James: ರಿಲೀಸ್ನಲ್ಲಿ ದಾಖಲೆ ಬರೆಯಲಿದೆ ‘ಜೇಮ್ಸ್’; ಜಗತ್ತಿನ ಎಲ್ಲೆಲ್ಲಿ ಅಪ್ಪು ಚಿತ್ರ ಬಿಡುಗಡೆ ಆಗಲಿದೆ ಗೊತ್ತಾ?
Puneeth Rajkumar | James Movie Release: ‘ಜೇಮ್ಸ್’ ಚಿತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ವಿಶ್ವಾದ್ಯಂತ ರಿಲೀಸ್ ಮಾಡಲಾಗುತ್ತಿದೆ. ವಿತರಣೆಯ ಹೊಣೆ ಹೊತ್ತಿರುವ ಕಿರಣ್, ಪ್ರಿ-ರಿಲೀಸ್ ಇವೆಂಟ್ನಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.
‘ಜೇಮ್ಸ್’ (James) ಚಿತ್ರವನ್ನು ಬಹಳ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಪುನೀತ್ ರಾಜ್ಕುಮಾರ್ (Puneeth Rajkumar) ನಾಯಕರಾಗಿ ಕಾಣಿಸಿಕೊಂಡಿರುವ ಕೊನೆಯ ಚಿತ್ರ ಇದಾಗಿದ್ದು, ಅವರ ಜನ್ಮದಿನವಾದ ಮಾರ್ಚ್ 17ರಂದು ರಿಲೀಸ್ ಆಗುತ್ತಿದೆ. ಇದನ್ನು ಸ್ವಾಗತಿಸಲು ವಿಶ್ವಾದ್ಯಂತ ಫ್ಯಾನ್ಸ್ ಸಿದ್ಧರಾಗುತ್ತಿದ್ದಾರೆ. ವಿಶೇಷವೆಂದರೆ ಕನ್ನಡ ಚಿತ್ರವೊಂದು ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ವಿಶ್ವದೆಲ್ಲೆಡೆ ರಿಲೀಸ್ ಆಗುತ್ತಿದೆ. ಹೊರ ದೇಶಗಳಲ್ಲಿ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಕಿರಣ್ ಭರ್ತೂರು ವಹಿಸಿಕೊಂಡಿದ್ದಾರೆ. ಪುನೀತ್ಗೆ ಬಹಳ ಆಪ್ತರಾಗಿದ್ದ ಅವರು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವಾಗ, ಪ್ಯಾಶನ್ಗೆಂದು ಕನ್ನಡ ಚಿತ್ರಗಳ ವಿತರಣೆ ಕೆಲಸವನ್ನು ಆರಂಭಿಸಿದ್ದರು. ಅಪ್ಪು ನಟನೆಯ ‘ಮೈತ್ರಿ’ ಚಿತ್ರದಿಂದ ವಿತರಣೆಯ ಕೆಲಸವನ್ನು ಅವರು ಆರಂಭಿಸಿದವರು. ಈಗ ‘ಜೇಮ್ಸ್’ ಚಿತ್ರವನ್ನು ವಿಶ್ವಾದ್ಯಂತ ರಿಲೀಸ್ ಮಾಡುವ ಹೊಣೆಯನ್ನು ಕಿರಣ್ ಹೊತ್ತಿದ್ದಾರೆ. ‘ಜೇಮ್ಸ್’ ಪ್ರಿ-ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ಅವರು, ಯಾವೆಲ್ಲಾ ದೇಶಗಳಲ್ಲಿ ‘ಜೇಮ್ಸ್’ ರಿಲೀಸ್ ಆಗಲಿದೆ, ಅವುಗಳ ತಯಾರಿ ಹೇಗಿರಲಿದೆ ಎಂಬುದನ್ನು ಸವಿವರವಾಗಿ ತೆರೆದಿಟ್ಟಿದ್ದಾರೆ.
ಅಮೇರಿಕಾದಲ್ಲಿ ‘ಸ್ಯಾಂಡಲ್ವುಡ್ ಗೆಳೆಯರ ಬಳಗ’ದಿಂದ 32 ರಾಜ್ಯಗಳಲ್ಲಿ ‘ಜೇಮ್ಸ್ ಚಿತ್ರವನ್ನು ರಿಲೀಸ್ ಮಾಡಲು ಸಿದ್ಧತೆಗಳು ನಡೆದಿವೆ. ಒಟ್ಟು 100ಕ್ಕೂ ಹೆಚ್ಚು ಪ್ರದರ್ಶನವನ್ನು ‘ಜೇಮ್ಸ್’ ಕಾಣಲಿದ್ದು, ಕನ್ನಡದ ಮತ್ಯಾವ ಚಿತ್ರಕ್ಕೂ ಈ ಪರಿ ಓಪನಿಂಗ್ ಅಮೇರಿಕಾದಲ್ಲಿ ಸಿಕ್ಕಿಲ್ಲ ಎಂದು ಕಿರಣ್ ಹೇಳಿದ್ದಾರೆ. ಕೆನಡಾದಲ್ಲಿ 12 ಪ್ರದೇಶಗಳಲ್ಲಿ ಚಿತ್ರ ರಿಲೀಸ್ ಮಾಡಲು ಸಿದ್ಧತೆ ನಡೆದಿದೆ.
ಉಕ್ರೇನ್ ಮತ್ತು ರಷ್ಯಾ ಬಿಟ್ಟು ಯುರೋಪ್ನ ಎಲ್ಲಾ ಕಡೆ ‘ಜೇಮ್ಸ್’ ಪ್ರದರ್ಶನ ಕಾಣಲಿದೆ. ವಿಶೇಷವೆಂದರೆ ಯುರೋಪ್ನಲ್ಲಿ ಎಲ್ಲಾ ಟಿಕೆಟ್ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ ಎಂದಿದ್ದಾರೆ ಕಿರಣ್. ಬ್ರಿಟನ್ನಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ‘ಜೇಮ್ಸ್’ ರಿಲೀಸ್ ಆಗಲಿದೆ.
ಆಸ್ಟ್ರೇಲಿಯಾದಲ್ಲಿ ಕನ್ನಡದ ಮೊದಲ ಸಿನಿಮಾವಾಗಿ ‘ಜೇಮ್ಸ್’ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಳಿಸಿದ್ದು, 100ಕ್ಕೂ ಹೆಚ್ಚು ಪ್ರದರ್ಶನ ಕಾಣಲಿದೆ. ಸಿಂಗಾಪುರದಲ್ಲಿ ‘ಸ್ಯಾಂಡಲ್ವುಡ್ ಸಿನಿ ಎಂಟರ್ಟೈನ್ಮೆಂಟ್’ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದಾರೆ.
ನೈಜೀರಿಯಾ, ಕೀನ್ಯಾ, ಜಪಾನ್, ಉಗಾಂಡಾ, ಟಾಂಜಾನಿಯಾ ಮೊದಲಾದ ದೇಶಗಳಲ್ಲೂ ಜೇಮ್ಸ್ ರಿಲೀಸ್ ಆಗಲಿದೆ. 25-30 ಜನ ಕನ್ನಡಿಗರಿರುವ ಕಡೆಗಳಲ್ಲೂ ‘ಜೇಮ್ಸ್’ ರಿಲೀಸ್ ಆಗುತ್ತಿದೆ. ಇಷ್ಟೇ ಅಲ್ಲದೇ ವಿಶ್ವಾದ್ಯಂತ ಇರುವ ಅಭಿಮಾನಿಗಳು ಒಟ್ಟಾಗಿ ಖಾಸಗಿ ಪ್ರದರ್ಶನಗಳನ್ನು ಏರ್ಪಡಿಸಲೂ ಮುಂದೆ ಬಂದಿದ್ದಾರೆ ಎಂದು ಕಿರಣ್ ಭರ್ತೂರು ಮಾಹಿತಿ ನೀಡಿದ್ದಾರೆ.
ಕಿರಣ್ ಭರ್ತೂರು ಮಾತು ಇಲ್ಲಿದೆ:
ಇದನ್ನೂ ಓದಿ:
James: ‘ಅಪ್ಪುವನ್ನು ಹುಡುಕಿ ಹೋಗುತ್ತೇನೆ’ ಎಂದು ನೋವಿನ ಮಾತನ್ನಾಡಿದ ರಾಘಣ್ಣ; ತಬ್ಬಿ ಸಂತೈಸಿದ ಶಿವಣ್ಣ