Jr NTR: ಕನ್ನಡದ ಜನತೆಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಜೂನಿಯರ್ ಎನ್ಟಿಆರ್
Jr NTR | Kannada Rajyotsava: ಜೂನಿಯರ್ ಎನ್ಟಿಆರ್ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ ಇದೆ. ಅನೇಕ ವೇದಿಕೆಗಳಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದುಂಟು.
ನವೆಂಬರ್ ಬಂದರೆ ಕರುನಾಡಿನಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಎಲ್ಲೆಲ್ಲೂ ನಾಡಧ್ವಜ ರಾರಾಜಿಸುತ್ತದೆ. ಕನ್ನಡ ರಾಜ್ಯೋತ್ಸವ (Karnataka Rajyotsava) ಆಚರಣೆಗೆ ಇಡೀ ಕರ್ನಾಟಕ ಸಜ್ಜಾಗುತ್ತಿದೆ. ಈ ಬಾರಿಯ ರಾಜ್ಯೋತ್ಸವ ಸಂಭ್ರಮ ಅಪ್ಪು ಅಭಿಮಾನಿಗಳಿಗೆ ಹೆಚ್ಚು ವಿಶೇಷವಾಗಿರಲಿದೆ. ಯಾಕೆಂದರೆ, ನವೆಂಬರ್ 1ರಂದು ಪುನೀತ್ ರಾಜ್ಕುಮಾರ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸ್ಟಾರ್ ನಟರಾದ ಜೂನಿಯರ್ ಎನ್ಟಿಆರ್ ಹಾಗೂ ರಜನಿಕಾಂತ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿದ್ದಾರೆ. ಅದಕ್ಕೀಗ ಕ್ಷಣಗಣನೆ ಆರಂಭ ಆಗಿದ್ದು, ಇಡೀ ಕರುನಾಡಿನ ಜನತೆಗೆ ಜೂನಿಯರ್ ಎನ್ಟಿಆರ್ (Jr NTR) ಅವರು ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡುವ ಸಮಾರಂಭಕ್ಕೆ ಆಗಮಿಸಬೇಕು ಎಂದು ಜೂನಿಯರ್ ಎನ್ಟಿಆರ್ ಅವರಿಗೆ ಕರ್ನಾಟಕ ಸರ್ಕಾರದ ಕಡೆಯಿಂದ ಆಹ್ವಾನ ಕಳಿಸಲಾಗಿತ್ತು. ಅದನ್ನು ಸ್ವೀಕರಿಸಿರುವ ಅವರು ಅಧಿಕೃತವಾಗಿ ಪತ್ರ ಮುಖೇನ ತಮ್ಮ ಉತ್ತರ ತಿಳಿಸಿದ್ದಾರೆ. ಈ ಸಮಾರಂಭಕ್ಕೆ ತಾವು ಬರುವುದು ಖಚಿತ ಎಂದು ಅವರು ಹೇಳಿದ್ದಾರೆ.
‘ಅಪ್ಪು ಅವರಿಗೆ ಈ ಗೌರವ ಸಲ್ಲುತ್ತಿರುವಾಗ ನಾನು ಅಲ್ಲಿ ಇರುವುದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ ಮಾತ್ರವಲ್ಲದೇ ಅದು ನನ್ನ ಕರ್ತವ್ಯ ಕೂಡ ಹೌದು. ಕರ್ನಾಟಕ ಸರ್ಕಾರ ಆಯೋಜಿಸಿರುವ ಆ ಸಮಾರಂಭದಲ್ಲಿ ನನ್ನ ಉಪಸ್ಥಿತಿ ಇರುತ್ತದೆ ಎಂಬುದನ್ನು ಈ ಮೂಲಕ ಖಚಿತ ಪಡಿಸುತ್ತೇನೆ. ಇದೇ ಸಂದರ್ಭದಲ್ಲಿ ನಾನು ಕರುನಾಡಿನ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸುತ್ತೇನೆ’ ಎಂದು ಜೂನಿಯರ್ ಎನ್ಟಿಆರ್ ಪತ್ರ ಬರೆದಿದ್ದಾರೆ.
ಜೂನಿಯರ್ ಎನ್ಟಿಆರ್ ಅವರ ತಾಯಿ ಕರ್ನಾಟಕದ ಕುಂದಾಪುರದವರು. ಆ ಕಾರಣದಿಂದಲೂ ಅವರಿಗೆ ಕನ್ನಡದ ಮೇಲೆ ವಿಶೇಷ ಪ್ರೀತಿ. ಅನೇಕ ವೇದಿಕೆಗಳಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದುಂಟು. ಈ ಹಿಂದೆ ತೆಲುಗು ಬಿಗ್ ಬಾಸ್ ನಡೆಸಿಕೊಡುವಾಗಲೂ ಅವರು ಕನ್ನಡದಲ್ಲಿ ಮಾತನಾಡಿದ್ದರು. ಆ ವಿಡಿಯೋ ವೈರಲ್ ಆಗಿತ್ತು. ಈ ವರ್ಷ ಅವರಿಗೆ ‘ಆರ್ಆರ್ಆರ್’ ಸಿನಿಮಾದಿಂದ ದೊಡ್ಡ ಯಶಸ್ಸು ಸಿಕ್ಕಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.