‘ಬಾಹುಬಲಿ’ (Bahubali) ತೆರೆಕಂಡ ನಂತರದಲ್ಲಿ ‘ಬಾಹುಬಲಿ 2’ ಚಿತ್ರದ ಬಗ್ಗೆ ದೊಡ್ಡ ಕೌತುಕ ಸೃಷ್ಟಿ ಆಗಿತ್ತು. ಆ ಬಳಿಕ ಸೀಕ್ಚೆಲ್ ಚಿತ್ರವೊಂದು ಹೆಚ್ಚು ನಿರೀಕ್ಷೆ ಸೃಷ್ಟಿ ಮಾಡಿದೆ ಎಂದರೆ ಅದು ಯಶ್ (Yash) ನಟನೆಯ ‘ಕೆಜಿಎಫ್ 2’ (KGF Chapter 2) ಮಾತ್ರ. ಈ ಸಿನಿಮಾ ತೆರೆಗೆ ಬರೋಕೆ ಇನ್ನು ಕೇವಲ ಎರಡು ವಾರ ಬಾಕಿ ಇದೆ. ಚಿತ್ರದ ಪ್ರಚಾರ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ರಿಲೀಸ್ ಆದ ಸಿನಿಮಾ ಟ್ರೇಲರ್ ಸೃಷ್ಟಿ ಮಾಡಿದ ದಾಖಲೆ ತುಂಬಾನೇ ದೊಡ್ಡದು. ಎಲ್ಲಾ ಭಾಷೆಗಳಲ್ಲಿ ಈ ಟ್ರೇಲರ್ ಕೋಟಿ ಕೋಟಿ ವೀಕ್ಷಣೆ ಕಂಡಿದೆ. ಈಗ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈ ಚಿತ್ರ ಯಾವ ಪ್ರಮಾಣಪತ್ರ ಪಡೆದಿದೆ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿದೆ.
‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ಸೆನ್ಸಾರ್ ಮಂಡಳಿಯ ಎದುರು ಇಡಲಾಗಿತ್ತು. ಸಿನಿಮಾವನ್ನು ನೋಡಿರುವ ಸೆನ್ಸಾರ್ ಮಂಡಳಿಯವರು ‘ಯು/ಎ’ ಸರ್ಟಿಫಿಕೇಟ್ ನೀಡಿದ್ದಾರೆ. ಅಂದರೆ, ಈ ಸಿನಿಮಾವನ್ನು ಎಲ್ಲರೂ ವೀಕ್ಷಣೆ ಮಾಡಬಹುದು. ಆದರೆ, 12 ವರ್ಷಕ್ಕಿಂತ ಕೆಳಗಿನವರು ತಂದೆ-ತಾಯಿಯ ಜತೆಯಲ್ಲಿ ಈ ಚಿತ್ರ ವೀಕ್ಷಣೆ ಮಾಡಬಹುದು.
ಹಾಗಾದರೆ, ಈ ಸಿನಿಮಾದ ಅವಧಿ ಎಷ್ಟು? ಆ ಪ್ರಶ್ನೆಗೂ ಉತ್ತರ ಇದೆ. ‘ಕೆಜಿಎಫ್ ಚಾಪ್ಟರ್ 1’ ಅವಧಿ 2.35 ನಿಮಿಷ ಇತ್ತು. ಸಿನಿಮಾದ ಮೇಕಿಂಗ್ ನೋಡಿ ಬಾಲಿವುಡ್ ಮಂದಿಯೂ ಬೆರಗಾಗಿದ್ದರು. ಈಗ ‘ಕೆಜಿಎಫ್ 2’ ಬರುತ್ತಿದೆ. ಎರಡನೇ ಚಾಪ್ಟರ್ನ ಅವಧಿ 168 ನಿಮಿಷ ಇದೆ. ಅಂದರೆ 2 ಗಂಟೆ 48 ನಿಮಿಷ ಸಿನಿಮಾ ಪ್ರದರ್ಶನ ಕಾಣಲಿದೆ. ತಮಿಳು ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಕಾರ್ತಿಕ್ ರವಿವರ್ಮ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
#KGFChapter2 Censored U/A
Runtime 2hr 48mins#KGF2onApr14 pic.twitter.com/GCW4Gkupoq— Karthik Ravivarma (@Karthikravivarm) March 30, 2022
ಏಪ್ರಿಲ್ 14ರಂದು ಐದು ಭಾಷೆಗಳಲ್ಲಿ ‘ಕೆಜಿಎಫ್ 2’ ಸಿನಿಮಾ ತೆರೆಗೆ ಬರುತ್ತಿದೆ. ಮಾರ್ಚ್ 27ರಂದು ನಡೆದ ನಡೆದ ಗ್ರ್ಯಾಂಡ್ ಇವೆಂಟ್ನಲ್ಲಿ ಐದೂ ಭಾಷೆಗಳಲ್ಲಿ ಟ್ರೇಲರ್ ಲಾಂಚ್ ಆಗಿದೆ. ಇಂದು (ಮಾರ್ಚ್ 31) ಮಧ್ಯಾಹ್ನ 1 ಗಂಟೆ ವೇಳೆಗೆ ಕನ್ನಡದಲ್ಲಿ ಈ ಸಿನಿಮಾದ ಟ್ರೇಲರ್ 2.2 ಕೋಟಿ (17 ಮಿಲಿಯನ್) ವೀಕ್ಷಣೆ ಕಂಡಿದೆ. ಹಿಂದಿಯಲ್ಲಿ ಅತಿ ಹೆಚ್ಚು ಅಂದರೆ, 6.7 ಕೋಟಿ (67ಮಿಲಿಯನ್) ವೀವ್ಸ್ ಆಗಿದೆ. ತಮಿಳಿನಲ್ಲಿ 1.6 ಕೋಟಿ (16 ಮಿಲಿಯನ್), ತೆಲುಗಿನಲ್ಲಿ 2.5 ಕೋಟಿ (25 ಮಿಲಿಯನ್) ವೀಕ್ಷಣೆ ಕಂಡಿದೆ. ಮಲಯಾಳಂನಲ್ಲೂ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವ ಸೂಚನೆ ಸಿಕ್ಕಿದೆ. ಮಲಯಾಳಂನಲ್ಲಿ ಈ ಸಿನಿಮಾದ ಟ್ರೇಲರ್ 96 ಲಕ್ಷ ಬಾರಿ ವೀಕ್ಷಣೆ ಕಂಡಿದೆ.
ಇದನ್ನೂ ಓದಿ: ‘ರಕ್ತದಿಂದ ಬರೆದ ಕಥೆ ಇದು’; ‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್
‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ಗೆ ಕೋಟಿಕೋಟಿ ವೀಕ್ಷಣೆ; ಯಶ್ ಅವರನ್ನು ತಡೆಯುವವರೇ ಇಲ್ಲ
Published On - 2:30 pm, Thu, 31 March 22