ಆದೇಶ ಧಿಕ್ಕರಿಸಿದ ಜಮೀರ್ ಪುತ್ರನ ಸಿನಿಮಾಕ್ಕೆ ಸರ್ಕಾರ ಶಾಕ್, ಚಿತ್ರೀಕರಣಕ್ಕೆ ತಡೆ
Cult Movie: ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ‘ಕಲ್ಟ್’ ಹೆಸರಿನ ಹೊಸ ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾಕ್ಕೆ ಆರಂಭದಿಂದಲೂ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ಇದೀಗ ‘ಕಲ್ಟ್’ ಸಿನಿಮಾ ಬಂದ್ ಮಾಡುವಂತೆ ಅರಣ್ಯ ಇಲಾಖೆ ನೊಟೀಸ್ ನೀಡಿದ್ದು, ಅದರಂತೆ ಚಿತ್ರೀಕರಣ ಬಂದ್ ಆಗಿದೆ.

ಸಚಿವ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ರ ಹೊಸ ಸಿನಿಮಾ ‘ಕಲ್ಟ್’ಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಈ ಹಿಂದೆ ಚಿತ್ರೀಕರಣದ ವೇಳೆ ದುಬಾರಿ ಡ್ರೋನ್ ಮುರಿದು, ಡ್ರೋನ್ ಮಾಲೀಕ ಆತ್ಮಹತ್ಯೆಗೆ ಮುಂದಾಗಿ ದೊಡ್ಡ ವಿವಾದವೇ ಆಗಿತ್ತು. ಕೊನೆಗೆ ಝೈದ್ ಖಾನ್, ತಮ್ಮ ಕೈಯಿಂದ ಹಣ ಕೊಟ್ಟು ಯುವಕನಿಗೆ ಸಹಾಯ ಮಾಡಿದ್ದರು. ಇದೀಗ ಇದೇ ಸಿನಿಮಾಕ್ಕೆ ರಾಜ್ಯ ಸರ್ಕಾರ ಶಾಕ್ ಕೊಟ್ಟಿದೆ. ಸಿನಿಮಾದ ಚಿತ್ರೀಕರಣವನ್ನೇ ಬಂದ್ ಮಾಡಿಸಲಾಗಿದೆ.
ಯಾವುದೇ ಸಿನಿಮಾಗಳ ಹೊರಾಂಗಣ ಚಿತ್ರೀಕರಣ ಮಾಡುವ ಮುನ್ನ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ನಿಯಮ ಈಗಾಗಲೇ ಇದೆ. ಅಲ್ಲದೆ ಇತ್ತೀಚೆಗೆ ಕೆಲ ಸಿನಿಮಾಗಳ ಚಿತ್ರೀಕರಣದ ವೇಳೆ ಅರಣ್ಯ ನಾಶದ ಆರೋಪವೂ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಈ ನಿಯಮವನ್ನು ಇನ್ನಷ್ಟು ಕಠಿಣಗೊಳಿಸಿ ಶಿಸ್ತಿನಿಂದ ಜಾರಿಗೊಳಿಸಲಾಗುತ್ತಿದೆ. ಇತ್ತೀಚೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಸಹ ಯಾವುದೇ ಸಿನಿಮಾಗಳು ಅರಣ್ಯ ಪ್ರದೇಶ ಅಥವಾ ಯಾವುದೇ ಸಂರಕ್ಷಿತ ಪ್ರದೇಶದಲ್ಲಿ ಚಿತ್ರೀಕರಣಕ್ಕೆ ಮುಂದಾದಾಗ ಖಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದಿದ್ದರು.
ಇದನ್ನೂ ಓದಿ:‘ಖಾಲಿ ಪೇಪರ್ಗೆ ಸಹಿ ಹಾಕಿಸಿಕೊಂಡ್ರು’; ಇದೇನಾ ಝೈದ್ ಖಾನ್ ಅಸಲಿ ಮುಖ?
ಆದರೆ ಝೈದ್ ಖಾನ್ ನಟಿಸುತ್ತಿರುವ ‘ಕಲ್ಟ್’ ಸಿನಿಮಾ ತಂಡವು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಸಾಣಾಪುರ, ರಂಗಾಪುರ ಬಳಿ ಚಿತ್ರೀಕರಣಕ್ಕೆ ಮುಂದಾಗಿತ್ತು. ಆದರೆ ಚಿತ್ರತಂಡ ಸೂಕ್ತ ಅನುಮತಿಯನ್ನು ಪಡೆದಿರಲಿಲ್ಲವಾದ್ದರಿಂದ ಸ್ಥಳೀಯ ಅರಣ್ಯ ಅಧಿಕಾರಿಗಳು ಚಿತ್ರೀಕರಣ ತಂಡಕ್ಕೆ ನೊಟೀಸ್ ನೀಡಿದೆ. ಚಿತ್ರೀಕರಣವನ್ನು ಬಂದ್ ಮಾಡುವಂತೆ ಸೂಚಿಸಿದೆ. ಅದರಂತೆಯೇ ‘ಕಲ್ಟ್’ ಸಿನಿಮಾದ ಚಿತ್ರೀಕರಣಕ್ಕೆ ತಡೆ ನೀಡಲಾಗಿದೆ.
ಈ ಮೊದಲು ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ತಂಡವು ಬೆಂಗಳೂರಿನ ಹೊರವಲಯದ ಎಚ್ಎಂಟಿ ಗ್ರೌಂಡ್ ಬಳಿ ಚಿತ್ರೀಕರಣ ನಡೆಸುವಾಗ ಅಲ್ಲಿನ ಮರಗಳನ್ನು ನಾಶಪಡಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಖುದ್ದು ಅರಣ್ಯ ಸಚಿವರೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅದಾದ ಬಳಿಕ ಇತ್ತೀಚೆಗೆ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಕಾಂತಾರ’ ಚಿತ್ರತಂಡ ಅರಣ್ಯದಲ್ಲಿ ಶೂಟಿಂಗ್ ಮಾಡುವ ವೇಳೆ ಬೆಂಕಿ ಬಳಸಿ ಅರಣ್ಯಕ್ಕೆ ಹಾನಿ ಮಾಡಿದೆ ಎಂಬ ಆರೋಪ ಎದುರಾಗಿದ್ದು, ಈ ಸಂಬಂಧ ಚಿತ್ರತಂಡ ನೊಟೀಸ್ ನೀಡಲಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:53 am, Fri, 31 January 25