ಹುಟ್ಟುಹಬ್ಬದ ದಿನವೇ ಧೀರೇನ್ ರಾಮ್ಕುಮಾರ್ ಹೆಸರು ಬದಲು; ಹೊಸ ಹೆಸರು ಏನು?
‘ತಾತನ ಹೆಸರು ಇಟ್ಟುಕೊಳ್ಳಬೇಕು ಎಂಬ ಆಲೋಚನೆ ನನಗೆ ಮೊದಲೇ ಇತ್ತು. ನಮ್ಮ ತಾತನ ಹೆಸರನ್ನು ನಾನು ಇಟ್ಟುಕೊಂಡಿದ್ದೇನೆ. ಬೇರೆಯವರ ಹೆಸರು ಇಟ್ಟುಕೊಂಡಿಲ್ಲ’ ಎಂದು ಧೀರೇನ್ ಆರ್. ರಾಜ್ಕುಮಾರ್ ಹೇಳಿದ್ದಾರೆ. ಕೊರಗಜ್ಜನ ದೇವಸ್ಥಾನಕ್ಕೆ ಹೋದಾಗಲೂ ಅವರಿಗೆ ಹೆಸರು ಬದಲಾವಣೆ ಬಗ್ಗೆ ಸಲಹೆ ಸಿಕ್ಕಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಕಾಲಿಡುವಾಗ ಕೆಲವರು ಹೆಸರು ಬದಲಾವಣೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ನಂತರದಲ್ಲಿ ಹೆಸರು ಬದಲಾವಣೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗ ನಟ ಧೀರೇನ್ ರಾಮ್ಕುಮಾರ್ (Dheeren Ramkumar) ಕೂಡ ಅಂತಹ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂದು (ಏಪ್ರಿಲ್ 29) ಅವರ ಜನ್ಮದಿನ. ಈ ವಿಶೇಷ ದಿನದಂದೇ ಅವರು ಹೊಸ ಸುದ್ದಿ ನೀಡಿದ್ದಾರೆ. ಅವರ ಹೆಸರು ಬದಲಾಗಿದೆ. ಧೀರೇನ್ ರಾಮ್ ಕುಮಾರ್ ಅವರ ಹೆಸರು ಧೀರೇನ್ ಆರ್. ರಾಜ್ಕುಮಾರ್ (Dheeren R. Rajkumar) ಆಗಿ ಬದಲಾಗಿದೆ. ಡಾ. ರಾಜ್ಕುಮಾರ್ (Dr Rajkumar) ಕುಟುಂಬದ ಕುಡಿ ಆಗಿರುವ ಅವರು ತಾತನ ಹೆಸರನ್ನು ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿದ್ದಾರೆ.
ಎರಡು ಸಿನಿಮಾಗಳಲ್ಲಿ ಧೀರೇನ್ ಆರ್. ರಾಜ್ಕುಮಾರ್ ಅವರು ಬ್ಯುಸಿ ಆಗಿದ್ದಾರೆ. ‘ಕೊರಗಜ್ಜನ ದೇವಸ್ಥಾನಕ್ಕೆ ಹೋದಾಗ ತಾತನ ಹೆಸರು ಇಟ್ಟುಕೊಳ್ಳಿ ಎಂದು ಅರ್ಚಕರು ಸಲಹೆ ನೀಡಿದ್ದರು. ನನಗೂ ಸರಿ ಎನಿಸಿತು. ಅದಕ್ಕೆ ಒಂದು ಸಂದರ್ಭ ಬೇಕಿತ್ತು. ಈ ಸಿನಿಮಾ ಮೂಲಕ ಹೆಸರು ಬದಲಾಯಿಸಿಕೊಂಡಿದ್ದೇನೆ. ತಾತನ ಹೆಸರಿನ ಜೊತೆ ಮುಂದುವರಿಯುತ್ತೇನೆ. ಈ ಹೆಸರಿನಲ್ಲಿ ತೂಕ ಇದೆ, ಏಳಿಗೆ ಇದೆ. ಇದರಿಂದ ಪಾಸಿಟಿವ್ ಆಗಿ ಒಂದು ಹೊಸ ಅಧ್ಯಾಯ ಆರಂಭ ಆಗಿದೆ’ ಎಂದು ಧೀರೇನ್ ಅವರು ಹೇಳಿದ್ದಾರೆ.
View this post on Instagram
‘ಕೆಆರ್ಜಿ ಸ್ಟೂಡಿಯೋಸ್’ ಸಂಸ್ಥೆಯು ಧೀರೇನ್ ಅವರು ಹೊಸ ಹೆಸರಿನ ಮೂಲಕ ಮರುಪರಿಚಯಿಸುತ್ತಿದೆ. ಧೀರೇನ್ ಆರ್. ರಾಜ್ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಒಂದು ಹೊಸ ಸಿನಿಮಾವನ್ನು ಕೂಡ ‘ಕೆಆರ್ಜಿ ಸ್ಟುಡಿಯೋಸ್’ ಘೋಷಿಸಿದೆ. ಈ ಸಿನಿಮಾದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ಹೊರಬರಲಿದೆ. ಅದಕ್ಕಾಗಿ ಧೀರೇನ್ ಅವರ ಅಭಿಮಾನಿಗಳು ಕಾದಿದ್ದಾರೆ.
ಇದನ್ನೂ ಓದಿ: ಡಾ. ರಾಜ್ಕುಮಾರ್ ಹೇಳಿಕೊಟ್ಟ ಪಾಠ ಕಲಿಯಲೇ ಇಲ್ವಾ ಸ್ಯಾಂಡಲ್ವುಡ್ ನಟರು?
ಸ್ಯಾಂಡಲ್ವುಡ್ನಲ್ಲಿ ಹೊಸ ಪ್ರತಿಭೆಗಳಿಗೆ ‘ಕೆಆರ್ಜಿ ಸ್ಟುಡಿಯೋಸ್’ ಸಂಸ್ಥೆಯು ಅವಕಾಶ ನೀಡುವ ಉದ್ದೇಶ ಹೊಂದಿದೆ. ಅದಕ್ಕೆ ಒಂದಷ್ಟು ಉದಾಹರಣೆಗಳು ಕೂಡ ಸಿಗುತ್ತವೆ. ಇದೀಗ ಈ ನಿಟ್ಟಿನಲ್ಲಿ ಇನ್ನಷ್ಟು ಹೊಸ ಹೆಜ್ಜೆಗಳನ್ನು ಇಡುತ್ತಿದೆ. ಧೀರೇನ್ ಆರ್. ರಾಜ್ಕುಮಾರ್ ಅವರ ಜೊತೆಗೆ ‘ಕೆಆರ್ಜಿ ಸ್ಟುಡಿಯೋಸ್’ ಮಾಡಲಿರುವ ಹೊಸ ಸಿನಿಮಾ ಬಗ್ಗೆ ಕೌತುಕ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.