AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಮನೆ ಮೇಲೆ ನಡೆಯಲಿದೆ ಐಟಿ ದಾಳಿ; ದಾಸನಿಗೆ ಹೊಸ ಕೇಸ್ ತಲೆಬಿಸಿ ಶುರು

ರೇಣುಕಾ ಸ್ವಾಮಿಯ ಹತ್ಯೆ ಕೇಸ್​ ತನಿಖೆಯ ವೇಳೆ ಬಯಲಾದ ವಿಚಾರಗಳು ಒಂದೆರಡಲ್ಲ. ಈ ಕೃತ್ಯಕ್ಕೆ ಬಳಕೆ ಆಗಿರುವ ಅಪಾರ ಪ್ರಮಾಣದ ಹಣದ ಬಗ್ಗೆ ತನಿಖೆ ಆಗುವುದು ಬಾಕಿ ಇದೆ. ಅದಕ್ಕಾಗಿ ಐಟಿ ಅಧಿಕಾರಿಗಳು ದರ್ಶನ್ ಮನೆ ಮೇಲೆ ದಾಳಿ ನಡೆಸಲು ನಿರ್ಧರಿಸಿದ್ದಾರೆ. ಐಟಿ ದಾಳಿಗೆ ನ್ಯಾಯಾಲಯದಿಂದ ಅನುಮತಿ ಕೂಡ ಸಿಕ್ಕಿದೆ. ಇದರಿಂದ ದರ್ಶನ್​ಗೆ ಸಂಕಷ್ಟ ಇನ್ನಷ್ಟು ಹೆಚ್ಚಾಗಿದೆ.

ದರ್ಶನ್ ಮನೆ ಮೇಲೆ ನಡೆಯಲಿದೆ ಐಟಿ ದಾಳಿ; ದಾಸನಿಗೆ ಹೊಸ ಕೇಸ್ ತಲೆಬಿಸಿ ಶುರು
ದರ್ಶನ್​
Shivaprasad B
| Updated By: ಮದನ್​ ಕುಮಾರ್​|

Updated on: Sep 23, 2024 | 6:32 PM

Share

ನಟ ದರ್ಶನ್​ಗೆ ಹೊಸ ಸಂಕಷ್ಟ ಶುರುವಾಗಿದೆ. ಇಷ್ಟು ದಿನಗಳ ಕಾಲ ಅವರು ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ತೀವ್ರ ವಿಚಾರಣೆ ಎದುರಿಸಿದ್ದಾರೆ. ಅದೆಲ್ಲ ಒಂದು ಹಂತಕ್ಕೆ ಬಂದು ನಿಂತಿದೆ ಎನ್ನುವಾಗಲೇ ಹೊಸದೊಂದು ತಲೆಬಿಸಿ ಎದುರಾಗುತ್ತಿದೆ. ಈಗ ಐಟಿ ಅಧಿಕಾರಿಗಳು ದರ್ಶನ್ ಮನೆ ಮೇಲೆ ದಾಳಿ ಮಾಡಲು ತಯಾರಿ ನಡೆಸಿದ್ದಾರೆ. ಇದು ಕೂಡ ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದುವರಿದ ಭಾಗ. ಅಂದರೆ, ಈ ಪ್ರಕರಣದಲ್ಲಿ 85 ಲಕ್ಷ ರೂಪಾಯಿ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದರು. ಆ ಹಣದ ಮೂಲ ಏನು ಎಂಬುದನ್ನು ತಿಳಿಯುವ ಉದ್ದೇಶದಿಂದ ಐಟಿ ಅಧಿಕಾರಿಗಳು ತನಿಖೆ ಮಾಡಲು ಮುಂದಾಗಿದ್ದಾರೆ.

ದರ್ಶನ್ ಮನೆ ಮೇಲೆ ಐಟಿ ದಾಳಿ ಮಾಡಲು ಅನುಮತಿ ಕೇಳಿ ನ್ಯಾಯಾಲಯಕ್ಕೆ ಅಧಿಕಾರಿಗಳು ಮನವಿ ಸಲ್ಲಿಸಿದ್ದರು. 24ನೇ ಎಸಿಎಂಎಂ ಕೋರ್ಟ್​ ಅನುಮತಿ ನೀಡಿದೆ. ಆ ಬಳಿಕ ಬಳ್ಳಾರಿ ಜೈಲಿನಲ್ಲಿರುವ ದರ್ಶನ್​ಗೆ ನೋಟಿಸ್ ಜಾರಿ‌ ಮಾಡಲಾಗಿದೆ. ಇಂದು (ಸೆ.23) ಮಧ್ಯಾಹ್ನ 2.45ಕ್ಕೆ ಬಳ್ಳಾರಿ ಜೈಲಿನಲ್ಲಿ ದರ್ಶನ್ ಅವರನ್ನು ಅಧಿಕಾರಿಗಳು ಭೇಟಿ ಮಾಡಿ ನೋಟಿಸ್​ ನೀಡಿದ್ದಾರೆ.

ರೇಣುಕಾಸ್ವಾಮಿ ಹತ್ಯೆ ನಡೆದ ಬಳಿಕ ಶವ ಸಾಗಿಸಲು ಲಕ್ಷಾಂತರ ರೂಪಾಯಿ ಹಣ ವ್ಯಯಿಸಲಾಗಿತ್ತು. ಅಲ್ಲದೇ ಇಡೀ ಕೃತ್ಯದ ಹಲವು ಹಂತಗಳಲ್ಲಿ ಹಣ ಹರಿದಾಡಿದೆ ಎಂಬುದು ತನಿಖೆ ವೇಳೆ ತಿಳಿದುಬಂತು. ಕೃತ್ಯಕ್ಕೆ ಬಳಸಿದ್ದ ಹಣದ ಮೂಲದ ಬಗ್ಗೆ ಬಳ್ಳಾರಿ ಜೈಲಿನಲ್ಲಿ ನಟನ ಹೇಳಿಕೆಯನ್ನು ಐಟಿ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ಕೋರ್ಟ್ ಆದೇಶದ ಮೇಲೆ ದಾಳಿ‌ ಮಾಡಲು ಐಟಿ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಜೈಲಿನಲ್ಲಿ ದರ್ಶನ್​ಗೆ ರಾಜಾತಿಥ್ಯ ಕೇಸ್: ಮೊಬೈಲ್ ರವಾನೆ ಮಾಡ್ತಿದ್ದ ಕಿಂಗ್​ ಪಿನ್​​​ ಲಾಕ್

ಒಂದೆಡೆ ದರ್ಶನ್ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇನ್ನೊಂದೆಡೆ ಅವರಿಗೆ ಮತ್ತೆ ಕಾನೂನಿನ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಅಕ್ರಮ ಹಣ ವರ್ಗಾವಣೆ ಆಗಿದ್ದು ಕಂಡುಬಂದರೆ ಐಟಿ ಅಧಿಕಾರಿಗಳು ಹೆಚ್ಚಿನ ತನಿಖೆ ಮಾಡಬೇಕಾಗುತ್ತದೆ. ಅದಕ್ಕಾಗಿ ದರ್ಶನ್​ ಅವರನ್ನು ವಶಕ್ಕೆ ಪಡೆಯಲೂಬಹುದು. ಒಂದು ವೇಳೆ ರೇಣುಕಾಸ್ವಾಮಿ ಕೇಸ್​ನಲ್ಲಿ ದರ್ಶನ್​ಗೆ ಜಾಮೀನು ಸಿಕ್ಕರೂ ಹಣಕ್ಕೆ ಸಂಬಂಧಿಸಿದ ಕೇಸ್​ನಲ್ಲಿ ಜೈಲು ವಾಸ ಮುಂದುವರಿಯಬಹುದು.

ಇಂದು (ಸೆ.23) ರೇಣುಕಾಸ್ವಾಮಿ ಕೊಲೆ ಕೇಸ್​ನ ಮೂರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಕಾರ್ತಿಕ್​ (ಎ15), ಕೇಶವಮೂರ್ತಿ (ಎ16), ನಿಖಿಲ್ ನಾಯಕ್​ (ಎ17) ಜಾಮೀನು ಪಡೆದು ಸದ್ಯಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಪವಿತ್ರಾ ಗೌಡ, ಪ್ರದೋಶ್, ಪವನ್ ಮುಂತಾದವರು ಜಾಮೀನು ಪಡೆಯಲು ಪ್ರಯತ್ನ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.