ನಟಿ ಅನುಪ್ರಭಾಕರ್​ಗೆ ಕೊರೊನಾ ಪಾಸಿಟಿವ್​; ಎರಡನೇ ಅಲೆಯನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ ನಟಿ

ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿವರ ಹಂಚಿಕೊಂಡಿರುವ ಅನು ಪ್ರಭಾಕರ್, ತಾನು ಕೊವಿಡ್ ಪಾಸಿಟಿವ್ ಆಗಿದ್ದು, ಎಲ್ಲ ತರಹದ ಮುಂಜಾಗ್ರತೆ ತೆಗೆದುಕೊಂಡಿದ್ದರೂ ಕೊರೊನಾಗೆ ತುತ್ತಾಗಿರುವುದಾಗಿ ಹೇಳಿದ್ದಾರೆ.

  • TV9 Web Team
  • Published On - 13:09 PM, 21 Apr 2021
ನಟಿ ಅನುಪ್ರಭಾಕರ್​ಗೆ ಕೊರೊನಾ ಪಾಸಿಟಿವ್​; ಎರಡನೇ ಅಲೆಯನ್ನು ಹಗುರವಾಗಿ ಪರಿಗಣಿಸಬೇಡಿ ಎಂದು ಮನವಿ ಮಾಡಿದ ನಟಿ
ನಟಿ ಅನುಪ್ರಭಾಕರ್​

ದೇಶದಲ್ಲಿ ಕೊರೊನಾ ಎರಡನೇ ಅಲೆ ಭೀತಿ ಎಲ್ಲೆಡೆ ಶುರುವಾಗಿದ್ದು, ಬಾಲಿವುಡ್​ನಿಂದ ಹಿಡಿದು ಸ್ಯಾಂಡಲ್​ವುಡ್​ನ ಹಲವಾರು ನಟ ನಟಿಯರು ಕೊವಿಡ್ ಸೋಂಕಿಗೆ ಒಳಗಾಗಿದ್ದಾರೆ. ಈಗ ಈ ಪಟ್ಟಿಗೆ ಚಂದನವನದ ನಟಿ ಅನು ಪ್ರಭಾಕರ್ ಕೂಡ ಸೇರಿದ್ದಾರೆ. ಇಂದು ಈ ಕುರಿತು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವಿವರ ಹಂಚಿಕೊಂಡಿರುವ ಅನು ಪ್ರಭಾಕರ್, ತಾನು ಕೊವಿಡ್ ಪಾಸಿಟಿವ್ ಆಗಿದ್ದು, ಎಲ್ಲ ತರಹದ ಮುಂಜಾಗ್ರತೆ ತೆಗೆದುಕೊಂಡಿದ್ದರೂ ಕೊರೊನಾಗೆ ತುತ್ತಾಗಿರುವುದಾಗಿ ಹೇಳಿದ್ದಾರೆ. ಕುಟುಂಬದಲ್ಲಿ ಬೇರೆಲ್ಲ ಸದಸ್ಯರಿಗೆ ಕೊವಿಡ್‌ ನೆಗೆಟಿವ್ ವರದಿ ಬಂದಿದ್ದು, ತಾನು ಡಾಕ್ಟರ್‌ಗಳ ಸಲಹೆ ಪಡೆದುಕೊಂಡು ಮನೆಯಲ್ಲೇ ಸೆಲ್ಫ್ ಐಸೋಲೇಟ್ ಆಗಿರುವುದಾಗಿ ತಿಳಿಸಿದ್ದಾರೆ. ನನ್ನ ಸಂಪರ್ಕದಲ್ಲಿ ಬಂದಿರುವವರೆಲ್ಲರೂ ಟೆಸ್ಟ್ ಮಾಡಿಸಿಕೊಳ್ಳಿ, ಹಾಗೇ ಕೊರೊನಾ ಎರಡನೇ ಅಲೆಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ತಿಳಿಸುವ ಮೂಲಕ ಜಾಗರೂಕರಾಗಿರಿ ಎಂದು ತಿಳಿಸಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ನಟಿ ಸಂಜನಾ ಗಲ್ರಾನಿ ಕೊರೊನಾ ಸೋಂಕಿಗೆ ತುತ್ತಾಗಿರುವುದನ್ನು ಹೇಳಿಕೊಂಡಿದ್ದರು. ಕಳೆದ ವರ್ಷ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಮಗ ಅಭಿಷೇಕ್ ಮತ್ತು ಇಡೀ ಕುಟುಂಬ ಸೋಂಕಿಗೆ ಒಳಗಾಗಿ ಬಹಳ ದಿನ ಆಸ್ಪತ್ರೆಯಲ್ಲಿದ್ದರು. ಇತ್ತೀಚೆಗೆ ನಟ ಹಾಗೂ ಕೊಡುಗೈ ದಾನಿ ಸೋನು ಸೂದ್ ಕೂಡ ಕೊರೊನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕನ್ನಡದಲ್ಲಿ ಪ್ರಜ್ವಲ್ ದೇವರಾಜ್ ಕುಟುಂಬ ಕೂಡ ಕೊರೊನಾ ಸೋಂಕಿಗೆ ತುತ್ತಾಗಿ ಎರಡು ವಾರ ಆಗಿದೆ.

ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಮಂಜುನಾಥ ಎಂಬ ಯುವ ನಟ ಮತ್ತು ನಿರ್ಮಾಪಕ ಕೊರೊನಾದಿಂದ ತಮ್ಮ ಜೀವ ತೆತ್ತಿದ್ದಾರೆ. ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಮಗ ಮತ್ತು ನಟ ನಿಖಿಲ್ ಕುಮಾರಸ್ವಾಮಿ ಕೂಡ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಅಷ್ಟೇ ಅಲ್ಲ ಅವರ ಜೊತೆ ರೈಡರ್​ ಸಿನಿಮಾಕ್ಕಾಗಿ ಕಾಶ್ಮೀರದಲ್ಲಿ ಶೂಟಿಂಗ್​ ಮಾಡುತ್ತಿದ್ದ ಎಲ್ಲರಿಗೂ ಕೊವಿಡ್​ ಬಂದಿರುವುದಾಗಿ ಅವರು ಹಂಚಿಕೊಂಡಿದ್ದಾರೆ.

ಈ ಮಧ್ಯೆ ನಿರ್ದೇಶಕ, ಗುರುಪ್ರಸಾದ್​ ಒಂದು ವಿಡಿಯೋ ಹೊರಹಾಕಿ ಸಂಚಲನ ಮೂಡಿಸಿದ್ದಾರೆ. ತನಗೆ ಕೊವಿಡ್​ ಸೋಂಕು ತಗುಲಿದ್ದು ತಾನು ಸತ್ತರೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಕಾರಣ ಎಂದು ಹೇಳಿದ್ದು ಈಗ ಸ್ಯಾಂಡಲ್​ವುಡ್​ನಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ವರ್ಷದಿಂದಲೂ ಗಾಯಕ ಎಸ್​.ಪಿ.ಬಾಲಸುಬ್ರಹ್ಮಣ್ಯಂ ಅವರಿಂದ ಹಿಡಿದು ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಕೊರೊನಾ ವೈರಸ್ ತಗುಲಿ ಮೃತಪಡುತ್ತಿದ್ದಾರೆ. 2,000 ಚಿತ್ರಗಳಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದ ಹಾಗೂ ಮೂರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಮಸ್ತಾನ್ ಕೂಡ ಇಂದು (ಏಪ್ರಿಲ್ 21) ಕೊರೊನಾ ಸೋಂಕಿಗೆ ತುತ್ತಾಗಿ ನಿಧನರಾಗಿದ್ದಾರೆ.

ಖ್ಯಾತ ಡಿಸೈನರ್​ ಆಗಿದ್ದ ಮಸ್ತಾನ್ ಅವರಿಗೆ 63 ವರ್ಷ ವಯಸ್ಸಾಗಿತ್ತು. ಸುಮಾರು 42 ವರ್ಷಗಳಿಂದ ಚಿತ್ರರಂಗದಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಸಾವಿರಾರು ಕನ್ನಡ ಚಲನಚಿತ್ರಗಳ ಚಿತ್ರ ವಿನ್ಯಾಸಕಾರರಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಅಲ್ಲದೇ ಶುಕ್ಲಾಂಭರದರಂ, ಕಲ್ಲೇಶಿ ಮಲ್ಲೇಶಿ, ಸಿತಾರ ಎಂಬ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. ಸುಮಾರು 2,000 ಚಿತ್ರಗಳಿಗೆ ಡಿಸೈನರ್ ಆಗಿ ನಿರ್ವಹಿಸಿದ್ದು ಅವರ ಹೆಚ್ಚುಗಾರಿಕೆ. ಮಸ್ತಾನ್ ಅವರಿಗೆ ಇತ್ತೀಚೆಗೆ ಕೊರೊನಾ ವೈರಸ್ ಅಂಟಿತ್ತು. ಹೀಗಾಗಿ ಅವರನ್ನು ಹೇಸರಘಟ್ಟ ಸಪ್ತಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ:
ನಿಖಿಲ್​ ಕುಮಾರಸ್ವಾಮಿ ಬೆನ್ನಲ್ಲೇ ರೈಡರ್​ ಚಿತ್ರತಂಡಕ್ಕೂ ಕೊರೊನಾ 

Masthan Death News: ಸುಮಾರು 2,000 ಚಿತ್ರಗಳಿಗೆ ಡಿಸೈನರ್ ಆಗಿ ಕಾರ್ಯನಿರ್ವಹಿಸಿದ್ದ ಖ್ಯಾತ ಚಿತ್ರ ವಿನ್ಯಾಸಕಾರ ಮಸ್ತಾನ್ ನಿಧನ