‘ಖದೀಮ’ ಟೀಸರ್ ಬಿಡುಗಡೆ: ಜಿಮ್ ಟ್ರೈನರ್ ಈಗ ನಾಯಕ
Khadeema Teaser: ಜಿಮ್ ಟ್ರೈನರ್ ಆಗಿದ್ದ ಚಂದನ್ ಮೊದಲ ಬಾರಿ ನಾಯಕನಾಗಿ ನಟಿಸುತ್ತಿರುವ ‘ಖದೀಮ’ ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಸಿನಿಮಾ ಆದಷ್ಟು ಶೀಘ್ರವಾಗಿ ಬಿಡುಗಡೆ ಆಗಲಿದೆ.
ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ (Sandalwood) ಹಲವು ಹೊಸಬರ ಆಗಮನ ಆಗುತ್ತಿದೆ. ಹೊಸಬರು ಹೊಸ ರೀತಿಯ ಕತೆಗಳನ್ನು ತರುತ್ತಿದ್ದಾರೆ. ಕೆಲವರು ಗೆಲ್ಲುತ್ತಿದ್ದಾರೆ, ಕೆಲವರು ಸೋಲುತ್ತಿದ್ದಾರೆ. ಆದರೆ ಹೊಸಬರ ಹರಿವು ನಿಲ್ಲುತ್ತಿಲ್ಲ. ಇದೀಗ ಮತ್ತೊಂದು ಹೊಸ ತಂಡ ತಮ್ಮ ಕತೆಯನ್ನು ಹೊತ್ತು ತಂದಿದೆ. ಪ್ರೇಕ್ಷಕರ ಮೆಚ್ಚುಗೆ, ಆಶೀರ್ವಾದ ಪಡೆಯಲು ಕಾತರವಾಗಿದೆ. ಹೊಸ ತಂಡ ‘ಖದೀಮ’ ಹೆಸರಿನ ಸಿನಿಮಾದೊಂದಿಗೆ ಗಾಂಧಿನಗರಕ್ಕೆ ಬಂದಿದ್ದು, ಸಿನಿಮಾದ ಟೀಸರ್ ಇದೀಗ ಬಿಡುಗಡೆ ಆಗಿದೆ.
ಶಿವೇಶು ಪ್ರೊಡಕ್ಷನ್ ಸಂಸ್ಥೆಯ ಮೂಲಕ ‘ಖದೀಮ’ ಸಿನಿಮಾ ನಿರ್ಮಾಣ ಮಾಡಲಾಗಿದ್ದು, ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿ ಬಿಡುಗಡೆಗೆ ಹಂತಕ್ಕೆ ಬಂದಿದೆ. ಯುವ ಸಿನಿಮಾ ಮೋಹಿಗಳೇ ಒಟ್ಟಿಗೆ ಸೇರಿಕೊಂಡು ನಿರ್ಮಿಸಿರುವ ಸಿನಿಮಾ ಇದಾಗಿದ್ದು, ಸಿನಿಮಾಕ್ಕೆ ಟಿ ಶಿವಕುಮಾರನ್ ಬಂಡವಾಳ ಹೂಡಿದ್ದಾರೆ. ನಿರ್ಮಾಕರಾಗಿ ಇದು ಇವರ ಮೊದಲ ಪ್ರಯತ್ನ. ಈ ಸಾಹಸಕ್ಕೆ ಸಹ ನಿರ್ಮಾಪಕಿಯಾಗಿ ಯಶಸ್ವಿನಿ ಜೊತೆ ನೀಡಿದ್ದಾರೆ.
ಚಿತ್ರರಂಗದ ಮೇಲಿನ ಅಪಾರ ಅಭಿಮಾನ ಹಾಗೂ ಆಸಕ್ತಿಯಿಂದಾಗಿ ಇರುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾದ ಪ್ರಚಾರ ಕಾರ್ಯವನ್ನು ಚಿತ್ರತಂಡ ಪ್ರಾರಂಭಿಸಿದ್ದು, ಅದರ ಭಾಗವಾಗಿ ಮೊದಲಿಗೆ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಟೀಸರ್ ಕಾರ್ಯಕ್ರಮದಲ್ಲಿ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ಇದನ್ನೂ ಓದಿ:ಚಿತ್ರರಂಗದಲ್ಲಿ ಒಳಜಗಳ ಹೆಚ್ಚಾಗಿದೆಯೇ? ಶಿವಣ್ಣ ಕೊಟ್ಟರು ಉತ್ತರ
ನಿರ್ದೇಶಕ ಸಾಯಿ ಪ್ರದೀಪ್ ಮಾತನಾಡಿ, ‘ಟೀಸರ್ ಬಿಡುಗಡೆ ಮಾಡಿದ್ದೀವಿ, ಅತಿ ಶೀಘ್ರದಲ್ಲೇ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನೂ ಮಾಡಲಿದ್ದೇವೆ. ಆ ಬಳಿಕ ಟ್ರೇಲರ್ ಲಾಂಚ್ ಆಗುತ್ತದೆ. ಅತಿ ಶೀಘ್ರದಲ್ಲಿ ಬೆಳ್ಳಿ ಪರದೆಗೆ ಬರಬೇಕೆಂದು ಪ್ರಯತ್ನ ಮಾಡುತ್ತಿದ್ದೇವೆ. ‘ಖದೀಮ’ ಒಂದೊಳ್ಳೆ ಸಿನಿಮಾ. ಇಡೀ ಕುಟುಂಬ ಒಟ್ಟಿಗೆ ನೋಡಬಹುದಾದ ಸಿನಿಮಾ. ಸಿನಿಮಾದಲ್ಲಿ ಅವಾಚ್ಯ ಶಬ್ದಗಳ ಬಳಕೆಯಾಗಲಿ, ಅಸಭ್ಯ ದೃಶ್ಯಗಳಾಗಲಿ ನಮ್ಮ ಸಿನಿಮಾದಲ್ಲಿ ಇರುವುದಿಲ್ಲ. ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲ ವಯೋಮಾನದವರು ನೋಡಬಹುದಾದ ಸಿನಿಮಾ ಮಾಡಿದ್ದೇವೆ’ ಎಂದಿದ್ದಾರೆ.
ನಟ ಚಂದನ್ ಮಾತನಾಡಿ, ‘ಇಷ್ಟು ದಿನ ನಾನು ಚಂದನ್ ಆಗಿದ್ದೆ. ಈಗ ‘ಖದೀಮ’ನಾಗಿದ್ದೀನಿ. ಸಿನಿಮಾ ನೋಡಿದ ಮೇಲೆ ಚಂದನ್ ಅನ್ನುವುದನ್ನು ಮರೆತು ‘ಖದೀಮ’ ಎಂದೇ ನನ್ನನ್ನು ಕರೆಯುತ್ತಾರೆ. ಪಾತ್ರ ಅಷ್ಟು ಚೆನ್ನಾಗಿದೆ. ಸಿನಿಮಾದಲ್ಲಿ ಕದಿಯುವುದು ನನ್ನ ಕಾಯಕ, ಏನು ಕದಿದ್ದೇನೆ ಅನ್ನೋದನ್ನು ತಿಳಿಯಲು ಸಿನಿಮಾ ನೋಡಬೇಕು. ನಮ್ಮ ಗುರುಗಳು ದಯಾನಂದ್ ಅಂಕಲ್ ಧನ್ಯವಾದ. ಶಶಾಂಕ್ ಸರ್ ಇಲ್ಲ ಅಂದಿದ್ದರೆ ‘ಖದೀಮ’ ಸಿನಿಮಾ ಮಾಡುವುದು ಕಷ್ಟವಾಗುತಿತ್ತು. ‘ಖದೀಮ’ ಪಾತ್ರಕ್ಕಾಗಿ ಬಹಳ ಕಷ್ಟಪಟ್ಟಿದ್ದೇನೆ. ಸಿಕ್ಸ್ ಪ್ಯಾಕ್ ಮಾಡಿ ರೆಡಿಯಾಗ್ಲಾ ಎಂದು ಡೈರೆಕ್ಟರ್ ಕೇಳಿದೆ. ಅವರು ರೋಡಲ್ಲಿ ಬಿಟ್ಟಿರುವ ಹೋರಿಯಂಗೆ ಕಾಣಬೇಕು ಎಂದರು, ಅದಕ್ಕಾಗಿ ಬೇರೆ ರೀತಿಯ ತಯಾರಿ ಮಾಡಿದೆ’ ಎಂದಿದ್ದಾರೆ.
‘ಖದೀಮ’ ಸಿನಿಮಾ ಆಕ್ಷನ್ ಹಾಗೂ ಥ್ರಿಲ್ಲರ್ ಜಾನರ್ನ ಸಿನಿಮಾ ಆಗಿದೆ. ಈ ಹಿಂದೆ ಜಿಮ್ ಟ್ರೈನರ್ ಆಗಿದ್ದ ಚಂದನ್ ಈ ಸಿನಿಮಾ ಮೂಲಕ ಹೀರೋ ಆಗಿ ಸ್ಯಾಂಡಲ್ವುಡ್ಗೆ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಇವರಿಗೆ ಜೋಡಿಯಾಗಿ ಯುಐ ಸಿನಿಮಾದ ಟ್ರೋಲ್ ಹಾಡಿನಲ್ಲಿ ಕಾಣಿಸಿಕೊಂಡಿರುವ ಅನುಷಾ ನಾಯಕಿಯಾಗಿ ನಟಿಸಿದ್ದಾರೆ. ಶೋಭಾರಾಜ್, ಮಿಮಿಕ್ರಿ ದಯಾನಂದ್, ಗಿರಿಜಾ ಲೋಕೇಶ್, ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್ ಅವರಂತಹ ಹಿರಿಯ ಹಾಗೂ ಅನುಭವಿ ಕಲಾದಂಡು ಚಿತ್ರದಲ್ಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ