Sathyajith Death News: ಕನ್ನಡ ಚಿತ್ರರಂಗದ ಹಿರಿಯ ಪೋಷಕ ನಟ ಸತ್ಯಜಿತ್ ಇನ್ನಿಲ್ಲ
Sathyajith Passes Away: ಕನ್ನಡದ ಹಿರಿಯ ನಟ ಸತ್ಯಜಿತ್ ಇಂದು (ಭಾನುವಾರ) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಇತ್ತೀಚೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಖ್ಯಾತ ನಟ ಸತ್ಯಜಿತ್ ಇಂದು (ಭಾನುವಾರ) ನಿಧನಹೊಂದಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಯಿಂದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 2 ಗಂಟೆ ಸುಮಾರಿಗೆ ಸತ್ಯಜಿತ್ ಕೊನೆಯುಸಿರೆಳೆದಿದ್ದಾರೆ ಎಂದು ಟಿವಿ9ಗೆ ಸತ್ಯಜಿತ್ ಪುತ್ರ ಆಕಾಶ್ ಮಾಹಿತಿ ನೀಡಿದ್ದಾರೆ. ಹೆಗಡೆ ನಗರದ ಶಬರಿ ನಗರದ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1.30ರ ನಂತರ ಸತ್ಯಜಿತ್ ಅಂತ್ಯಕ್ರಿಯೆ ನಡೆಯಲಿದೆ.
ಸೈಯ್ಯದ್ ನಿಜಾಮುದ್ದೀನ್ ಚಿತ್ರರಂಗದಲ್ಲಿ ಸತ್ಯಜಿತ್ ಎಂಬ ಹೆಸರಿನಿಂದ ಗುರುತಿಸಿಕೊಂಡಿದ್ದರು. 1986ರಿಂದಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು, 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಪ್ಪು, ಅರಸು, ಅಭಿ, ಆಪ್ತಮಿತ್ರ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದರು. ಹಲವು ಬಗೆಯ ಪಾತ್ರಗಳಿಗೆ ಅವರು ಬಣ್ಣ ಹಚ್ಚಿದ್ದು, ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದರು.
ಸತ್ಯಜಿತ್ ಅವರಿಗೆ ಗ್ಯಾಂಗ್ರಿನ್ ಕಾಣಿಸಿಕೊಂಡ ಬಳಿಕ ಬೇಡಿಕೆ ಕಡಿಮೆಯಾಗಿತ್ತು. 2018ರಲ್ಲಿ ತೆರೆಕಂಡ ಪ್ರಿಯಾಂಕಾ ಉಪೇಂದ್ರ ನಟನೆ ‘ಸೆಕೆಂಡ್ ಹಾಫ್’ ಚಿತ್ರದಲ್ಲಿ ವೀಲ್ಚೇರ್ನಲ್ಲಿ ಕುಳಿತುಕೊಂಡೇ ಅವರು ನಟಿಸಿದ್ದರು. ಆ ಬಳಿಕ ಬೇರೆ ಯಾವುದೇ ಸಿನಿಮಾದಲ್ಲಿ ಸತ್ಯಜಿತ್ ಕಾಣಿಸಿಕೊಂಡಿರಲಿಲ್ಲ. ನಟ ಸತ್ಯಜಿತ್, ವಿಲನ್, ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ಪುಟ್ನಂಜ, ಆಪ್ತಮಿತ್ರ, ಚೈತ್ರದ ಪ್ರೇಮಾಂಜಲಿ, ಅರುಣ ರಾಗ, ಶಿವ ಮೆಚ್ಚಿದ ಕಣ್ಣಪ್ಪ, ಯುದ್ಧಕಾಂಡ, ಮಂಡ್ಯದ ಗಂಡು, ಪೊಲೀಸ್ ಸ್ಟೋರಿ, ಅಪ್ಪು, ಧಮ್, ಅಭಿ, ಉಪ್ಪಿ 2, ಮಾಣಿಕ್ಯ, ರನ್ನ, ರಣವಿಕ್ರಮ, ಮೈತ್ರಿ ಸೇರಿ ಹಲವು ಚಿತ್ರಗಳು ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಸತ್ಯಜಿತ್ ನಿಧನದಿಂದ ಕನ್ನಡ ಚಿತ್ರರಂಗ ಆಘಾತಕ್ಕೊಳಗಾಗಿದ್ದು, ಅಭಿಮಾನಿಗಳು ಶೋಕ ವ್ಯಕ್ತಪಡಿಸುತ್ತಿದ್ಧಾರೆ.
ಇದನ್ನೂ ಓದಿ:
Karnataka Weather Today: ಕರ್ನಾಟಕದಲ್ಲಿ ಅ. 13ರವರೆಗೂ ಮಳೆಯ ಅಬ್ಬರ; ಕರಾವಳಿಯಲ್ಲಿಂದು ಹಳದಿ ಅಲರ್ಟ್ ಘೋಷಣೆ
Published On - 6:38 am, Sun, 10 October 21