ದರ್ಶನ್ಗೆ ಶೂರಿಟಿ ಕೊಟ್ಟ ಸಹೋದರರು, ಕಟ್ಟಿದ ಹಣವೆಷ್ಟು?
ದರ್ಶನ್ ತೂಗುದೀಪಗೆ ಕರ್ನಾಟಕ ರಾಜ್ಯ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ. ಕುಟುಂಬದವರು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ದರ್ಶಣ್ ಅನ್ನು ಇಂದೇ ಜೈಲಿನಿಂದ ಹೊರತರುವ ಪ್ರಯತ್ನದಲ್ಲಿದ್ದಾರೆ. ಅಂದಹಾಗೆ ದರ್ಶನ್ರ ಇಬ್ಬರು ಸಹೋದರರು ಶೂರಿಟಿ ನೀಡಿದ್ದಾರೆ.
ನಟ ದರ್ಶನ್ಗೆ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್ಗಿರುವ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಚಿಕಿತ್ಸೆಗಾಗಿ ಜಾಮೀನು ನೀಡಲಾಗಿದ್ದು, ಆರು ವಾರಗಳಿಗೆ ಜಾಮೀನು ಅವಧಿ ಮುಕ್ತಾಯವಾಗಲಿದೆ. ಮಧ್ಯಂತರ ಜಾಮೀನು ಆದೇಶ ಇಂದು ಬೆಳಿಗ್ಗೆ ಹೊರಬಿದ್ದಿದ್ದು, ಇಂದೇ ದರ್ಶನ್ ಅನ್ನು ಬಳ್ಳಾರಿ ಜೈಲಿನಿಂದ ಹೊರಗೆ ತರಲು ಪ್ರಯತ್ನಿಸಲಾಗುತ್ತಿದೆ. ಸೆಷನ್ಸ್ ಕೋರ್ಟ್ ಸೂಚನೆಯಂತೆ ಜಾಮೀನು ಪ್ರತಿಯ್ನು ಇ-ಮೇಲ್ ಮೂಲಕ ಬಳ್ಳಾರಿ ಜೈಲಿಗೆ ಕಳಿಸಲಾಗಿದೆ. ಇದರ ಜೊತೆಗೆ ಹೈಕೋರ್ಟ್ ವಿಧಿಸಿರುವ ಷರತ್ತುಗಳನ್ನು ಸಹ ಬೇಗನೆ ಪೂರೈಸಲಾಗಿದೆ.
ಜಾಮೀನು ಪಡೆಯಲು ಕೆಲ ವ್ಯಕ್ತಿಗಳು ಶೂರಿಟಿ ನೀಡುವ ಜೊತೆಗೆ ನಿಗದಿತ ಹಣವನ್ನು ಡೆಪಾಸಿಟ್ ಇಡಬೇಕಾಗುತ್ತದೆ. ಈ ಕಾರ್ಯವನ್ನು ದರ್ಶನ್ರ ಸ್ವಂತ ಸಹೋದರ ದಿನಕರ್ ತೂಗುದೀಪ್ ಹಾಗೂ ಸಹೋದರನಂತಿರುವ ಧನ್ವೀರ್ ಗೌಡ ಮಾಡಿದರು. ದಿನಕರ್ ತೂಗುದೀಪ್ ಮತ್ತು ಧನ್ವೀರ್ ಗೌಡ ಅವರುಗಳು ದರ್ಶನ್ಗೆ ಜಾಮೀನಿಗೆ ಶೂರಿಟಿ ಹಾಕಿದರಲ್ಲದೆ, ನಿಯಮದಂತೆ ಎರಡು ಲಕ್ಷ ರೂಪಾಯಿ ಹಣವನ್ನು ಡೆಪಾಸಿಟ್ ಸಹ ಮಾಡಿದ್ದಾರೆ. ಅಲ್ಲದೆ ಸೆಷನ್ಸ್ ನ್ಯಾಯಾಲಯದಲ್ಲಿ ಪಾಸ್ಪೋರ್ಟ್ ಅನ್ನು ವಶಕ್ಕೆ ನೀಡಿದ್ದಾರೆ.
ಮಧ್ಯಂತರ ಜಾಮೀನು ನೀಡಿರುವ ಹೈಕೋರ್ಟ್ ಕೆಲವು ಷರತ್ತುಗಳನ್ನು ಸಹ ವಿಧಿಸಿದೆ. ಒಂದು ವಾರದಲ್ಲಿ ವೈದ್ಯಕೀಯ ವರದಿ, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ, ಯಾವ ರೀತಿಯ ಚಿಕಿತ್ಸೆ ಇತ್ಯಾದಿ ಮಾಹಿತಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಯಾವುದೇ ಸಾಕ್ಷ್ಯಗಳನ್ನು ಸಂಪರ್ಕ ಮಾಡಬಾರದು. ಯಾವುದೇ ಸಾಕ್ಷಿಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆದರಿಕೆ ಹಾಕಬಾರದು. ಸಾಕ್ಷ್ಯಗಳನ್ನು ನಾಶ ಮಾಡುವ ಪ್ರಯತ್ನ ಮಾಡಬಾರದು. ಜಾಮೀನು ನೀಡಿರುವ ಉದ್ದೇಶದ ಹೊರತಾಗಿ ಬೇರೆ ಕಾರ್ಯಕ್ಕೆ ಬಳಸಬಾರದು ಅಂದರೆ ಜಾಮೀನಿನ ದುರುಪಯೋಗಪಡಿಸಿಕೊಳ್ಳಬಾರದು. ಪಾಸ್ಪೋರ್ಟ್ ಸರೆಂಡರ್ ಮಾಡಬೇಕು ಇವೇ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.
ಇದನ್ನೂ ಓದಿ:Viral: ನಮ್ ಬಾಸ್ ರಿಲೀಸೋ.. ದೇವ್ರು ರಿಲೀಸ್ ಆಗ್ಬಿರ್ಟ್ರು ಕಣ್ರಲೇ!ವೈರಲ್ ಆಗ್ತಿದೆ ದರ್ಶನ್ ಮೀಮ್ಸ್
ಇದೀಗ ದಿನಕರ್ ಹಾಗೂ ಧನ್ವೀರ್ ಅವರುಗಳು ಶೂರಿಟಿ ಪ್ರಕ್ರಿಯೆ ಮುಗಿಸಿದ್ದಾರೆ. ಇದೀಗ ಇ-ಮೇಲ್ ಮೂಲಕ ಜಾಮೀನು ಪತ್ರ ಬಳ್ಳಾರಿ ಜೈಲು ತಲುಪಿದೆ. ಅಂಚೆ ಮೂಲಕವೂ ಬಳ್ಳಾರಿಗೆ ಜಾಮೀನು ಆದೇಶವನ್ನು ತಲುಪಿಸುವಂತೆ ಸೂಚಿಸಲಾಗಿದೆ. ಈಗಾಗಲೇ ವಿಜಯಲಕ್ಷ್ಮಿ ಅವರು ಬಳ್ಳಾರಿ ಜೈಲಿಗೆ ಭೇಟಿ ನೀಡಿದ್ದು ದರ್ಶನ್ ಅನ್ನು ಭೇಟಿಯಾಗಿ, ಮನೆಗೆ ಹೊರಡಲು ತಯಾರಾಗಿರುವಂತೆ ಸೂಚಿಸಿದ್ದಾರೆ. ಜೊತೆಗೆ ದರ್ಶನ್ ಅನ್ನು ಹೇಗೆ ಮನೆಗೆ ಕರೆದುಕೊಂಡು ಹೋಗಬೇಕು ಎಂಬ ಬಗ್ಗೆಯೂ ಚರ್ಚೆಗಳನ್ನು ಮಾಡಿಕೊಂಡಿದ್ದಾರೆ. ಇಂದು ಸಂಜೆ ವೇಳೆಗೆ ದರ್ಶನ್ ಬಳ್ಳಾರಿ ಜೈಲಿನಿಂದ ಮನೆಯತ್ತ ಹೋಗಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ