ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ ದರ್ಶನ್​ ಹೇಗೆ ಇರಬೇಕು? ಹೀಗಿದೆ ಜೈಲು ನಡಾವಳಿ..

ರೇಣುಕಾ ಸ್ವಾಮಿ ಕೊಲೆ ಕೇಸ್​ನ 2ನೇ ಪ್ರಮುಖ ಆರೋಪಿ ದರ್ಶನ್​ ಈಗ ಪರಪ್ಪನ ಅಗ್ರಹಾರದಲ್ಲಿ ಪಡೆಯುತ್ತಿರುವ ಸೌಲಭ್ಯಗಳ ಬಗ್ಗೆ ಚರ್ಚೆ ಶುರುವಾಗಿದೆ. ಅದಕ್ಕೆ ಕಾರಣ ಆಗಿರುವುದು ಅವರ ವೈರಲ್​ ಫೋಟೋ. ಜೈಲಿನಲ್ಲಿ ರೌಡಿಶೀಟರ್​ಗಳ ಸಹವಾಸ ಮಾಡಿರುವ ದರ್ಶನ್​ ಆರಾಮಾಗಿ ಸಿಗರೇಟ್​ ಸೇದುತ್ತಾ ದಿನ ಕಳೆಯುತ್ತಿರುವುದು ಈ ಫೋಟೋದಲ್ಲಿದೆ.

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಖೈದಿ ದರ್ಶನ್​ ಹೇಗೆ ಇರಬೇಕು? ಹೀಗಿದೆ ಜೈಲು ನಡಾವಳಿ..
ರೇಣುಕಾ ಸ್ವಾಮಿ, ದರ್ಶನ್​ ವೈರಲ್​ ಫೋಟೋ
Follow us
ಮದನ್​ ಕುಮಾರ್​
|

Updated on: Aug 25, 2024 | 7:33 PM

ಸೆಲೆಬ್ರಿಟಿಗಳು ಜೈಲು ಸೇರಿದರೆ ರಾಜಾತಿಥ್ಯ ನೀಡಲಾಗುತ್ತಾ ಎಂಬ ಅನುಮಾನವನ್ನು ಬಲಗೊಳಿಸುವ ರೀತಿಯಲ್ಲಿ ಒಂದು ಫೋಟೋ ವೈರಲ್​ ಆಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಇರುವ ನಟ ದರ್ಶನ್​ ಓರ್ವ ವಿಚಾರಣಾಧೀನ ಖೈದಿ. ಅಲ್ಲಿ ಅವರು ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಜೈಲು ನಡಾವಳಿಯಲ್ಲಿ ಬರೆಯಲಾಗಿದೆ. ಆ ನಿಯಮಗಳಿಗೆ ವಿರುದ್ಧವಾಗಿ ದರ್ಶನ್​ಗೆ ಉಪಚಾರ ಮಾಡಲಾಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಜೈಲಿನ ಇತರೆ ಖೈದಿಗಳ ಜೊತೆ ದರ್ಶನ್​ ಟೀ ಕುಡಿದು, ಸಿಗರೇಟ್​ ಸೇದುತ್ತಾ ಕಾಲ ಕಳೆಯುತ್ತಿದ್ದಾರೆ ಎಂಬುದು ಈ ಫೋಟೋದಿಂದ ಸ್ಪಷ್ಟವಾಗುತ್ತಿದೆ.

ಜೈಲಿನಲ್ಲಿ ಖೈದಿಗಳಿಗೆ ಕೆಲವು ಹಕ್ಕುಗಳು ಮತ್ತು ಕರ್ತವ್ಯಗಳು ಇವೆ. ವಿಚಾರಣಾಧೀನ ಖೈದಿಗಳ ಉಸ್ತುವಾರಿಯಾಗಿ ಸಹಾಯಕ‌ ಜೈಲು ಅಧೀಕ್ಷಕರು ಇರುತ್ತಾರೆ. ಸಾಮಾನ್ಯ ಖೈದಿಗಳಿಗೆ ನೀಡುವಂತೆ ವಿಚಾರಣಾಧೀನ ಖೈದಿಗಳಿಗೂ ಶುದ್ಧ ನೀರು, ಆಹಾರ, ವೈದ್ಯಕೀಯ ಸೌಲಭ್ಯ ನೀಡಲಾಗುತ್ತದೆ. ಒಂದೇ ಪ್ರಕರಣದ ಆರೋಪಿಗಳು ಒಟ್ಟಿಗೆ ಇರಬಾರದು ಎಂಬ ನಿಯಮವಿದೆ. ಆದರೆ ಈ ಫೋಟೋದಲ್ಲಿ ಗಮನಿಸುವಂತೆ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ದರ್ಶನ ಹಾಗೂ ಮ್ಯಾನೇಜರ್​ ನಾಗ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ.

ವಿಚಾರಣಾಧೀನ ಖೈದಿಗಳು ಹೇರ್ ಕಟಿಂಗ್, ಶೇವಿಂಗ್ ಮಾಡಬಾರದು. ಆದರೆ ದರ್ಶನ್ ತಲೆ ಬೋಳಿಸಿಕೊಂಡಿದ್ದಾರೆ. ಆ ವಿಚಾರ ಕೂಡ ಚರ್ಚೆ ಆಗುತ್ತಿದೆ. ಇತರೆ ಖೈದಿಗಳಂತೆ ವಿಚಾರಣಾಧೀನ ಖೈದಿಗಳಿಗೂ ಕೆಲವು ಹಕ್ಕುಗಳಿವೆ. ಕಾನೂನು ರಕ್ಷಣೆ ಮತ್ತು ನೆರವು, ವಕೀಲರು, ಕುಟುಂಬದೊಂದಿಗೆ ಮಾತನಾಡಲು ಅವಕಾಶ ಇದೆ. ಕ್ಯಾಂಟೀನ್ ವಸ್ತುಗಳನ್ನು ಖರೀದಿ ಮಾಡಬಹುದು. ಲೇಖನ ಸಾಮಾಗ್ರಿಗಳನ್ನು ಪಡೆಯಬಹುದು. ಜೈಲಿನ ಕಾನೂನುಗಳಿಗೆ ಬದ್ಧನಾಗಿರಬೇಕು. ಅಧಿಕಾರಿಗಳು ಆದೇಶ ಪಾಲಿಸಬೇಕು. ನಿಯಮಗಳಿಂದ ನಿಷೇಧಿಸಲ್ಪಟ್ಟ ಗಾಂಜಾ ಅಥವಾ ಇತರ ಮಾದಕ ವಸ್ತುಗಳನ್ನು, ಹಣ, ಆಭರಣ ಸ್ವೀಕರಿಸುವ ಆಗಿಲ್ಲ.

ಇದನ್ನೂ ಓದಿ: ಜೈಲಲ್ಲಿ ರೌಡಿಶೀಟರ್ ಸ್ನೇಹ ಬೆಳೆಸಿದ ದರ್ಶನ್: ವೈರಲ್ ಫೋಟೋದಲ್ಲಿ ಇರುವ ನಾಗ ಯಾರು?

ಈ ಎಲ್ಲ ನಿಯಮಗಳು ಇದ್ದರೂ ಕೂಡ ಹಣ ಇರುವ ಆರೋಪಿಗಳಿಗೆ ಸೆಂಟ್ರಲ್‌ ಜೈಲು ಎಂಬುದು ರೆಸಾರ್ಟ್‌ ಆಗಿದೆಯಾ ಎನ್ನುವ ಪ್ರಶ್ನೆ ಎದುರಾಗುತ್ತದೆ. ಈ ಹಿಂದೆ ಜಯಲಲಿತಾ, ಶಶಿಕಲಾಗೆ ರಾಜಾಥಿತ್ಯ ನೀಡಿದ ಆರೋಪ ಕೇಳಿಬಂದಿತ್ತು. ಅದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ ಜೈಲಿನಲ್ಲಿ ರೌಡಿಶೀಟರ್‌ ಕುಳ್ಳು ರಿಜ್ವಾನ್ ಬರ್ತ್‌ಡೇ ಆಚರಿಸಿಕೊಂಡಿದ್ದ. ಭರ್ಜರಿಯಾಗಿ ಬರ್ತ್‌ಡೇ ಮಾಡಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು. ಈಗ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ರಾಜಾತಿಥ್ಯ ನೀಡಿದ ಆರೋಪ ಎದುರಾಗಿದೆ. ಜೈಲಿನ ಗಾರ್ಡನ್ ಏರಿಯಾದಲ್ಲಿ ನಾಲ್ವರ ಜೊತೆ ಕುಳಿತಿರುವ ದರ್ಶನ್‌, ಕಾಫಿ ಕುಡಿಯುತ್ತಾ ಸಿಗರೇಟ್‌ ಸೇದಿರುವ ಫೋಟೋದಿಂದ ಹಲವು ಅನುಮಾನ ಹುಟ್ಟಿಕೊಂಡಿದೆ.

ವರದಿ: ಪ್ರದೀಪ್

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.