ಎರಡನೇ ಭಾನುವಾರವೂ ಭರ್ಜರಿ ಕಲೆಕ್ಷನ್ ಮಾಡಿದ ‘ಕಾಂತಾರ: ಚಾಪ್ಟರ್ 1’
Kantara Chapter 1: ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮೊದಲ ದಿನ 65 ಕೋಟಿ ಗಳಿಸಿದ್ದ ಈ ಸಿನಿಮಾ ಬಿಡುಗಡೆ ಆಗಿ ಎರಡನೇ ಭಾನುವಾರದಲ್ಲೂ ಗಳಿಕೆಯ ವೇಗವನ್ನು ಉಳಿಸಿಕೊಂಡಿದೆ. ನಿನ್ನೆ ಅಂದರೆ ಎರಡನೇ ಭಾನುವಾರ ಸಿನಿಮಾದ ಕಲೆಕ್ಷನ್ ಎಷ್ಟು? ಮಾಹಿತಿ ಇಲ್ಲಿದೆ.

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಚಾಪ್ಟರ್ 1’ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡುತ್ತಿದೆ. ಸಿನಿಮಾ ಅಕ್ಟೋಬರ್ 2 ರಂದು ದೇಶದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಆಗಿತ್ತು. ಸಿನಿಮಾ ಬಿಡುಗಡೆ ಆಗಿ ಎರಡು ವೀಕೆಂಡ್ಗಳು ಕಳೆದಿದ್ದು, ಎರಡನೇ ವೀಕೆಂಡ್ನಲ್ಲಿ ಸಹ ಸಿನಿಮಾ ದೊಡ್ಡ ಮೊತ್ತದ ಗಳಿಕೆ ಮಾಡಿದೆ. ಎರಡನೇ ಶನಿವಾರದಂದು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಸುಮಾರು 40 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ಭಾನುವಾರದ ಕಲೆಕ್ಷನ್ ಇನ್ನೂ ಹೆಚ್ಚಾಗಿದೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಎರಡನೇ ಭಾನುವಾರ ದೇಶದಾದ್ಯಂತ ಸುಮಾರು 40 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದೆ. ಆ ಮೂಲಕ ಸಿನಿಮಾದ ಒಟ್ಟಾರೆ ಕಲೆಕ್ಷನ್ ಭಾರತದಲ್ಲಿ 440 ಕೋಟಿಗೂ ಹೆಚ್ಚಾಗಿದೆ. ‘ಕಾಂತಾರ: ಚಾಪ್ಟರ್ 1’ ಸಿನಿಮಾದ ವರ್ಲ್ಡ್ ವೈಡ್ ಗಳಿಕೆ 600 ಕೋಟಿ ದಾಟಿದೆ ಎನ್ನುತ್ತಿವೆ ವರದಿಗಳು. ಮೊದಲ ವಾರ ಸಿನಿಮಾ ಪ್ರಿಯರು, ‘ಕಾಂತಾರ’ ಸಿನಿಮಾದ ಅಭಿಮಾನಿಗಳು, ರಿಷಬ್ ಅಭಿಮಾನಿಗಳು ಸಿನಿಮಾ ನೋಡಿದರೆ, ಎರಡನೇ ವಾರ ಕೌಟುಂಬಿಕ ಪ್ರೇಕ್ಷಕರು ಚಿತ್ರಮಂದಿರಕ್ಕೆ ಆಗಮಿಸಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಹಾಗಾಗಿ ಸಿನಿಮಾದ ಗಳಿಕೆ ತಗ್ಗದ್ದೆ ಮುನ್ನುಗ್ಗುತ್ತಿದೆ.
2022 ರಲ್ಲಿ ಬಿಡುಗಡೆ ಆಗಿದ್ದ ‘ಕಾಂತಾರ’ ಸಿನಿಮಾ ಮೊದಲ ವಾರಕ್ಕಿಂತಲೂ ಆ ನಂತರದ ವಾರಗಳು ಹೆಚ್ಚಿನ ಕಲೆಕ್ಷನ್ ಮಾಡಿದ್ದವು. ಅದರಲ್ಲೂ ಕುಟುಂಬ ಪ್ರೇಕ್ಷಕರು ಎರಡೂ ವಾರದ ಬಳಿಕ ಚಿತ್ರಮಂದಿರಗಳಿಗೆ ಆಗಮಿಸಿ ಸಿನಿಮಾ ವೀಕ್ಷಿಸಿದ್ದರು. ಇದರಿಂದಾಗಿ ಸಿನಿಮಾದ ಕಲೆಕ್ಷನ್ ದೊಡ್ಡ ಮೊತ್ತದಲ್ಲಿ ಹೆಚ್ಚಾಗಿತ್ತು. ಈಗಲೂ ಸಹ ಮೊದಲ ವಾರದ ಬಳಿಕ ಕೌಟುಂಬಿಕ ಪ್ರೇಕ್ಷಕರು ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಕೈ ಹಿಡಿದಿದ್ದಾರೆ.
ಇದನ್ನೂ ಓದಿ:‘ಕಾಂತಾರ: ಚಾಪ್ಟರ್ 1’ ಸಿನಿಮಾ ಯಶಸ್ಸಿನ ಬಗ್ಗೆ ಶಿವರಾಜ್ಕುಮಾರ್ ಹೇಳಿದ್ದೇನು?
ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಇನ್ನೂ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ದೀಪಾವಳಿ ಹಬ್ಬ ಸನಿಹದಲ್ಲಿದ್ದು, ಹಬ್ಬಕ್ಕೆ ಕಲೆಕ್ಷನ್ನಲ್ಲಿ ಏರಿಕೆ ಆಗುವ ವಿಶ್ವಾಸ ಚಿತ್ರತಂಡದ್ದು. ತೆಲುಗು, ತಮಿಳು ಹಾಗೂ ಉತ್ತರದ ಭಾಗಗಳಲ್ಲಿಯೂ ಸಹ ಸಿನಿಮಾದ ಕಲೆಕ್ಷನ್ ಚುರುಕಾಗಿದೆ. ಮೊದಲ ವಾರದ ಬಳಿಕ ಅಲ್ಲಿಯೂ ಸಹ ಕಲೆಕ್ಷನ್ ಅನ್ನು ಉಳಿಸಿಕೊಂಡು ಸಿನಿಮಾ ಮುಂದೆ ಹೋಗುತ್ತದೆ. ಇತ್ತೀಚೆಗಷ್ಟೆ ಮುಂಬೈಗೆ ಭೇಟಿ ನೀಡಿದ್ದ ರಿಷಬ್ ಶೆಟ್ಟಿಗೆ ಅಲ್ಲಿನ ಜನ ಪುಷ್ಪವೃಷ್ಟಿ ಮಾಡಿದ್ದು, ಹಿಂದಿ ಭಾಷಿಕರಿಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಎಷ್ಟು ಇಷ್ಟವಾಗಿದೆ ಎಂಬುದಕ್ಕೆ ಸಾಕ್ಷಿ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ ಕೆಲ ದಾಖಲೆಗಳನ್ನು ಮುರಿದಿದ್ದು, ಈ ವರ್ಷದ ಅತಿ ದೊಡ್ಡ ಸಿನಿಮಾ ಆಗಿ ಹೊರಹೊಮ್ಮುತ್ತಿದೆ. ಈ ವರ್ಷ ಬಿಡುಗಡೆ ಆಗಿ ಅತಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಹಿಂದಿಯ ‘ಛಾವಾ’ ಗಳಿಕೆಯನ್ನು ಹಿಂದಿಕ್ಕಲು ಸಿನಿಮಾಕ್ಕೆ ಇನ್ನೂ 400 ಕೋಟಿ ಗಳಿಕೆಯ ಅಗತ್ಯವಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




