ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರ ನೇಮಿಸಿ ಆದೇಶ, ಇಲ್ಲಿದೆ ಪಟ್ಟಿ
ಕರ್ನಾಟಕದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಕರ್ನಾಟಕ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಘೋಷಣೆ ಮಾಡಿದೆ. ಇನ್ನೂ ಕೆಲವು ಅಕಾಡೆಮಿಗಳಿಗೆ ಸದಸ್ಯರು, ಹೆಚ್ಚುವರಿ ಸದಸ್ಯರನ್ನು ನೇಮಕ ಮಾಡಿದೆ.
ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಆದೇಶ ಹೊರಡಿಸಿದ್ದಾರೆ. ರಾಜ್ಯದ ಕೆಲವು ಅಕಾಡೆಮಿಗಳಿಗೆ ನೇಮಕವಾಗಿದ್ದ ಕೆಲ ಸದಸ್ಯರು ಬಿಡುಗಡೆ ಕೋರಿದ್ದರು, ಅವರನ್ನು ಅವರ ಇಚ್ಛೆಯಂತೆ ಸ್ಥಾನದಿಂದ ವಜಾ ಮಾಡಿರುವ ಜೊತೆಗೆ ರಾಜ್ಯದ ಆರು ರಂಗಾಯಣಗಳಿಗೆ ನಿರ್ದೇಶಕರನ್ನು ನೇಮಕ ಮಾಡಿ ಘೋಷಣೆ ಮಾಡಲಾಗಿದೆ.
ಮೈಸೂರು ರಂಗಾಯಣದ ನಿರ್ದೇಶಕರಾಗಿ ಶ್ರೀ ಸತೀಶ್ ತಿಪಟೂರು ಅವರನ್ನು ನೇಮಿಸಲಾಗಿದೆ. ಧಾರವಾಡ ರಂಗಾಯಣದ ನಿರ್ದೇಶಕರಾಗಿ ಶ್ರೀ ರಾಜು ತಾಳಿಕೋಟೆ ಅವರನ್ನು ನೇಮಿಸಲಾಗಿದೆ. ಶಿವಮೊಗ್ಗ ರಂಗಾಯಣದ ನಿರ್ದೇಶಕರಾಗಿ ಶ್ರೀ ಪ್ರಸನ್ನ ಡಿ ಸಾಗರ ಅವರನ್ನು ನೇಮಿಸಲಾಗಿದೆ. ಕಲಬುರ್ಗಿ ರಂಗಾಯಣದ ನಿರ್ದೇಶಕರಾಗಿ ಡಾ. ಸುಜಾತ ಜಂಗಮ ಶೆಟ್ಟಿ ಅವರನ್ನು ನೇಮಿಸಲಾಗಿದೆ. ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ಗೆ ನಿರ್ದೇಶಕರಾಗಿ ಶ್ರೀ ಮಲ್ಲಿಕಾರ್ಜುನ ಕಡಕೋಳ ಅವರನ್ನು ನೇಮಕ ಮಾಡಲಾಗಿದೆ. ಯಕ್ಷರಂಗಾಯಣ, ಕಾರ್ಕಳದ ನಿರ್ದೇಶಕರಾಗಿ ಶ್ರೀ ವೆಂಕಟರಮಣ ಐತಾಳ ಇವರನ್ನು ನೇಮಕ ಮಾಡಲಾಗಿದೆ.
ಈ ಸಂಬಂಧ ಅಧಿಕೃತ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ, ಮುಂದಿನ ಮೂರು ವರ್ಷಗಳ ಕಾಲ ಅಥವಾ ಮುಂದಿನ ಆದೇಶದ ವರೆಗೆ ಇವರುಗಳು ಆಯಾ ರಂಗಾಯಣದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ನಿರ್ದೇಶಕರು ಅಧಿಕಾರ ವಹಿಸಿಕೊಂಡ ಕೂಡಲೇ ರಂಗಾಯಣಗಳ ಕಾರ್ಯ ಚಟುವಟಿಕೆಗಳನ್ನು ವೇಗಗತಿಯಲ್ಲಿ ಕೈಗೊಳ್ಳಲು ಹಾಗೂ ರಂಗಭೂಮಿಯ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ. ಇದಲ್ಲದೆ ವಿವಿಧ ಅಕಾಡೆಮಿಗಳಲ್ಲಿ ಖಾಲಿ ಇದ್ದ ಸದಸ್ಯರ ನೇಮಕಾತಿ ಆದೇಶವನ್ನು ಸಹ ಹೊರಡಿಸಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಇದನ್ನೂ ಓದಿ:Kolkata Doctor Murder Case: ಸೇವೆ ಸ್ಥಗಿತಗೊಳಿಸಿ ಕರ್ನಾಟಕ ಜೂನಿಯರ್ ವೈದ್ಯರ ಪ್ರತಿಭಟನೆ
ಕೆಲವು ಅಕಾಡೆಮಿಗಳಿಗೆ ಹೊಸ ಸದಸ್ಯರ ನೇಮಕಾತಿಯನ್ನು ಸಹ ಮಾಡಲಾಗಿದೆ. ಅದರ ಪಟ್ಟಿ ಇಂತಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ಅಕ್ಷತಾ ಎಂ ನಾಯಕ್, ಕರ್ನಾಟಕ ರಾಜ್ಯ ಅರಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ವಿನೋದ್ ಮೂಡಗದ್ದೆ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ಕೊಪ್ಪಳದ ರಾಘವೇಂದ್ರ ಕಿನ್ನಾಳ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ ಚನ್ನಪಟ್ಟಣದ ಶಿವಪ್ರಸಾದ, ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿ ಎಚ್ಎಸ್ ಮಂಜುನಾಥ, ಕರ್ನಾಟಕ ಬಯಲಾಟ ಅಕಾಡೆಮಿ ಹೆಚ್ಚುವರಿ ಸದಸ್ಯರಾಗಿ ಲಕ್ಷ್ಮಣ ಹಣಮಂತ ದೇಸಾರಟ್ಟಿ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ