ವೀಕೆಂಡ್ನಲ್ಲಿ ‘ಭೀಮ’ ಚಿತ್ರಕ್ಕೆ ಉತ್ತಮ ಕಲೆಕ್ಷನ್; ಒಟ್ಟೂ ಗಳಿಕೆ ಎಷ್ಟು?
Bheema Movie Collection: ದುನಿಯಾ ವಿಜಯ್ ನಟನೆಯ ‘ಭೀಮ’ ಸಿನಿಮಾ ಆಗಸ್ಟ್ 09ರಂದು ರಾಜ್ಯದಾದ್ಯಂತ ಬಿಡುಗಡೆ ಆಗಿದೆ. ಮಾದಕ ವಸ್ತುವಿನ ಪ್ರಸಾರ ಹಾಗೂ ಅದರ ಪರಿಣಾಮ ಯುವಕರ ಮೇಲೆ ಹೇಗೆ ಆಗುತ್ತಿದೆ ಎಂಬ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ.
‘ಭೀಮ’ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಯಿತು. ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶಿಸಿರುವ ಸಿನಿಮಾ ಇದು. ಈ ಕಾರಣಕ್ಕೆ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಸಾಕಷ್ಟು ರಾ ಆಗಿ ಸಿನಿಮಾ ಮೂಡಿ ಬಂದಿದೆ ಎಂಬುದು ಹಲವರ ಅಭಿಪ್ರಾಯ. ಈ ಸಿನಿಮಾದ ಮೂರು ದಿನದ ಗಳಿಕೆ 10 ಕೋಟಿ ರೂಪಾಯಿ ದಾಟಿದೆ ಎಂದು ಬಾಕ್ಸ್ ಆಫೀಸ್ ಬಗ್ಗೆ ಲೆಕ್ಕ ಕೊಡುವ sacnilk ವರದಿ ಮಾಡಿದೆ. ಇದು ನಿರ್ಮಾಪಕರ ಮೊಗದಲ್ಲಿ ನಗು ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡದ ಯಾವುದೇ ಚಿತ್ರಗಳು ಗೆದ್ದು ಬೀಗಿರಲಿಲ್ಲ. ಈಗ ‘ಭೀಮ’ ಚಿತ್ರದಿಂದ ಸಿನಿಮಾ ಮಂದಿರಗಳಿಗೆ ಕಳೆ ಬಂದಿದೆ.
‘ಭೀಮ’ ಸಿನಿಮಾದಲ್ಲಿ ಸಮಾಜಕ್ಕೆ ಸಂದೇಶ ಸಾರುವ ಕಥೆ ಇಡಲಾಗಿದೆ. ಬೆಂಗಳೂರಲ್ಲಿ ನಡೆಯೋ ಮಾದಕವಸ್ತು ದಂಧೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆಗಿದೆ. ಇದಕ್ಕೆ ದುನಿಯಾ ವಿಜಯ್ ಆಯ್ಕೆ ಮಾಡಿಕೊಂಡ ಭಾಷೆ ಸಖತ್ ರಗಡ್. ಈಗ ‘ಭೀಮ’ ಸಿನಿಮಾ ಮೂರು ದಿನಕ್ಕೆ 11.15 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ವರದಿ ಆಗಿದೆ.
ಮೊದಲ ದಿನ ‘ಭೀಮ’ ಚಿತ್ರ 3.95 ಕೋಟಿ ರೂಪಾಯಿ ಬಾಚಿಕೊಂಡಿತು. ಎರಡನೇ ದಿನ 3.4 ಕೋಟಿ ರೂಪಾಯಿ ಹಾಗೂ ಭಾನುವಾರ 3.80 ಕೋಟಿ ರೂಪಾಯಿ ಸಿನಿಮಾ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 11.15 ಕೋಟಿ ರೂಪಾಯಿ ಆಗಿದೆ. ಇದು ಚಿತ್ರತಂಡದ ಖುಷಿ ಹೆಚ್ಚಿಸಿದೆ. ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಕಲೆಕ್ಷನ್ ಮಾಡಲಿ ಎಂದು ಫ್ಯಾನ್ಸ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮೊದಲ ದಿನದ ಗಳಿಕೆಯಲ್ಲಿ ‘ಭೀಮ’ನ ಅಬ್ಬರ; ಸ್ಯಾಂಡಲ್ವುಡ್ಗೆ ಹೊಸ ಕಳೆ
ಆದರೆ, ಮುಂಬರುವ ದಿನಗಳು ಮತ್ತಷ್ಟು ಚಾಲೆಂಜಿಂಗ್ ಎನಿಸಿಕೊಂಡಿವೆ. ಅದಕ್ಕೆ ಕಾರಣವೂ ಇದೆ. ಆಗಸ್ಟ್ 15ರ ಪ್ರಯುಕ್ತ ಈ ಗುರುವಾರ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಹೀಗಾಗಿ, ದೊಡ್ಡ ಮಟ್ಟದ ಸ್ಪರ್ಧೆ ಸಿನಿಮಾಗೆ ಏರ್ಪಡಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:58 am, Mon, 12 August 24