ಕೊನೆಗೆ ಬಂದು ಮೀಟೂ ಅಂದವರ ಮೇಲೆ ಮೊದಲು ಕೇಸ್ ಹಾಕಬೇಕು: ಕೆ. ಮಂಜು
ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಕೆ. ಮಂಜು ಅವರು ಮೀಟೂ ಕುರಿತು ಮಾತನಾಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಮಹಿಳೆಯರ ಮೇಲೆ ಆದ ದೌರ್ಜನ್ಯಗಳ ಬಗ್ಗೆ ತನಿಖೆಗೆ ಕಮಿಟಿ ರಚನೆ ಆಗಬೇಕು ಎಂದು ಅನೇಕರು ಈಗಾಗಲೇ ಒತ್ತಾಯಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆ. ಮಂಜು ಅವರು ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿದ್ದಾರೆ.
ಒಂದಷ್ಟು ವರ್ಷಗಳ ಹಿಂದೆ ಮೀಟೂ ಬಿರುಗಾಳಿ ಎದ್ದಿತ್ತು. ನಂತರ ಅದು ಮಾಯವಾಗಿತ್ತು. ಈಗ ಮತ್ತೆ ಮೀಟೂ ಅಭಿಯಾನ ಶುರುವಾಗಿದೆ. ಕೇರಳದಲ್ಲಿ ಹೇಮಾ ಸಮಿತಿ ವರದಿ ಸಲ್ಲಿಕೆ ಆದ ಬಳಿಕ ಬೇರೆ ಬೇರೆ ಭಾಷೆಯ ಚಿತ್ರರಂಗದವರು ಕೂಡ ಇಂಥ ಸಮಿತಿ ಬೇಕು ಎಂದು ಹೇಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಫೈರ್ ಸಂಸ್ಥೆ ಕೂಡ ಒಂದು ಸಮಿತಿ ರಚನೆ ಆಗಲಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ. ಈ ವಿಚಾರಗಳಿಗೆ ಸಂಬಂಧಿಸಿದಂತೆ ನಿರ್ಮಾಪಕ ಕೆ. ಮಂಜು ಅವರು ಟಿವಿ9 ಜೊತೆ ಮಾತನಾಡಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
‘2018ರಲ್ಲೇ ಮೀಟೂ ಬಂತು. ಆದರೆ ಕಮಿಟಿ ಮಾಡಲಿಲ್ಲ ಅಷ್ಟೇ. ಅಂದು ಮೀಟೂ ಎಂಬುದಕ್ಕೆ ಸೂಕ್ತ ಸಾಕ್ಷಿ ಆಧಾರಗಳು ಇಲ್ಲದೇ ಕೇಸ್ ಖುಲಾಸೆ ಆಯಿತು. ಮೀಟೂ ಎಂದರೆ ಏನು ಎಂಬುದಕ್ಕೆ ನನ್ನ ಅನಿಸಿಕೆ ಒಂದಿದೆ. ಯಾರೋ ಒಬ್ಬ ವ್ಯಕ್ತಿ ಬಲತ್ಕಾರದಿಂದ ಒಂದು ಹೆಣ್ಣನ್ನು ತನ್ನ ಕೃತ್ಯಕ್ಕೆ ಬಳಸಿಕೊಂಡರೆ ಅದು ಮೀಟೂ ಆಗುತ್ತದೆ. ಆದರೆ ಇಬ್ಬರೂ ಒಪ್ಪಿಗೆಯಿಂದ ಸಂಪರ್ಕ ಇಟ್ಟುಕೊಂಡರೆ ಅದು ಮೀಟೂ ಅಲ್ಲ’ ಎಂದು ಕೆ. ಮಂಜು ಹೇಳಿದ್ದಾರೆ.
ಇದನ್ನೂ ಓದಿ: ಮೀಟೂ ಬಿರುಗಾಳಿ: ಪ್ರೇಮಂ ಸಿನಿಮಾ ನಟ ನಿವಿನ್ ಪೌಲಿ ವಿರುದ್ಧ ರೇಪ್ ಕೇಸ್ ದಾಖಲು
‘ನಮಲ್ಲಿ ಭಾರತಿ, ಜಯಂತಿ, ಆರತಿ, ಸರಿತಾ, ಮಾಧವಿ ಅವರಂತಹ ನಟಿಯರು ನೂರಾರು ಸಿನಿಮಾಗಳು ಮಾಡಿದ್ದಾರೆ. ಆಗ ಮೀಟೂ ಇರಲಿಲ್ಲ. ಇಂದು ಎಲ್ಲ ರೀತಿಯ ಆಯ್ಕೆಗಳು ಇವೆ. ಅಂದು ಅಷ್ಟು ಸ್ವತಂತ್ರ ಇರಲಿಲ್ಲ. ಈಗ ಮೀಟೂ ಎನ್ನುವವರು ಯಾರು? ವರ್ಷಕ್ಕೆ 200-300 ಸಿನಿಮಾ ಬರುತ್ತವೆ. ಅದು ನಮ್ಮ ನಿಯಂತ್ರಣದಲ್ಲಿ ಇಲ್ಲ. 5 ಜನ ಸೇರಿಕೊಂಡು ಒಂದು ಕ್ಯಾಮೆರಾ ತೆಗೆದುಕೊಂಡು ಸಿನಿಮಾ ಮಾಡ್ತೀವಿ ಅಂತ ಆಡಿಷನ್ ಕರೆಯುತ್ತಾರೆ. ಅಂಥವರು ಏನೇನೋ ಮಾಡಿದರೆ ಅವರು ಚಿತ್ರರಂಗದವರು ಅನ್ನೋಕೆ ಆಗುತ್ತಾ? ಅಂಥವರಿಂದ ನಟಿಯರಿಗೆ ದೌರ್ಜನ್ಯ ಆದಾಗ ಇಡೀ ಚಿತ್ರರಂಗದ ಮೇಲೆ ಮೀಟೂ ಅನ್ನೋಕೆ ಆಗುತ್ತಾ’ ಎಂದು ಕೆ. ಮಂಜು ಪ್ರಶ್ನಿಸಿದ್ದಾರೆ.
‘ಎಷ್ಟೋ ನಟಿಯರು ಬಂದು ಹೆಸರು, ದುಡ್ಡು ಮಾಡುತ್ತಾರೆ. ವಯಸ್ಸಾದ ಮೇಲೆ ಮೀಟೂ ಅಂತಾರೆ. ಹಾಗಾದ್ರೆ ಅಂಥವರು ಮೊದಲೇ ಯಾಕೆ ಹೇಳಲಿಲ್ಲ? ಮೀಟೂ ಆದ ಕೂಡಲೇ ದೂರು ನೀಡಬೇಕು. ಅದಕ್ಕೆ ಕಾನೂನು ಇರುತ್ತದೆ. ನೆಪಗಳನ್ನು ಹೇಳಿ ತಡವಾಗಿ ಮೀಟೂ ಎನ್ನುವವರ ಮೇಲೆ ಮೊದಲು ಕೇಸ್ ಹಾಕಬೇಕು. ನಿರ್ಮಾಪಕರ ಪರಿಸ್ಥಿತಿ ಇಂದು ಕಷ್ಟದಲ್ಲಿದೆ. ಬೆರಳೆಣಿಕೆ ಸಿನಿಮಾಗಳು ಮಾತ್ರ ಹಿಟ್ ಆಗುತ್ತಿವೆ’ ಎಂದಿದ್ದಾರೆ ಕೆ. ಮಂಜು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.