50 ದಿನ ಪೂರೈಸಿದ ಪೊಗರು! ಧ್ರುವ ಸರ್ಜಾ ನಟನೆಯ ಈ ಚಿತ್ರ ಮಾಡಿದ ಕಲೆಕ್ಷನ್​ ಎಷ್ಟು?

ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಈ ಚಿತ್ರ ತೆರೆಕಂಡಿತ್ತು. ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಅವರ ಖಾತೆಗೆ ಮತ್ತೊಂದು ಹಿಟ್​ ಸಿನಿಮಾ ಸೇರಿಕೊಂಡಂತಾಗಿದೆ.

  • TV9 Web Team
  • Published On - 8:42 AM, 9 Apr 2021
50 ದಿನ ಪೂರೈಸಿದ ಪೊಗರು! ಧ್ರುವ ಸರ್ಜಾ ನಟನೆಯ ಈ ಚಿತ್ರ ಮಾಡಿದ ಕಲೆಕ್ಷನ್​ ಎಷ್ಟು?
ಧ್ರುವ ಸರ್ಜಾ ಪೊಗರು

ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಅದಕ್ಕೆ ತಕ್ಕಂತೆಯೇ ಅದ್ದೂರಿಯಾಗಿ ಫೆ.19ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ನೋಡನೋಡುತ್ತಿದ್ದಂತೆಯೇ 50 ದಿನ ಕಳೆದು ಹೋಗಿದೆ. ಅವುಗಳ ಮಧ್ಯೆ ಇನ್ನೆರಡು ಬಿಗ್​ ಸ್ಟಾರ್​ ಸಿನಿಮಾಗಳು ಬಂದು ಧೂಳೆಬ್ಬಿಸಿವೆ. ಆರಂಭದಲ್ಲಿ ಭಾರಿ ಸದ್ದು ಮಾಡಿದ ಪೊಗರು ಚಿತ್ರ ನಂತರದಲ್ಲಿ ಕೊಂಚ ಡಲ್​ ಆಗಿದ್ದು ನಿಜ. ಅದಕ್ಕೆ ಕಾರಣಗಳು ಹಲವು. ಅದರ ನಡುವೆಯೂ ಪೊಗರುಗೆ ಉತ್ತಮ ಕಲೆಕ್ಷನ್​ ಆಗಿದೆ.

ಕೊರೊನಾ ಲಾಕ್​ಡೌನ್​ ಸಡಿಲಿಕೆ ನಂತರ ಸ್ಯಾಂಡಲ್​ವುಡ್​ನಲ್ಲಿ ಬಿಡುಗಡೆಯಾದ ಮೊದಲ ದೊಡ್ಡ ಸಿನಿಮಾ ಎಂದರೆ ಅದು ಪೊಗರು. ಈ ಚಿತ್ರದ ಕ್ರೇಜ್​ ಇಷ್ಟಿತ್ತು ಎಂದರೆ, ಕೊರೊನಾ ವೈರಸ್​ ಭೀತಿಯನ್ನೂ ಬದಿಗಿಟ್ಟು ಜನರು ಚಿತ್ರಮಂದಿರಕ್ಕೆ ಮುಗಿಬಿದ್ದರು. ಎಲ್ಲ ಕಡೆಗಳಲ್ಲಿ ಹೌಸ್​ ಪ್ರದರ್ಶನಗಳಾದವು. ಮೊದಲ ಮೂರು ದಿನವಂತೂ ಎಲ್ಲೆಲ್ಲೋ ಜಾತ್ರೆಯ ವಾತಾವರಣ ನಿರ್ಮಾಣ ಆಗಿತ್ತು. ಲಾಕ್​ಡೌನ್​ನಿಂದ ಸೊರಗಿದ್ದ ಕನ್ನಡ ಚಿತ್ರರಂಗ ಚೇತರಿಸಿಕೊಳ್ಳಲು ಪೊಗರು ಸಹಕಾರಿಯಾಯಿತು.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪೊಗರು ಚಿತ್ರ ವಿವಾದಕ್ಕೂ ಸಿಲುಕಿತು. ಈ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯದ ವಿರುದ್ಧ ಕೆಲವು ಆಕ್ಷೇಪಾರ್ಹ ದೃಶ್ಯಗಳಿವೆ ಎಂಬ ಆರೋಪ ಕೂಡ ಕೇಳಿಬಂತು. ಅದರಿಂದ ಚಿತ್ರಕ್ಕೆ ಸ್ವಲ್ಪ ಅಡೆಚಣೆ ಆಯಿತು. ನಂತರ ಆ ದೃಶ್ಯಗಳಿಗೆ ಕತ್ತರಿ ಹಾಕಬೇಕಾಯಿತು. ಇದೆಲ್ಲದರ ನಡುವೆ ಧ್ರುವ ಸರ್ಜಾ ಅಭಿಮಾನಿಗಳು ಈ ಚಿತ್ರವನ್ನು ಮುಗಿಬಿದ್ದು ನೋಡಿದರು.

ಮೊದಲ ಮೂರು ದಿನಕ್ಕೆ ಈ ಚಿತ್ರ 30 ಕೋಟಿ ರೂ. ಕಲೆಕ್ಷನ್​ ಮಾಡಿತು. 6 ದಿನಗಳಲ್ಲಿ 46 ಕೋಟಿ ರೂ. ಗಳಿಸಿರುವ ಬಗ್ಗೆ ಮಾಹಿತಿ ಕೇಳಿಬಂದಿತ್ತು. ಒಟ್ಟಾರೆಯಾಗಿ ಈ ಚಿತ್ರಕ್ಕೆ 50 ಕೋಟಿಗೂ ಹೆಚ್ಚು ಕಲೆಕ್ಷನ್​ ಆಗಿದೆ ಎನ್ನಲಾಗುತ್ತಿದೆ. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲೂ ಈ ಚಿತ್ರ ತೆರೆಕಂಡಿತ್ತು. ಈ ಚಿತ್ರ ತೆರೆಕಂಡಿತ್ತು. ಧ್ರುವ ಸರ್ಜಾಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದು, ಅವರ ಖಾತೆಗೆ ಮತ್ತೊಂದು ಹಿಟ್​ ಸಿನಿಮಾ ಸೇರಿಕೊಂಡಂತಾಗಿದೆ.

ರಾಬರ್ಟ್​ ಮತ್ತು ಯುವರತ್ನ ಸಿನಿಮಾಗಳು ಬಿಡುಗಡೆಯಾದ ಪರಿಣಾಮ ಪೊಗರು ಚಿತ್ರಕ್ಕೆ ಥಿಯೇಟರ್​ಗಳ ಸಂಖ್ಯೆ ಕಡಿಮೆ ಆಯಿತು. ಈಗ ಕೆಲವೇ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಅಷ್ಟರಲ್ಲಾಗಲೇ ಕಿರುತೆರೆಯಲಿ ಪ್ರಸಾರಕ್ಕೆ ಪೊಗರು ಸಜ್ಜಾಗಿದೆ. ಈ ಚಿತ್ರದ ಪ್ರಸಾರ ಹಕ್ಕುಗಳನ್ನು ಉದಯ ಟಿವಿ ಖರೀದಿಸಿದ್ದು, ಯುಗಾದಿ ಹಬ್ಬದ ಪ್ರಯುಕ್ತ ಏ.13ರಂದು ಪ್ರಸಾರ ಆಗಲಿದೆ. ಥಿಯೇಟರ್​ನಲ್ಲಿ ಈ ಚಿತ್ರವನ್ನು ಮಿಸ್​ ಮಾಡಿಕೊಂಡವರು ಮನೆಯಲ್ಲೇ ಕಣ್ತುಂಬಿಕೊಳ್ಳುವ ಚಾನ್ಸ್​ ಸಿಗುತ್ತಿದೆ. ನಂದಕಿಶೋರ್​ ನಿರ್ದೇಶನದ ಈ ಚಿತ್ರವನ್ನು ಬಿ.ಕೆ. ಗಂಗಾಧರ್​ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: Pogaru Movie Review: ಪೊಗರು ವಿಮರ್ಶೆ: ಫ್ಯಾನ್ಸ್​ ಖುಷಿಪಡಿಸಲು ಮತ್ತೆ ಮಾಸ್​ ಅವತಾರ ಎತ್ತಿದ ಧ್ರುವ ಸರ್ಜಾ

(Dhruva Sarja starrer Pogaru Kannada Movie completes 50 days here is box office collection report)