Bisilu Kudure Movie: ಎರಡು ಇಲಾಖೆ ನಡುವೆ ಸಿಕ್ಕು ಹೈರಾಣಾದ ರೈತ; ಮನ ಕಲಕುವ ‘ಬಿಸಿಲು ಕುದುರೆ’ ಚಿತ್ರ ಏ.21ಕ್ಕೆ ಬಿಡುಗಡೆ
ಕನ್ನಡ ಚಿತ್ರರಂಗದಲ್ಲಿ ಹೃದಯ ಶಿವ ಅವರು ಗೀತರಚನಕಾರನಾಗಿ ಗುರುತಿಸಿಕೊಂಡಿದ್ದಾರೆ. ಅವರ ನಿರ್ದೇಶನದಲ್ಲಿ ‘ಬಿಸಿಲು ಕುದುರೆ’ ಸಿನಿಮಾ ಮೂಡಿಬಂದಿದೆ.
ಒಂದೆಡೆ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ಇದೆ. ಇನ್ನೊಂದೆಡೆ ದೇಸಿ ಕಥೆಗಳ ಸಣ್ಣ ಬಜೆಟ್ನ ಚಿತ್ರಗಳು ಕೂಡ ಬಿಡುಗಡೆ ಆಗುತ್ತಿವೆ. ಇಂಥ ಸಿನಿಮಾಗಳು ಪ್ರಚಾರ ಪಡೆಯುವುದು ಕಡಿಮೆ. ಕನ್ನಡದಲ್ಲೂ ಗಟ್ಟಿ ಕಥಾಹಂದರ ಇರುವ ಚಿತ್ರಗಳು ಮೂಡಿಬರುತ್ತಿವೆ. ಅದಕ್ಕೆ ಲೇಟೆಸ್ಟ್ ಉದಾಹರಣೆ ‘ಬಿಸಿಲು ಕುದುರೆ’ (Bisilu Kudure) ಸಿನಿಮಾ. ರೈತರ ಕಷ್ಟದ ಕಥೆಯನ್ನು ಈ ಸಿನಿಮಾ ವಿವರಿಸುತ್ತದೆ. ಸರ್ಕಾರದ ಎರಡು ಇಲಾಖೆಗಳ ನಡುವೆ ಸಿಕ್ಕು ಒದ್ದಾಡುವ ಬಡ ರೈತನೊಬ್ಬನ ಕಹಾನಿ ಈ ಸಿನಿಮಾದಲ್ಲಿ ಇದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ‘ಬಿಸಿಲು ಕುದುರೆ’ ಕಥಾಹಂದರ ಏನು ಎಂಬುದು ಟ್ರೇಲರ್ ಮೂಲಕ ಗೊತ್ತಾಗಿದೆ. ಏಪ್ರಿಲ್ 21ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಚಿತ್ರಕ್ಕೆ ಹೃದಯ ಶಿವ (Hrudaya Shiva) ಅವರು ನಿರ್ದೇಶನ ಮಾಡಿದ್ದಾರೆ. ಸಂಪತ್ ಮೈತ್ರೇಯ (Sampath Maitreya) ಅವರು ಪ್ರಮುಖ ಪಾತ್ರ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಹೃದಯ ಶಿವ ಅವರು ಗೀತರಚನಕಾರನಾಗಿ ಗುರುತಿಸಿಕೊಂಡಿದ್ದಾರೆ. ಅನೇಕ ಸೂಪರ್ ಹಿಟ್ ಗೀತೆಗಳನ್ನು ಅವರು ಬರೆದಿದ್ದಾರೆ. ಈಗ ಅವರ ನಿರ್ದೇಶನದಲ್ಲಿ ‘ಬಿಸಿಲು ಕುದುರೆ’ ಸಿನಿಮಾ ಮೂಡಿಬಂದಿದೆ. ಈ ಚಿತ್ರಕ್ಕಾಗಿ ಅವರು ರೈತರ ಕಹಾನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಮಾಮೂಲಿ ಕಮರ್ಷಿಯಲ್ ಸಿನಿಮಾಗಳ ಪ್ರಕಾರಕ್ಕೆ ಸೇರುವ ಚಿತ್ರವಲ್ಲ. ರೈತರ ಬವಣೆಯನ್ನು ವಿವರಿಸುವ ಸಿನಿಮಾ ಇದು.
ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ
ಸಿನಿಮಾದ ಬಗ್ಗೆ ನಿರ್ದೇಶಕ ಹೃದಯ ಶಿವ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ‘ಕನ್ನಡದಲ್ಲಿ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಅರಣ್ಯದ ಅಂಚಿನಲ್ಲಿ ತುಂಡುಭೂಮಿ ಹೊಂದಿರುವ ರೈತನ ಬವಣೆಯ ಕುರಿತಾದ ಚಿತ್ರವಿದು. ಒಂದೇ ಸರ್ಕಾರದಡಿ ಕಾರ್ಯ ನಿರ್ವಹಿಸುವ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದೇ ಹೋದಾಗ ಕಾಡಂಚಿನ ರೈತನ ಪಾಡು ಏನಾಗುತ್ತದೆ ಎಂಬುದೇ ಕಥಾಹಂದರ’ ಎಂದು ಹೃದಯ ಶಿವ ಹೇಳಿದ್ದಾರೆ.
ಇದನ್ನೂ ಓದಿ: ‘ಮತದಾನ ನಮ್ಮನೆ ಹೆಣ್ಣುಮಕ್ಕಳ ರೀತಿ ಶ್ರೇಷ್ಠ, ಅದನ್ನು ಮಾರಿಕೊಳ್ಳಬೇಡಿ’: ‘ಪ್ರಭುತ್ವ’ ಟ್ರೇಲರ್ ವೈರಲ್
ಸಂಪತ್ ಮೈತ್ರೇಯ, ಸುನೀತಾ, ಕರಿಸುಬ್ಬು, ಮಳವಳ್ಳಿ ಸಾಯಿಕೃಷ್ಣ, ವಿಕ್ಟರಿ ವಾಸು, ಜೊಸೈಮನ್ ಮುಂತಾದವರು ‘ಬಿಸಿಲು ಕುದುರೆ’ ಚಿತ್ರದಲ್ಲಿ ನಟಿಸಿದ್ದಾರೆ. ನಾಗಾರ್ಜುನ್ ಡಿ. ಛಾಯಾಗ್ರಹಣ, ಬಿ.ಎಸ್. ಕೆಂಪರಾಜು ಸಂಕಲನ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ನಿರ್ಮಾಣವನ್ನು ಹೃದಯ ಶಿವ ಅವರೇ ಮಾಡಿದ್ದಾರೆ. ಇಮ್ತಿಯಾಜ್ ಸುಲ್ತಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಬಿಸಿಲು ಕುದುರೆ’ ಸಿನಿಮಾದ ಹಾಡುಗಳಿಗೆ ಅನೂಪ್ ಸೀಳಿನ್, ರವೀಂದ್ರ ಸೊರಗಾವಿ, ಇಮ್ತಿಯಾಜ್ ಸುಲ್ತಾನ್ ಧ್ವನಿ ನೀಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.