ಸಿಗರೇಟ್ ಮಾತ್ರವಲ್ಲ, ಜೈಲಿನಲ್ಲಿ ದರ್ಶನ್​ಗೆ ವಿಡಿಯೋ ಕಾಲ್ ವ್ಯವಸ್ಥೆ; ಬಿಂದಾಸ್ ಲೈಫ್

ಕೊಲೆ ಕೇಸ್​ನಲ್ಲಿ ಜೈಲು ಸೇರಿದ ದರ್ಶನ್​ ಅವರಿಗೆ ಪಶ್ಚಾತ್ತಾಪವೇ ಇಲ್ಲವಾ? ಜೈಲಿನಲ್ಲಿ ಬಿಂದಾಸ್​ ಆಗಿ ಅವರು ದಿನ ಕಳೆಯುತ್ತಿದ್ದಾರೆ. ವಿಡಿಯೋ ಕಾಲ್ ಮಾಡುತ್ತಾ, ಸಿಗರೇಟ್​ ಸೇದುತ್ತಾ, ಗಾರ್ಡನ್​ ಏರಿಯಾದಲ್ಲಿ ರೌಡಿ ಶೀಟರ್​ಗಳ ಜೊತೆ ಹರಟೆ ಹೊಡೆಯುತ್ತಾ ಇರುವ ದರ್ಶನ್​ ಅವರ ಫೋಟೋ, ವಿಡಿಯೋ ವೈರಲ್​ ಆಗಿರುವುದು ದೊಡ್ಡ ಚರ್ಚೆ ಹುಟ್ಟುಹಾಕಿದೆ.

ಸಿಗರೇಟ್ ಮಾತ್ರವಲ್ಲ, ಜೈಲಿನಲ್ಲಿ ದರ್ಶನ್​ಗೆ ವಿಡಿಯೋ ಕಾಲ್ ವ್ಯವಸ್ಥೆ; ಬಿಂದಾಸ್ ಲೈಫ್
ದರ್ಶನ್​ ವಿಡಿಯೋ ಕಾಲ್​
Follow us
ಮದನ್​ ಕುಮಾರ್​
|

Updated on: Aug 25, 2024 | 9:19 PM

ಸ್ಯಾಂಡಲ್​ವುಡ್​ ನಟ ದರ್ಶನ್​ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಅವರ ಜೈಲು ವಾಸ ಕಷ್ಟಕರವಾಗಿದೆ ಎಂದು ಇಷ್ಟು ದಿನ ಊಹಿಸಲಾಗಿತ್ತು. ಆದರೆ ಈಗ ಕೆಲವು ಶಾಕಿಂಗ್​ ವಿಚಾರಗಳು ಹೊರಬರುತ್ತಿವೆ. ಕೊಲೆ ಆರೋಪ ಹೊತ್ತಿರುವ ದರ್ಶನ್​ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಕಲ ಸೌಕರ್ಯಗಳು ಸಿಗುತ್ತಿವೆ ಎಂಬುದಕ್ಕೆ ಒಂದಷ್ಟು ಸಾಕ್ಷಿಗಳು ಲಭ್ಯವಾಗುತ್ತಿವೆ. ಸ್ಪೆಷಲ್​ ಬ್ಯಾರಕ್​ನಲ್ಲಿ ಇರುವ ದರ್ಶನ್​ ಅವರಿಗೆ ವಿಡಿಯೋ ಕಾಲ್​ ಸೌಲಭ್ಯವನ್ನೂ ನೀಡಲಾಗಿದೆ. ಅದಕ್ಕೆ ಸಾಕ್ಷಿಯಾಗಿರುವ ವಿಡಿಯೋ ಈಗ ವೈರಲ್​ ಆಗಿದೆ.

ವ್ಯಕ್ತಿಯೊಬ್ಬರ ಜೊತೆ ದರ್ಶನ್​ ಅವರು ವಿಡಿಯೋ ಕಾಲ್​ನಲ್ಲಿ ಮಾತನಾಡಿದ್ದಾರೆ. ಜೈಲಿನಲ್ಲಿ ಇರುವ ಬೇರೊಬ್ಬ ಖೈದಿಯ ಮೊಬೈಲ್‌ ಬಳಸಿ ವಿಡಿಯೋ ಕಾಲ್ ಮಾಡಿರುವ ಸಾಧ್ಯತೆ ಇದೆ. ಆಪ್ತರೊಬ್ಬರ ಜೊತೆ ವಿಡಿಯೋ ಕಾಲ್​ನಲ್ಲಿ ದರ್ಶನ್​ ಅವರು ಮಾತನಾಡಿದ್ದಾರೆ. ‘ಊಟ ಆಯ್ತಾ? ನಾನು ಆರಾಮಾಗಿದ್ದೀನಿ’ ಎಂದು ಮಾತುಕತೆ ಮಾಡಲಾಗಿದೆ. ರೆಡ್ಡಿ ಎಂಬಾತ‌ನ ಸ್ಟೇಟಸ್​ನಲ್ಲಿ ವಿಡಿಯೋ ಹರಿದಾಡಿದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ ದರ್ಶನ್​ ಹೇಗೆ ಇರಬೇಕು? ಹೀಗಿದೆ ಜೈಲು ನಡಾವಳಿ..

ವಿಡಿಯೋ ಕಾಲ್​ ತುಣುಕು ವೈರಲ್​ ಆಗುವುದಕ್ಕೂ ಮುನ್ನ ದರ್ಶನ್​ ಅವರ ಒಂದು ಶಾಕಿಂಗ್​ ಫೋಟೋ ಕೂಡ ವೈರಲ್​ ಆಯಿತು. ಈ ಫೋಟೋದಲ್ಲಿ ಅವರು ಜೈಲಿನೊಳಗೆ ನಟೋರಿಯಸ್​ ರೌಡಿಗಳ ಜೊತೆ ಹಾಯಾಗಿ ಕುಳಿತು ಮಾತುಕಥೆ ಮಾಡುತ್ತಿರುವ ಕ್ಷಣ ಸೆರೆಯಾಗಿದೆ. ವಿಲ್ಸನ್​ ಗಾರ್ಡನ್​ ನಾಗ, ಕುಳ್ಳ ಸೀನಾ ಮುಂತಾದ ರೌಡಿಶೀಟರ್​ಗಳ ಜೊತೆ ದರ್ಶನ್​ ಸಿಗರೇಟು ಸೇದಿದ ಫೋಟೋ ಇದಾಗಿದೆ.

ಹಣ ಇರುವ ಖೈದಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಾ ಎಂಬ ಅನುಮಾನಕ್ಕೆ ಈ ಫೋಟೋ ಮತ್ತು ವಿಡಿಯೋ ಪುಷ್ಟಿ ನೀಡುತ್ತಿದೆ. ಜೈಲಿನಲ್ಲಿ ಅಧಿಕಾರಿಗಳಿಂದ ಕಾನೂನು ಉಲ್ಲಂಘನೆ ಆಗಿರುವುದು ಸ್ಪಷ್ಟವಾಗಿದೆ. ಇಷ್ಟು ದಿನಗಳ ಕಾಲ ದರ್ಶನ್​ ಅವರು ಕೊಲೆ ಕೇಸ್​ನಲ್ಲಿ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಕೆಲವರು ಹೇಳಿದ್ದರು. ಆದರೆ ಈಗ ವೈರಲ್​ ಆದ ವಿಡಿಯೋ ಮತ್ತು ಫೋಟೋ ನೋಡಿದರೆ ಅವರಿಗೆ ಯಾವುದೇ ಪಶ್ಚಾತ್ತಾಪ ಕಾಡುತ್ತಿಲ್ಲ ಎಂಬುದು ಖಚಿತವಾಗುವಂತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.