‘ಮತದಾನ ನಮ್ಮನೆ ಹೆಣ್ಣುಮಕ್ಕಳ ರೀತಿ ಶ್ರೇಷ್ಠ, ಅದನ್ನು ಮಾರಿಕೊಳ್ಳಬೇಡಿ’: ‘ಪ್ರಭುತ್ವ’ ಟ್ರೇಲರ್ ವೈರಲ್
Prabhuthva Movie Trailer: ‘ಪ್ರಭುತ್ವ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಒಂದೇ ದಿನಕ್ಕೆ ಯೂಟ್ಯೂಬ್ನಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಬಾರಿ ವೀಕ್ಷಣೆ ಕಂಡಿದೆ. ಈ ಸಿನಿಮಾಗೆ ಆರ್. ರಂಗನಾಥ್ ನಿರ್ದೇಶನ ಮಾಡಿದ್ದಾರೆ.
ರಾಜ್ಯದಲ್ಲಿ ಚುನಾವಣೆ (Karnataka Assembly Election 2023) ಕಾವು ಹೆಚ್ಚಾಗುತ್ತಿದೆ. ಪ್ರತಿ ಜಿಲ್ಲೆ, ತಾಲೂಕು, ಗ್ರಾಮಗಳಲ್ಲಿ ರಾಜಕೀಯದ ಚಟುವಟಿಕೆಗಳು ಗರಿಗೆದರಿವೆ. ಮತದಾನದ ಕುರಿತು ಜಾಗೃತಿ ಮೂಡಿಸಲು ಸಕಲ ಪ್ರಯತ್ನಗಳು ನಡೆಯುತ್ತಿವೆ. ವಿಶೇಷ ಏನೆಂದರೆ, ಈ ಸಂದರ್ಭಕ್ಕೆ ಸರಿಯಾಗಿ ಕನ್ನಡದ ‘ಪ್ರಭುತ್ವ’ ಸಿನಿಮಾ (Prabhuthva Kannada Movie) ಟ್ರೇಲರ್ ಗಮನ ಸೆಳೆಯುತ್ತಿದೆ. ಈ ಸಿನಿಮಾದಲ್ಲಿ ಚುನಾವಣೆ ಕುರಿತ ವಿಷಯ ಇದೆ. ಜನರು ಎಷ್ಟು ಎಚ್ಚರಿಕೆಯಿಂದ ಮತದಾನ ಮಾಡಬೇಕು ಎಂಬುದನ್ನು ತಿಳಿಸುವ ಸಲುವಾಗಿ ಈ ಚಿತ್ರ ತಯಾರಾಗಿದೆ. ‘ಮತದಾನ ನಮ್ಮನೆ ಹೆಣ್ಣುಮಕ್ಕಳ ರೀತಿ ಶ್ರೇಷ್ಠ, ಅದನ್ನು ಮಾರಿಕೊಳ್ಳಬೇಡಿ’ ಎಂದು ಕಥಾನಾಯಕ ಹೇಳಿದ ಡೈಲಾಗ್ ಸಖತ್ ವೈರಲ್ ಆಗುತ್ತಿದೆ. ಚೇತನ್ ಚಂದ್ರ (Chetan Chandra) ಅವರು ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ.
ಜಂಕಾರ್ ಮ್ಯೂಸಿಕ್ ಮೂಲಕ ‘ಪ್ರಭುತ್ವ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಒಂದೇ ದಿನಕ್ಕೆ ಯೂಟ್ಯೂಬ್ನಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಬಾರಿ ಈ ಟ್ರೇಲರ್ ವೀಕ್ಷಣೆ ಕಂಡಿದೆ. ಈ ಸಿನಿಮಾಗೆ ಆರ್. ರಂಗನಾಥ್ ನಿರ್ದೇಶನ ಮಾಡಿದ್ದಾರೆ. ರವಿರಾಜ್ ಎಸ್. ಕುಮಾರ್ ಅವರ ನಿರ್ಮಾಣದಲ್ಲಿ ‘ಪ್ರಭುತ್ವ’ ಸಿನಿಮಾ ಮೂಡಿಬಂದಿದೆ. ಜನರಿಂದ ಈ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಡೈಲಾಗ್ಗಳು ಹೈಲೈಟ್ ಆಗಿವೆ.
ಇದನ್ನೂ ಓದಿ: ಹುಟ್ಟೂರಿಗೆ ರಾಯಭಾರಿಯಾದ ರಾಜಮೌಳಿ; ಜನರಲ್ಲಿ ಮತದಾನದ ಜಾಗೃತಿ ಮೂಡಿಸಲಿರುವ ಖ್ಯಾತ ನಿರ್ದೇಶಕ
ಹಲವು ಜನಪ್ರಿಯ ಕಲಾವಿದರು ‘ಪ್ರಭುತ್ವ’ ಸಿನಿಮಾದಲ್ಲಿ ನಟಿಸಿದ್ದಾರೆ. ಚೇತನ್ ಚಂದ್ರ ಅವರಿಗೆ ಜೋಡಿಯಾಗಿ ನಟಿ ಪಾವನಾ ಅಭಿನಯಿಸಿದ್ದಾರೆ. ನಾಸರ್, ಶರತ್ ಲೋಹಿತಾಶ್ವ, ಅರವಿಂದ್ ರಾವ್, ಹರೀಶ್ ರಾಯ್, ಆದಿ ಲೋಕೇಶ್, ಶಶಿಕುಮಾರ್, ವಿಜಯ್ ಚೆಂಡೂರ್, ವೀಣಾ ಸುಂದರ್, ಅನಿತಾ ಭಟ್, ರಾಜೇಶ್ ನಟರಂಗ ಮುಂತಾದವರು ಈ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ.
ಎಮಿಲ್ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನ, ವಿನಯ್ ಅವರ ಸಂಭಾಷಣೆ ಈ ಚಿತ್ರಕ್ಕಿದೆ. ಚೇತನ್ ಚಂದ್ರ ನಟನೆಯ 12ನೇ ಸಿನಿಮಾ ಇದು. ಚಿತ್ರ ಮೂಡಿಬಂದಿರುವ ರೀತಿಯ ಬಗ್ಗೆ ಅವರಿಗೆ ಹೆಮ್ಮೆ ಇದೆ. ರಾಜಕೀಯದ ಬಗ್ಗೆ ಮೆಸೇಜ್ ಇರುವಂತಹ ಈ ಸಿನಿಮಾವನ್ನು ಚುನಾವಣೆಗೂ ಮುನ್ನವೇ ತೆರೆಕಾಣಿಸಬೇಕು ಎಂದು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ಮೇಘಡಹಳ್ಳಿ ಡಾ. ಶಿವಕುಮಾರ್ ಅವರು ‘ಪ್ರಭುತ್ವ’ ಸಿನಿಮಾಗೆ ಕಥೆ ಬರೆದಿದ್ದಾರೆ. ‘ಪ್ರತಿಯೊಬ್ಬ ಪ್ರಜೆ ಈ ಚಿತ್ರವನ್ನು ನೋಡಬೇಕು. ಮತದಾನ ಅಮೂಲ್ಯವಾದ್ದದ್ದು. ಹಾಗಾಗಿ ಮತದಾನವನ್ನು ಮಾರಾಟ ಮಾಡಿಕೊಳ್ಳಬಾರದು ಎಂಬ ಸಂದೇಶ ಈ ಸಿನಿಮಾದಲ್ಲಿದೆ’ ಎಂದು ಶಿವಕುಮಾರ್ ಹೇಳಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ರಿಲೀಸ್ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:20 pm, Tue, 14 March 23