ಕನ್ನಡದಲ್ಲೊಂದು ‘ಕಾಕ್ಟೇಲ್’; ಹೊಸ ಪ್ರಯೋಗ ಮಾಡಲು ಬಂದು ಹೊಸಬರ ಟೀಮ್
‘ಕಾಕ್ಟೇಲ್’ ಚಿತ್ರಕ್ಕೆ ವೀರೇನ್ ಕೇಶವ್ ಹೀರೋ. ಅವರಿಗೆ ಜೋಡಿಯಾಗಿ ಚರೀಷ್ಮಾ ನಟಿಸಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಸಿನಿಮಾ.
ಹೊಸಬರ ತಂಡವೊಂದು ‘ಕಾಕ್ಟೇಲ್’ (Cocktail) ಶೀರ್ಷಿಕೆಯಲ್ಲಿ ಸಿನಿಮಾ ಮಾಡಿದೆ. ಈ ಟೈಟಲ್ ಹೇಳುತ್ತಿದ್ದಂತೆಯೇ ಹಾಲಿವುಡ್ ಮತ್ತು ಬಾಲಿವುಡ್ ಸಿನಿಮಾಗಳು ನೆನಪಾಗುತ್ತವೆ. ಇದೇ ಶೀರ್ಷಿಕೆ ಇಟ್ಟುಕೊಂಡು 1988ರಲ್ಲಿ ಹಾಲಿವುಡ್ ಹಾಗೂ 2012ರಲ್ಲಿ ಬಾಲಿವುಡ್ನಲ್ಲಿ ಸಿನಿಮಾ ಮೂಡಿಬಂದಿದ್ದವು. ಆದರೆ ಆ ಚಿತ್ರಗಳಿಗೂ ಕನ್ನಡದ ಈ ‘ಕಾಕ್ಟೇಲ್’ (Cocktail Movie) ಸಿನಿಮಾಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ ನಿರ್ದೇಶಕ ಶ್ರೀರಾಮ್. ಈ ಚಿತ್ರಕ್ಕೆ ಈಗಾಗಲೇ ಎರಡು ಹಂತದ ಶೂಟಿಂಗ್ ಮುಗಿದಿದೆ. ಪ್ರಸ್ತುತ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರದ ನಿರೂಪಣೆಯಲ್ಲಿ ಹೊಸತನವನ್ನು ತೋರಿಸಲು ಪ್ರಯತ್ನಿಸಿರುವುದಾಗಿ ಹೇಳುವ ನಿರ್ದೇಶಕ ಶ್ರೀರಾಮ್ ಅವರು ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ.
‘ಕಾಕ್ಟೇಲ್’ ಚಿತ್ರಕ್ಕೆ ವೀರೇನ್ ಕೇಶವ್ ಹೀರೋ. ಅವರಿಗೆ ಜೋಡಿಯಾಗಿ ಚರೀಷ್ಮಾ ನಟಿಸಿದ್ದಾರೆ. ಇವರಿಬ್ಬರಿಗೂ ಇದು ಮೊದಲ ಸಿನಿಮಾ. ಅನುಪಮ್ ಖೇರ್ ಅವರ ಸಂಸ್ಥೆಯಲ್ಲಿ ನಟನೆಯ ಪಾಠಗಳನ್ನು ವೀರೇನ್ ಕೇಶವ್ ಕಲಿತು ಬಂದಿದ್ದಾರೆ. ಚರೀಷ್ಮಾ ಅವರಿಗೆ ಚಿತ್ರತಂಡವೇ ವರ್ಕ್ಶಾಪ್ ಮಾಡಿದೆ. ಆಡಿಷನ್ ಮೂಲಕ ಇಬ್ಬರನ್ನೂ ಆಯ್ಕೆ ಮಾಡಿಕೊಳ್ಳಲಾಯಿತು.
‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದೆ. ಒಂದೇ ಹೆಸರಿನ, ಒಂದೇ ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆಯ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಆದರೆ ಕ್ಲೈಮ್ಯಾಕ್ಸ್ನಲ್ಲಿ ಬೇರೆಯದೇ ವಿಷಯಗಳು ತೆರೆದುಕೊಳ್ಳುತ್ತವೆ. ಅನೇಕ ಅಂಶಗಳನ್ನು ಬೆರೆಸಿ, ಕಾಕ್ಟೇಲ್ ಪಾನೀಯದ ರೀತಿಯಲ್ಲಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತದೆ ಈ ಚಿತ್ರದ ನಿರೂಪಣೆ’ ಎಂದಿದ್ದಾರೆ ನಿರ್ದೇಶಕರು.
ವಿಜಯಲಕ್ಷ್ಮೀ ಕಂಬೈನ್ಸ್ ಬ್ಯಾನರ್ನಲ್ಲಿ ಡಾ. ಶಿವಣ್ಣ ಅವರು ‘ಕಾಕ್ಟೇಲ್’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಶೋಭರಾಜ್, ಮಹಾಂತೇಶ್, ಶಿವಮಣಿ, ಚಂದ್ರಕಲಾ ಮೋಹನ್, ಕರಿಸುಬ್ಬು, ರಮೇಶ್ ಪಂಡಿತ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೋಕಿತವಸ್ಯ ಸಂಗೀತ, ಮೋಹನ್ ಬಿ. ರಂಗಕಹಳೆ ಸಂಕಲನ ಮಾಡಿದ್ದಾರೆ. ಹೃದಯಶಿವ ಹಾಗೂ ಸಿರಾಜ್ ಮಿಜಾರ್ ಸಾಹಿತ್ಯ ಬರೆದಿದ್ದಾರೆ. ನರಸಿಂಹ ಸಾಹಸ, ಸುನಿಲ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಟ್ರೇಲರ್ ಬಿಡುಗಡೆ ಮಾಡಬೇಕು ಎಂದು ‘ಕಾಕ್ಟೇಲ್’ ತಂಡ ಗುರಿ ಇಟ್ಟುಕೊಂಡಿದೆ. ಫೆಬ್ರವರಿ ಕೊನೇ ಅಥವಾ ಮಾರ್ಚ್ ಮೊದಲ ವಾರದಲ್ಲಿ ಥಿಯೇಟರ್ಗಳ ಲಭ್ಯತೆ ನೋಡಿಕೊಂಡು ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾದೆ. ‘ನಮ್ಮ ಸಿನಿಮಾದ ರಿಲೀಸ್ ಪ್ಲ್ಯಾನ್ ಬಗ್ಗೆ ಪುನೀತ್ ರಾಜ್ಕುಮಾರ್ ಅವರ ಜತೆ ಮಾತುಕತೆ ಮಾಡಿದ್ದೆವು. ಒಟಿಟಿ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ ಆ ಯೋಜನೆ ಕೈಗೂಡುವುದಕ್ಕೂ ಮುನ್ನವೇ ಅವರು ನಿಧನರಾಗಿದ್ದು ನೋವಿನ ಸಂಗತಿ’ ಎಂದು ನಿರ್ದೇಶಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:
‘ಭಜರಂಗಿ 2’ ಚಿತ್ರವನ್ನು ಪುನೀತ್ ರಾಜ್ಕುಮಾರ್ಗೆ ಅರ್ಪಿಸಿದ ಶಿವರಾಜ್ಕುಮಾರ್
‘ಅಪ್ಪು ಅವರನ್ನು ಬೆಳೆಸಿದ್ದು ನಾವಲ್ಲ, ಅಭಿಮಾನಿಗಳು’: ಪುನೀತ್ ಬಗ್ಗೆ ಮಧು ಬಂಗಾರಪ್ಪ ಮಾತು