ಶಿವರಾಜ್ಕುಮಾರ್ ಮಾತ್ರವಲ್ಲ, ಈ ಕುಟುಂಬದಲ್ಲಿ ಹಲವರನ್ನು ಕಾಡಿದೆ ಕ್ಯಾನ್ಸರ್
ನಟ ಶಿವರಾಜ್ಕುಮಾರ್ ಅವರು ಕ್ಯಾನ್ಸರ್ಗೆ ಚಿಕಿತ್ಸೆ ಪಡೆದಿದ್ದಾರೆ. ವಿದೇಶದಲ್ಲಿ ಅವರು ಸರ್ಜರಿ ಮುಗಿಸಿಕೊಂಡು ಬಂದಿದ್ದಾರೆ. ಅವರಿಗೆ ಕ್ಯಾನ್ಸರ್ ಉಂಟಾಗಿದೆ ಎಂಬುದು ಗೊತ್ತಾದಾಗ ಎಲ್ಲರಿಗೂ ನೋವಾಯಿತು. ‘ನಿಮಗೆ ಯಾಕೆ ಈ ರೀತಿ ಆಯಿತು’ ಅಂತ ಹಲವರು ಕೇಳಿದ್ದರು. ಆ ಬಗ್ಗೆ ಶಿವಣ್ಣ ಈಗ ಮಾತನಾಡಿದ್ದಾರೆ.

ಯಾವಾಗಲೂ ಎನರ್ಜಿಟಿಕ್ ಆಗಿರುವ ಶಿವರಾಜ್ಕುಮಾರ್ (Shivarajkumar) ಅವರಿಗೂ ಅನಾರೋಗ್ಯ ತಪ್ಪಲಿಲ್ಲ. ಕೆಲವು ತಿಂಗಳ ಹಿಂದೆ ಅವರಿಗೆ ಕ್ಯಾನ್ಸರ್ (Cancer) ಇರುವುದು ಗೊತ್ತಾಯಿತು. ಆಗ ಎಲ್ಲರಿಗೂ ಶಾಕ್ ಆಯಿತು. ಆ ವಿಷಯವನ್ನು ಶಿವಣ್ಣ ಹಂಚಿಕೊಂಡಾಗ ಅಚ್ಚರಿಪಟ್ಟವರೇ ಜಾಸ್ತಿ. ಈ ಘಟನೆಯನ್ನು ಈಗ ಶಿವರಾಜ್ಕುಮಾರ್ ನೆನಪು ಮಾಡಿಕೊಂಡಿದ್ದಾರೆ. ಪುತ್ರಿ ನಿವೇದಿತಾ (Niveditha Shivarajkumar) ಜೊತೆ ಕುಳಿತು ಟಿವಿ9ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಒಂದಷ್ಟು ವಿಷಯಗಳ ಬಗ್ಗೆ ಶಿವರಾಜ್ಕುಮಾರ್ ಅವರು ಮಾತನಾಡಿದ್ದಾರೆ.
ಅಂದಹಾಗೆ, ಶಿವರಾಜ್ಕುಮಾರ್ ಅವರ ಕುಟುಂಬದಲ್ಲಿ ಅನೇಕರಿಗೆ ಕ್ಯಾನ್ಸರ್ ಕಾಟ ಕೊಟ್ಟಿದೆ. ಆ ಬಗ್ಗೆ ಶಿವಣ್ಣ ಮಾತಾಡಿದ್ದಾರೆ. ‘ಏನೂ ಮಾಡೋಕೆ ಆಗಲ್ಲ. ಸರ್ ನಿಮಗೆ ಹೀಗೆ ಆಗಿದೆಯಾ ಅಂತ ಯಾರೋ ಕೇಳಿದರು. ಇನ್ನೊಬ್ಬರಿಗೆ ಬರಬಹುದು, ನನಗೆ ಬರಬಾರದಾ? ಆ ರೀತಿ ನಾವು ಯಾಕೆ ಯೋಚನೆ ಮಾಡಬೇಕು. ಆವಾಗಿಂದಲೂ ನಾವು ಇದನ್ನೆಲ್ಲ ನೋಡುತ್ತಾ ಬಂದಿದ್ದೇವೆ. ನಮ್ಮ ಮನೆಯಲ್ಲಿ ಅನೇಕರಿಗೆ ಈ ಸಮಸ್ಯೆ ಎದುರಾಗಿತ್ತು’ ಎಂದಿದ್ದಾರೆ ಶಿವಣ್ಣ.
‘ನಮ್ಮ ಕುಟುಂಬದಲ್ಲಿ ತಾಯಿ ಹಾಗೂ ತಂಗಿಗೆ ಕ್ಯಾನ್ಸರ್ ಬಂದಿತ್ತು. ಅದಕ್ಕೂ ಮೊದಲು ಚಿಕ್ಕಪ್ಪ ವರದಪ್ಪ ಅವರ ಮೊಮ್ಮಗಳಿಗೆ ಬಂದಿತ್ತು. ಆಕೆ ಇನ್ನೂ ಶಾಲೆಗೆ ಸೇರುವವಳಿದ್ದಳು. ಅವರ ತಾಯಿಗೂ ಬಂದಿದ್ದು. ನನ್ನ ಕಸಿನ್ ಸತೀಶ್ ಅವರಿಗೂ ಬಂದಿತ್ತು. ಇಷ್ಟೆಲ್ಲ ಜನರು ಅದನ್ನು ಫೇಸ್ ಮಾಡಿದ್ದಾರೆ. ನಾವು ಕೂಡ ಎದುರಿಸಲೇಬೇಕು. ಮುಂದೆ ಹೋಗಲೇಬೇಕು’ ಎಂದು ಶಿವರಾಜ್ಕುಮಾರ್ ಅವರು ಹೇಳಿದ್ದಾರೆ.
‘ಮೊದಲು ನನಗೆ ಅನಿಸಿದ್ದು ಏನೆಂದರೆ, ನನ್ನ ಮೇಲೆ ಜಾಸ್ತಿ ಜವಾಬ್ದಾರಿ ಇದೆ. ಮುಂದೆ ಏನಾಗುತ್ತೋ ಗೊತ್ತಿಲ್ಲ. ಕಮಿಟ್ಮೆಂಟ್ ಇದೆ. ಅದರಿಂದ ದೂರ ಹೋಗಬಾರದು. ಡಿಕೆಡಿ ಶೋ ಹಾಗೂ 45 ಸಿನಿಮಾ ಮುಗಿಸಬೇಕಿತ್ತು. ಅದಕ್ಕೂ ಮುಂಚೆ ನನಗೆ ಪ್ಯಾರಿಸ್ನಲ್ಲಿ ಬ್ರೇನ್ ಸರ್ಜರಿ ಆಗಿತ್ತು. ಲಂಡನ್ನಲ್ಲಿ ಭುಜದ ಸರ್ಜರಿ ಆಗಿತ್ತು. ಹಾರ್ಟ್ಗೆ ಸ್ಟಂಟ್ ಹಾಕಿದ್ದಾರೆ. ಕಾಲಿನಲ್ಲಿ ಎಷ್ಟು ಫ್ರಾಕ್ಚರ್ ಆಗಿದೆಯೋ ಗೊತ್ತಿಲ್ಲ. ಅದರ ಜೊತೆ ಇದು ಹೊಸದು. ಹಾಗಾಗಿ ಸ್ವಲ್ಪ ಭಯಪಡಿಸಿತು. ಆದರೆ ಕುಟುಂಬದವರು, ಸ್ನೇಹಿತರು ಜೊತೆಗೆ ಇದ್ದು ಧೈರ್ಯ ತುಂಬಿದರು’ ಎಂದು ಶಿವಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಮಂತ್ರಾಲಯಕ್ಕೆ ತೆರಳಿ ವಿಶೇಷ ಪೂಜೆ ಮಾಡಿಸಿದ ಶಿವರಾಜ್ಕುಮಾರ್-ಗೀತಾ
ಶಿವರಾಜ್ಕುಮಾರ್ ಪುತ್ರಿ ನಿವೇದಿತಾ ಅವರು ನಿರ್ಮಾಪಕಿಯಾಗಿ ‘ಫೈರ್ ಫ್ಲೈ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಪುತ್ರಿಯ ಜೊತೆ ಅವರು ಅವರು ಸಂದರ್ಶನ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.