‘ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ದೇವರು ಶಕ್ತಿ ನೀಡಲಿ’: ಇಂದ್ರಜಿತ್​ ಲಂಕೇಶ್​

|

Updated on: Jun 13, 2024 | 2:56 PM

ರೇಣುಕಾ ಸ್ವಾಮಿಯ ಕೊಲೆ ಆರೋಪದಲ್ಲಿ ನಟ ದರ್ಶನ್​, ನಟಿ ಪವಿತ್ರಾ ಗೌಡ ಮುಂತಾದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ಪ್ರಕರಣದ ಕುರಿತಂತೆ ಕೆಲವು ಸೆಲೆಬ್ರಿಟಿಗಳು ಪ್ರತಿಕ್ರಿಯೆ ನೀಡುತ್ತಿದ್ದಾರೆ. ‘ಗೌರಿ’ ಸಿನಿಮಾದ ಸಾಂಗ್​ ರಿಲೀಸ್​ ವೇಳೆ ನಿರ್ದೇಶಕ ಇಂದ್ರಜಿತ್​ ಲಂಕೇಶ್​ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಸೋಶಿಯಲ್​ ಮೀಡಿಯಾದ ದುರ್ಬಳಕೆ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

‘ವಿಜಯಲಕ್ಷ್ಮಿ ಹಾಗೂ ಅವರ ಮಗನಿಗೆ ದೇವರು ಶಕ್ತಿ ನೀಡಲಿ’: ಇಂದ್ರಜಿತ್​ ಲಂಕೇಶ್​
ದರ್ಶನ್​​, ಇಂದ್ರಜಿತ್​ ಲಂಕೇಶ್​
Follow us on

ಇಂದ್ರಜಿತ್​ ಲಂಕೇಶ್​ (Indrajit Lankesh) ಅವರ ಪುತ್ರ ಸಮರ್ಜಿತ್ ಲಂಕೇಶ್ ನಟನೆಯ ‘ಗೌರಿ’ ಸಿನಿಮಾ (Gowri Movie) ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಸಾನ್ಯಾ ಅಯ್ಯರ್ ಅಭಿನಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಚಿತ್ರದ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈ ವೇಳೆ ನಿರ್ದೇಶಕ ಇಂದ್ರಜಿತ್ ಮಾತನಾಡಿದರು. ಇದೇ ವೇದಿಕೆಯಲ್ಲಿ ನಟ ದರ್ಶನ್ (Darshan) ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಇಂದ್ರಜಿತ್ ಅವರು, ‘ಈ ಕೇಸ್ ಬಗ್ಗೆ ನಾನು ಈಗ ಏನ್ನೂ ಹೇಳುವುದಿಲ್ಲ. ತನಿಖೆ ನಡೆಯುತ್ತಿದೆ. ಶಿವಮೊಗ್ಗದಲ್ಲಿ ನಾನು ಏನೂ ಮಾತಾಡಿಲ್ಲ. ನನ್ನ ತಂದೆ ಹುಟ್ಟಿದ ಸ್ಥಳ ಅದು’ ಎಂದು ಅವರು ಹೇಳಿದರು.

‘ದರ್ಶನ್ ಅವರಿಗೆ ನಾನು ಯಾಕೆ ಟಾಂಗ್ ನೀಡಲಿ? ಬಸವಣ್ಣನ ವಚನ ಹೇಳಿದ್ದೇನೆ ಅಷ್ಟೇ. ದರ್ಶನ್​ ಜೊತೆ ನಾನು ಸಿನಿಮಾ ಮಾಡಿದ್ದೇನೆ. ಪತ್ರಕರ್ತನಾಗಿ ನಾನು ಕೆಲವು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದೇನೆ ಅಷ್ಟೆ. ಅದನ್ನು ಹೊರತುಪಡಿಸಿ ನಮ್ಮ ನಡುವೆ ಏನೂ ಇಲ್ಲ. ಅನ್ಯಾಯ ಆದಾಗ ಧ್ವನಿ ಎತ್ತುವುದನ್ನು ನಾನು ನನ್ನ ತಂದೆ ಲಂಕೇಶ್ ಅವರಿಂದ ಕಲಿತ್ತದ್ದು. ಕೊಲೆಯಾದ ರೇಣುಕಾ ಸ್ವಾಮಿ ಕುಟುಂಬದವರಿಗೆ ನ್ಯಾಯ ಸಿಗಬೇಕು. ವಿಜಯಲಕ್ಷ್ಮಿ ಮತ್ತು ಅವರ ಮಗನಿಗೆ ದೇವರು ಶಕ್ತಿ ಕೊಡಲಿ’ ಎಂದಿದ್ದಾರೆ ಇಂದ್ರಜಿತ್​ ಲಂಕೇಶ್​.

ಸೋಶಿಯಲ್​ ಮೀಡಿಯಾ ಬಳಕೆ ಬಗ್ಗೆ ಇಂದ್ರಜಿತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಾಮಾಜಿಕ ಜಾಲತಾಣ ಅದ್ಭುತ ಮಾಧ್ಯಮ. ಆದರೆ ಅದು ಬಹಳ ಕೆಟ್ಟದಾಗಿ ಬಳಕೆ ಆಗುತ್ತಿದೆ’ ಎಂದಿರುವ ಅವರು ಸರ್ಕಾರ ಮತ್ತು ಸೈಬರ್ ಕ್ರೈಂ ವಿಭಾಗದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸೂಕ್ತ ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಕೊಲೆ ಕೇಸ್​ನಲ್ಲೂ ದರ್ಶನ್​ಗೆ ಫ್ಯಾನ್ಸ್​ ಬೆಂಬಲ ನೀಡೋದು ಯಾಕೆ? ಉತ್ತರಿಸಿದ ಉಮಾಶ್ರೀ

‘ಯುವ ಜನತೆ ಹಾಳಾಗುತ್ತಿದೆ. ಇತ್ತೀಚಿಗಷ್ಟೇ ಎಸ್​ಎಸ್ಎಲ್‌ಸಿಯಲ್ಲಿ ರ‍್ಯಾಂಕ್ ಬಂದ ಹುಡುಗಿಯನ್ನು ಆಡಿಕೊಳ್ಳಲಾಯಿತು. ಆಕೆಯ ರೂಪದ ಜನರು ಬಗ್ಗೆ ಕೆಟ್ಟ ಕಮೆಂಟ್ ಮಾಡಿದರು. ನಾವು ಇಂಥ ದುರಂತದ ಸ್ಥಿತಿಯಲ್ಲಿ ಇದ್ದೀವಿ. ಸಾಮಾಜಿಕ ಜಾಲತಾಣದಿಂದಲೇ ಹಲವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿ, ಮಂತ್ರಿಗಳ ಮನೆಯಲ್ಲಿ ಈ ರೀತಿ ಆದಾಗ ಗೊತ್ತಾಗುತ್ತೆ. ಶೀಘ್ರದಲ್ಲಿ ಇದರ ಬಗ್ಗೆ ಆ್ಯಕ್ಷನ್ ತೆಗೆದುಕೊಳ್ಳಬೇಕು. ನಾನು ಕೂಡ ಇದರ ವಿರುದ್ಧ ಹೋರಾಟ ಮಾಡ್ತೀನಿ’ ಎಂದು ಹುಬ್ಬಳಿಯಲ್ಲಿ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

‘ಗೌರಿ’ ಸಿನಿಮಾ ಕುರಿತು:

‘ನನ್ನ ಮಗ ಸಮರ್ಜಿತ್ ಮತ್ತು ಸಾನ್ಯಾ ಅಯ್ಯರ್​ಗೆ ಇದು ಮೊದಲ ಸಿನಿಮಾ ಆಗಿದ್ದು, ಉತ್ತಮವಾಗಿ ಮೂಡಿಬಂದಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಚಿತ್ರೀಕರಣ ಮಾಡಲಾಗಿದೆ. ಅಕ್ಕ ಗೌರಿಯ ಸಿದ್ಧಾಂತ ಇದರಲ್ಲಿ ಇಲ್ಲ. ಇದು ಗೌರಿಯ ಕಥೆಯೂ ಅಲ್ಲ. ಅಕ್ಕನ ಮೇಲಿನ ಅಭಿಮಾನದಿಂದ ಸಿನಿಮಾಗೆ ಆಕೆಯ ಹೆಸರು ಇಟ್ಟಿದ್ದೇನೆ’ ಎಂದು ಇಂದ್ರಜಿತ್​ ಲಂಕೇಶ್​ ಹೇಳಿದರು. ಲೂಸ್ ಮಾದ ಯೋಗಿ, ಅಕುಲ್ ಬಾಲಾಜಿ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾ ನಟಿಸಿದ್ದಾರೆ. ಜುಲೈನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.