ ಬಾತುಕೋಳಿ (Bar Headed Goose) ಸಾಕಿದ್ದು ಕೂಡ ವಿವಾದಕ್ಕೆ ಕಾರಣ ಆಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಎಫ್ಐಆರ್ ದಾಖಲು ಮಾಡಿತ್ತು. ಆ ಕೇಸ್ ವಿಚಾರಣೆಗೆ ಇಂದು (ಜುಲೈ 4) ಟಿ. ನರಸಿಪುರ ಕೋರ್ಟ್ಗೆ ದರ್ಶನ್ ಹಾಜರಾಗಬೇಕಿತ್ತು. ಕೋರ್ಟ್ನಿಂದ ದರ್ಶನ್-ವಿಜಯಲಕ್ಷ್ಮೀ ದಂಪತಿಯ ವಿಚಾರಣೆ ಮುಂದೂಡಿಕೆ ಆಗಿದೆ.
ನ್ಯಾಯಾಲಯವು ಸೆಪ್ಟೆಂಬರ್ 4ಕ್ಕೆ ವಿಚಾರಣೆ ಮುಂದೂಡಿದೆ. ಅರಣ್ಯ ಇಲಾಖೆ 2 ವರ್ಷದ ಹಿಂದೆ ನೋಟಿಸ್ ನೀಡಿ FIR ದಾಖಲಿಸಿತ್ತು. ವಿದೇಶಿ ಬಾತುಕೋಳಿ ಸಾಕಲು ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಎಫ್ಐಆರ್ ಹಾಕಲಾಗಿತ್ತು. ಮೈಸೂರು ಜಿಲ್ಲೆಯ ಟಿ. ನರಸಿಪುರ ತಾಲೂಕಿನ ಕೆಂಪಯ್ಯನಹುಂಡಿಯಲ್ಲಿ ಇರುವ ಫಾರ್ಮ್ ಹೌಸ್ನಲ್ಲಿ ದರ್ಶನ್ ಅವರು ಬಾರ್ ಹೆಡೆಡ್ ಗೂಸ್ ಬಾತುಕೋಳಿ ಸಾಕಿದ್ದರು.
ಈ ಬಗ್ಗೆ ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ದರ್ಶನ್ ಮಾಹಿತಿ ನೀಡಿದ್ದಾಗ ವಿಷಯ ಬಹಿರಂಗ ಆಗಿತ್ತು. ದರ್ಶನ್, ಪತ್ನಿ ವಿಜಯಲಕ್ಷ್ಮೀ ಸೇರಿ ಮೂವರಿಗೆ ಅರಣ್ಯ ಇಲಾಖೆಯವರು ನೋಟಿಸ್ ನೀಡಿದ್ದರು. ತೋಟದ ಮ್ಯಾನೇಜರ್ ನಾಗರಾಜುಗೂ ನೋಟಿಸ್ ನೀಡಲಾಗಿತ್ತು. ದರ್ಶನ್ ಪರ ಸುನೀಲ್ ಕುಮಾರ್ ವಕೀಲರಾಗಿದ್ದಾರೆ. ಸುನೀಲ್ ಪರವಾಗಿ ಹಿರಿಯ ವಕೀಲ ಬಸವಣ್ಣ ಕೋರ್ಟ್ಗೆ ಹಾಜರಾಗಿದ್ದರು. ನ್ಯಾಯಾಲಯ ಈ ಕೇಸ್ ವಿಚಾರಣೆಯನ್ನು ಸೆಪ್ಟೆಂಬರ್ 4ಕ್ಕೆ ಮುಂದೂಡಿದೆ.
ಇಂದು ದರ್ಶನ್ ಅವರು ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆಷಾಡಮಾಸದ ಶುಕ್ರವಾರದಂದು ಅವರು ತಪ್ಪದೇ ಇಲ್ಲಿಗೆ ಬರುತ್ತಾರೆ. ಕಳೆದ ವರ್ಷ ಜೈಲಿನಲ್ಲಿದ್ದ ಕಾರಣಕ್ಕೆ ಭೇಟಿ ನೀಡಲಾಗಲಿಲ್ಲ. ಇಂದು 2ನೇ ಶುಕ್ರವಾರದಂದು ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ಜೊತೆಗೆ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಮಾಡಿದ್ದಾರೆ.
ಇದನ್ನೂ ಓದಿ: ಫಾರ್ಮ್ ಹೌಸ್ನಲ್ಲಿ ಪಕ್ಷಿಗಳ ಜೊತೆ ವಿಜಯಲಕ್ಷ್ಮಿ ದರ್ಶನ್ ಖುಷಿಯ ಕ್ಷಣ
ಚಾಮುಂಡೇಶ್ವರಿ ತಾಯಿಗೆ ಇಂದು ಲಕ್ಷ್ಮೀ ಅಲಂಕಾರ, ಬಳೆ, ಹೂವು, ತೋತಾಪುರಿ ಮಾವಿನ ಕಾಯಿಯಿಂದ ಅಲಂಕಾರ ಮಾಡಲಾಗಿತ್ತು. ದರ್ಶನ್ ಆಗಮಿಸಿದ ವೇಳೆ ಸಾಕಷ್ಟು ಅಭಿಮಾನಿಗಳು ಅವರನ್ನು ನೋಡಲು ಬಂದರು. ಇದರಿಂದಾಗಿ ದೇವಾಲಯದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಕೆಲಸಗಳು ಪ್ರಗತಿಯಲ್ಲಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.