Diganth: ನಟ ದಿಗಂತ್ ಮಂಚಾಲೆ ಹುಟ್ಟುಹಬ್ಬ: ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದ ಪೋಸ್ಟರ್ ರಿಲೀಸ್
Diganth Birthday: ದಿಗಂತ್ ಅಭಿನಯದ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಹೊಸ ಪೋಸ್ಟರ್ ಬಿಡುಗಡೆ ಮಾಡಲಾಗಿದ್ದು, ಚಿತ್ರದ ಮೇಲಿನ ಹೈಪ್ ಹೆಚ್ಚಾಗಿದೆ.
ಖ್ಯಾತ ನಟ, ಅಭಿಮಾನಿಗಳ ನೆಚ್ಚಿನ ‘ದೂದ್ ಪೇಡ’ ದಿಗಂತ್ ಮಂಚಾಲೆ ಅವರು ಜನ್ಮದಿನದ (Diganth Birthday) ಸಂಭ್ರಮದಲ್ಲಿದ್ದಾರೆ. ಇಂದು (ಡಿ.28) ಅವರ ಬರ್ತ್ಡೇ ಆಚರಿಸಲಾಗಿದೆ. ಅದರ ಪ್ರಯುಕ್ತ ದಿಗಂತ್ ನಟಿಸುತ್ತಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರತಂಡ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ನಾಯಕ ನಟನಿಗೆ ಶುಭ ಕೋರಿದೆ. ದಿಗಂತ್ (Diganth) ಅವರು ಈವರೆಗೂ ಚಾಕೋಲೇಟ್ ಬಾಯ್, ರೊಮ್ಯಾಂಟಿಕ್ ಹೀರೋ ರೀತಿಯ ಪಾತ್ರಗಳನ್ನೇ ಹೆಚ್ಚಾಗಿ ಮಾಡಿಕೊಂಡು ಬಂದಿದ್ದಾರೆ. ಆದರೆ ‘ಎಡಗೈಯೇ ಅಪಘಾತಕ್ಕೆ ಕಾರಣ’ (Edagaiye Apaghatakke Karana) ಸಿನಿಮಾದಲ್ಲಿ ಅವರ ಇಮೇಜ್ ಸಂಪೂರ್ಣ ಡಿಫರೆಂಟ್ ಆಗಿರಲಿದೆ. ಇಲ್ಲಿ ದಿಗಂತ್ ಬೇರೆಯದೇ ರೀತಿಯಲ್ಲಿ ಕಾಣಸಿಗುತ್ತಾರೆ ಎಂದು ಚಿತ್ರತಂಡ ಹೇಳಿದೆ.
‘ದಿಗಂತ್ ಅವರ ಹುಟ್ಟುಹಬ್ಬಕ್ಕೆ ಭಿನ್ನವಾದಂತಹ ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡಬೇಕು ಅಂತ ಪ್ಲ್ಯಾನ್ ಮಾಡಿಕೊಂಡಿದ್ವಿ. ಅದರಂತೆ ಇಂದು ಅನಾವರಣ ಮಾಡಿದ್ದೇವೆ’ ಎಂದಿದ್ದಾರೆ ನಿರ್ದೇಶಕ ಸಮರ್ಥ್ ಬಿ. ಕಡಕೊಳ್. ‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರೀಕರಣ ಕೊನೆಯ ಹಂತದಲ್ಲಿದೆ. 2023ರ ಜನವರಿ ಕೊನೆ ವಾರದಲ್ಲಿ ಶೂಟಿಂಗ್ ಮುಕ್ತಾಯ ಆಗಲಿದೆ.
ಸಮರ್ಥ್ ಬಿ. ಕಡಕೊಳ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಸಿನಿಮಾ ಇದಾಗಿದೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಒಳಗೊಂಡ ಕಥಾಹಂದರ ಚಿತ್ರದಲ್ಲಿದೆ. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರವಿದು. ಆ ಮೂಲಕ ಕೌತುಕ ಮೂಡಿಸಿದೆ.
ಇದನ್ನೂ ಓದಿ: ದಿಗಂತ್-ಐಂದ್ರಿತಾ ಆಪ್ತ ಕ್ಷಣಗಳು ಫೋಟೋದಲ್ಲಿ ಸೆರೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ದಿಗಂತ್ ಅವರಿಗೆ ಜೋಡಿಯಾಗಿ ಹೊಸ ನಟಿ ಧನು ಹರ್ಷ ನಟಿಸುತ್ತಿದ್ದು, ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಕೂಡ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಹೈಫನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಬಿ. ಕಡಕೊಳ್ ಅವರು ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.
ಇದನ್ನೂ ಓದಿ: ದಿಗಂತ್ ಖಾಸಗಿ ಜೀವನದ ಬಗ್ಗೆ ಜನ ಗೂಗಲ್ನಲ್ಲಿ ಹುಡುಕಿದ ಪ್ರಶ್ನೆಗಳಿಗೆ ಅವರೇ ಕೊಟ್ರು ನೇರ ಉತ್ತರ
ಈಗಾಗಲೇ ಶೇಕಡ 90ರಷ್ಟು ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೂಡ ಚುರುಕಿನಿಂದ ಸಾಗುತ್ತಿವೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳ್ ಅವರು ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ರಾಹುಲ್ ವಿ. ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಬರೆದಿದ್ದಾರೆ.
ದಿಗಂತ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಡಿಫರೆಂಟ್ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಆ ಪೈಕಿ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಹೊಸ ಪೋಸ್ಟರ್ ಬಿಡುಗಡೆ ಬಳಿಕ ಹೈಪ್ ಹೆಚ್ಚಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.