
ಯಶ್ ನಟಿಸಿರುವ ‘ಟಾಕ್ಸಿಕ್’ (Toxic) ಸಿನಿಮಾಗೆ ಚಂದನವನದ ಸೆಲೆಬ್ರಿಟಿಗಳಿಂದ ಬೆಂಬಲ ಸಿಗುತ್ತಿದೆ. ಆಗಸ್ಟ್ 26ರಂದು ಬಿಡುಗಡೆ ಆದ ಈ ಚಿತ್ರಕ್ಕೆ ಹಲವರು ನೆಗೆಟಿವ್ ವಿಮರ್ಶೆ ನೀಡಿದ್ದರು. ಇಂಥ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟ-ನಟಿಯರು ಮೌನ ವಹಿಸಿದ್ದಾರೆ ಎಂಬ ಟೀಕೆ ಎದುರಾಗಿತ್ತು. ಆದರೆ ಈಗ ಕಿಚ್ಚ ಸುದೀಪ್ (Kichcha Sudeep) ಅವರು ಈ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಯಶ್ (Yash) ಅವರ ಪ್ರಯತ್ನಕ್ಕೆ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ. ಅವರ ಮಾತಿನಿಂದಾಗಿ ‘ಟಾಕ್ಸಿಕ್’ ಚಿತ್ರಕ್ಕೆ ಬಲ ಹೆಚ್ಚಿದೆ.
‘ಯಶ್, ನಿಮ್ಮ ಹಿಂದಿನ ಬ್ಲಾಕ್‌ಬಸ್ಟರ್ ಸಿನಿಮಾದ ಹಾದಿಯಲ್ಲೇ ಮತ್ತೊಂದು ಸಹಜವಾದ, ನಿರೀಕ್ಷಿತ ಅಥವಾ ಹಳೆಯ ಫಾರ್ಮುಲಾ ಶೈಲಿಯ ಸಿನಿಮಾ ಮಾಡುವ ಬದಲು, ಹೊಸದಾದ ಮತ್ತು ವಿಭಿನ್ನವಾದ ಪ್ರಯತ್ನಕ್ಕೆ ಕೈಹಾಕಿದ್ದೀರಿ. ಇದಕ್ಕೆ ನಿಜಕ್ಕೂ ಬೇರೆಯದೇ ಆದ ಮನಸ್ಥಿತಿ, ಆತ್ಮವಿಶ್ವಾಸ ಮತ್ತು ಪ್ರಮುಖವಾಗಿ ಇಂತಹ ಧೈರ್ಯ ಬೇಕಾಗುತ್ತದೆ’ ಎಂದು ಸುದೀಪ್ ಹೊಗಳಿದ್ದಾರೆ.
‘ಟಾಕ್ಸಿಕ್ ಒಂದು ಅಪರೂಪದ ಹಾಗೂ ಶ್ಲಾಘನೀಯ ಪ್ರಯತ್ನ. ಇದರಲ್ಲಿರುವ ಹಲವು ಭಾಗಗಳು ನಿಜಕ್ಕೂ ಕುತೂಹಲಕಾರಿಯಾಗಿದ್ದು, ಆಳವಾದ ಚರ್ಚೆ ಮತ್ತು ಕಲಿಕೆಗೆ ದಾರಿ ಮಾಡಿಕೊಡುತ್ತವೆ. ಸಾಂಪ್ರದಾಯಿಕ ಶೈಲಿಯಿಂದ ಹೊರಬಂದು ಇಂತಹ ಪ್ರಯೋಗ ಮಾಡುವ ಧೈರ್ಯ ತೋರಿಸಿದ್ದಕ್ಕೆ ನಿಮಗೆ ಅಭಿನಂದನೆಗಳು. ಶುಭವಾಗಲಿ, ನನ್ನ ಗೆಳೆಯ’ ಎಂದು ಸುದೀಪ್ ಅವರು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
Just want to say this, @TheNameIsYash — you’ve genuinely tried something out of the box rather than taking the predictable route of making another regular, expected, formulaic follow-up to your previous commercial blockbuster.
It takes a different mindset, conviction, and most…
— Kichcha Sudeepa (@KicchaSudeep) August 28, 2026
ನಟ ಉಪೇಂದ್ರ ಕೂಡ ‘ಟಾಕ್ಸಿಕ್’ ಚಿತ್ರ ನೋಡಿ ವಿಮರ್ಶೆ ಹಂಚಿಕೊಂಡಿದ್ದಾರೆ. ‘ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ. ಆದರೆ ದೊಡ್ಡವರಿಗಾಗಿ? ಟಾಕ್ಸಿಕ್ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ. ಒಂದು ಹೊಸ ಲೋಕ. ಒಂದು ಸಂಪೂರ್ಣ ಹೊಸ ಅನುಭವ. ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ. ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್’ ಎಂದು ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್’ ಸಿನಿಮಾ ವಿಮರ್ಶೆ ಮಾಡಿದ ಯೂಟ್ಯೂಬರ್‌ಗೆ ಲೀಗಲ್ ನೋಟಿಸ್ ನೀಡಿದ ಚಿತ್ರತಂಡ
ಸುದೀಪ್, ಉಪೇಂದ್ರ ಮಾತ್ರವಲ್ಲದೇ ನಿರ್ದೇಶಕ ಆರ್. ಚಂದ್ರು ಕೂಡ ‘ಟಾಕ್ಸಿಕ್’ ತಂಡಕ್ಕೆ ಶುಭ ಹಾರೈಸಿದ್ದಾರೆ. ‘ಪ್ರೀತಿಯ ಯಶ್, ಟಾಕ್ಸಿಕ್- ಇದು ಕೇವಲ ಸಿನಿಮಾ ಅಲ್ಲ. ಕನ್ನಡಿಗನೊಬ್ಬ ಜಗತ್ತನ್ನೇ ಗೆಲ್ಲುವ ಪ್ರಯತ್ನ. ಹಾಗಾಗಿ ಪ್ರತಿಯೊಬ್ಬ ಕನ್ನಡಿಗನೂ ಇದಕ್ಕೆ ಪ್ರಶಂಸಿಸಬೇಕು, ಜೊತೆಗೆ ನಿಲ್ಲಬೇಕು. ನಿಮ್ಮ ಪ್ರಯತ್ನಕ್ಕೆ ಶಭಾಷ್’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.