Kabzaa Ticket: ‘ಕಬ್ಜ’ ಟಿಕೆಟ್ ಬುಕಿಂಗ್ ಓಪನ್, ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್
ಉಪೇಂದ್ರ ನಟನೆಯ ಕಬ್ಜ ಸಿನಿಮಾದ ಆನ್ಲೈನ್ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು, ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಸಹ ಆಗಿದೆ.
ಉಪೇಂದ್ರ (Upendra) ನಟನೆಯ ‘ಕಬ್ಜ‘ (Kabzaa) ಸಿನಿಮಾದ ಆನ್ಲೈನ್ ಟಿಕೆಟ್ ಬುಕಿಂಗ್ (Online Ticket) ಮಾರ್ಚ್ 12ರ ಸಂಜೆ 6 ಗಂಟೆ 1 ನಿಮಿಷಕ್ಕೆ ಪ್ರಾರಂಭವಾಗಿದೆ. ಪ್ರಸ್ತುತ ಬೆಂಗಳೂರು (Bengaluru) ಹಾಗೂ ಮೈಸೂರಿನ (Mysore) ಎರಡು ಮಲ್ಟಿಫ್ಲೆಕ್ಸ್ಗಳಲ್ಲಿ ಬುಕಿಂಗ್ ಪ್ರಾರಂಭವಾಗಿದ್ದು, ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಹಲವು ಶೋಗಳು ಸೋಲ್ಡ್ ಔಟ್ ಆಗಿದೆ.
ಬೆಂಗಳೂರಿನ ರಾಜ್ಕುಮಾರ್ ರಸ್ತೆ ಒರಾಯಿನ್ ಮಾಲ್ನ ಪಿವಿಆರ್ನ ಎರಡು ಸ್ಕ್ರೀನ್ನಲ್ಲಿ 10 ಶೋಗಳಿಗೆ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು ಮಾರ್ಚ್ 17ರ ಎಲ್ಲ ಹತ್ತು ಶೋಗಳಿಗೆ ಈಗಾಗಲೇ ಬಹುತೇಕ ಸಂಪೂರ್ಣ ಬುಕಿಂಗ್ ಆಗಿ ಹೋಗಿದೆ. ಇದೇ ಮಲ್ಟಿಪ್ಲೆಕ್ಸ್ನ ಮಾರ್ಚ್ 18 ರ ಶೋಗೆ ಸಹ ಬುಕಿಂಗ್ ಜಾರಿಯಲ್ಲಿದೆ.
ಇನ್ನು ಮೈಸೂರಿನ ಹಬಿಟಾಟ್ ಮಾಲ್ನ ಡಿಸಿಆರ್ ಮಲ್ಟಿಪ್ಲೆಕ್ಸ್ನಲ್ಲಿ ಸಹ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು ಅಲ್ಲಿ ಮೊದಲ ದಿನವೇ 14 ಶೋ ನೀಡಲಾಗಿದ್ದು ಎರಡು ಶೋಗಳಿಗೆ ಬಹುತೇಕ ಎಲ್ಲ ಸೀಟುಗಳು ಬುಕ್ ಆಗಿದ್ದರೆ, ಉಳಿದ ಶೋಗಳಿಗೆ ಬೇಗ-ಬೇಗನೆ ಬುಕಿಂಗ್ ನಡೆಯುತ್ತಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.
ಸದ್ಯಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ಗಳಲ್ಲಿ ಮಾತ್ರವೇ ಆನ್ಲೈನ್ ಬುಕಿಂಗ್ ಓಪನ್ ಆಗಿದೆ. ಹೈದರಾಬಾದ್ನಲ್ಲಿ ನಾಲ್ಕು ಚಿತ್ರಮಂದಿರಗಳಲ್ಲಿ ಮಾತ್ರವೇ ಬುಕಿಂಗ್ ಓಪನ್ ಆಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಚಿತ್ರಮಂದಿರಗಳು ಹಾಗೂ ಶೋಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.
‘ಕಬ್ಜ’ ಸಿನಿಮಾವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಚೆನ್ನೈ, ಮುಂಬೈ, ಪುಣೆ, ಡೆಲ್ಲಿ ಇನ್ನಿತರೆ ಪ್ರಮುಖ ನಗರಗಳಲ್ಲಿ ಆನ್ಲೈನ್ ಟಿಕೆಟ್ ಬುಕಿಂಗ್ ಇನ್ನಷ್ಟೆ ಓಪನ್ ಆಗಬೇಕಿದೆ.
ಕಬ್ಜ ಸಿನಿಮಾದ ತೆಲುಗು ಆವೃತ್ತಿಯನ್ನು ತೆಲುಗು ಚಿತ್ರರಂಗದ ಜನಪ್ರಿಯ ವಿತರಕರಾದ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ಅರುಗಳು ವಿತರಣೆ ಮಾಡುತ್ತಿದ್ದಾರೆ. ಇನ್ನು ಕೇರಳ ರಾಜ್ಯದಲ್ಲಿ ಕಬ್ಜ ಸಿನಿಮಾವನ್ನು ಎಲ್ಜಿಎಫ್ ಹೆಸರಿನ ವಿತರಣಾ ಸಂಸ್ಥೆ ವಿತರಿಸುತ್ತಿದೆ. ತಮಿಳುನಾಡಿನ ಬಿಗ್ ಬಜೆಟ್ ಸಿನಿಮಾ ನಿರ್ಮಾಣ ಸಂಸ್ಥೆಯಾದ ಲೈಕಾ, ಕನ್ನಡದ ಕಬ್ಜ ಸಿನಿಮಾವನ್ನು ವಿತರಣೆ ಮಾಡುತ್ತಿರುವುದು ವಿಶೇಷ. ಇನ್ನು ಹಿಂದಿಯಲ್ಲಿ ಜನಪ್ರಿಯ ನಿರ್ಮಾಪಕ ಹಾಗೂ ವಿತರಕ ಆನಂದ್ ಪಂಡಿತ್ ಅವರು ಸಿನಿಮಾದ ವಿತರಣೆ ಮಾಡಲಿದ್ದಾರೆ.
ಕಬ್ಜ ಸಿನಿಮಾವು ವಿಶ್ವದಾದ್ಯಂತ ಮಾರ್ಚ್ 17 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ಉಪೇಂದ್ರ ಜೊತೆಗೆ, ಸುದೀಪ್, ಶಿವರಾಜ್ ಕುಮಾರ್ ಸಹ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಶ್ರೀಯಾ ಶರಣ್ ನಾಯಕಿ. ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ.