ಕಡು ಬಡತನದಲ್ಲೂ ಅಪ್ಪುಗಾಗಿ ಅದ್ದೂರಿ ಕಾರ್ಯಕ್ರಮ; ಮಗನಿಗೆ ಪುನೀತ್​ ಎಂದು ನಾಮಕರಣ

ಕಡು ಬಡತನದಲ್ಲೂ ಅಪ್ಪುಗಾಗಿ ಅದ್ದೂರಿ ಕಾರ್ಯಕ್ರಮ; ಮಗನಿಗೆ ಪುನೀತ್​ ಎಂದು ನಾಮಕರಣ
ಪಾರ್ವತಿ, ಪಕ್ಕೀರಪ್ಪ, ಪುನೀತ್​ ರಾಜ್​ಕುಮಾರ್​

ಪುನೀತ್​ ರಾಜ್​ಕುಮಾರ್​ ಎಂದರೆ ಪಕ್ಕೀರಪ್ಪ, ಪಾರ್ವತಿ ದಂಪತಿಗೆ ಅಚ್ಚುಮೆಚ್ಚು. ಅಪ್ಪು​ ಮೇಲಿನ ಅಭಿಮಾನಕ್ಕಾಗಿ ಅವರು ತಮ್ಮ ಮಗನಿಗೆ ಪುನೀತ್​ ಎಂದು ನಾಮಕರಣ ಮಾಡಿದ್ದಾರೆ.

TV9kannada Web Team

| Edited By: Madan Kumar

Jan 27, 2022 | 9:54 AM

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗದ ಪಾಲಿಗೆ ದೌರ್ಭಾಗ್ಯದ ಸಂಗತಿ. ಅಪ್ಪು ಅಗಲಿ ಮೂರು ತಿಂಗಳು ಕಳೆಯುತ್ತಿದೆ. ಎಷ್ಟೇ ದಿನಗಳು ಉರುಳಿದರು ಅಭಿಮಾನಿಗಳ (Puneeth Rajkumar Fans) ಮನದಲ್ಲಿ ‘ಪವರ್​ ಸ್ಟಾರ್​’ ನೆನಪು ಸದಾ ಹಸಿರಾಗಿ ಇರುತ್ತದೆ. ಪ್ರತಿ ದಿನವೂ ಅವರ ಹೆಸರನ್ನು ಅಮರವಾಗಿಸುವ ಕಾರ್ಯ ಅಭಿಮಾನಿಗಳಿಂದ ನಡೆಯುತ್ತಿದೆ. ರಸ್ತೆ, ವೃತ್ತ, ಪಾರ್ಕ್​ ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಪುನೀತ್​ ರಾಜ್​ಕುಮಾರ್​ ಹೆಸರನ್ನು ಇಡುವ ಕಾರ್ಯ ನಡೆದಿದೆ. ಎಷ್ಟೋ ಜನರು ತಮ್ಮ ಮಕ್ಕಳಿಗೆ ಪುನೀತ್​ ಎಂದು ನಾಮಕರಣ ಮಾಡುತ್ತಿದ್ದಾರೆ. ಕೊಪ್ಪಳ ತಾಲೂಕಿನ ಬಂಡಿ ಹರ್ಲಾಪುರ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಈ ಗ್ರಾಮದ ಪಕ್ಕೀರಪ್ಪ, ಪಾರ್ವತಿ ದಂಪತಿಯು ತಮ್ಮ ಮಗನಿಗೆ ಪುನೀತ್​ ಎಂದು ಹೆಸರಿಟ್ಟು ಅದ್ದೂರಿಯಾಗಿ ನಾಮಕರಣ (Naming Ceremony) ಸಮಾರಂಭ ಮಾಡಿದ್ದಾರೆ. ಅಪ್ಪು ಮೇಲಿನ ಅಭಿಮಾನಕ್ಕಾಗಿ ಈ ಕಾರ್ಯ ಮಾಡಿರುವ ದಂಪತಿಗೆ ಬಡತನ ಅಡ್ಡಿ ಆಗಿಲ್ಲ. ಕಡು ಬಡತನದ ನಡುವೆಯೂ ಅವರು ಈ ಸಮಾರಂಭ ಮಾಡಿರುವುದು ವಿಶೇಷ.

ಪುನೀತ್​ ರಾಜ್​ಕುಮಾರ್​ ಎಂದರೆ ಪಕ್ಕೀರಪ್ಪ, ಪಾರ್ವತಿ ದಂಪತಿಗೆ ಅಚ್ಚುಮೆಚ್ಚು. ನೆಚ್ಚಿನ ನಟನನ್ನು ಕಳೆದುಕೊಂಡ ನೋವು ಈ ದಂಪತಿಗೆ ಇದೆ. ‘ಪವರ್​ ಸ್ಟಾರ್​’​ ಮೇಲಿನ ಅಭಿಮಾನಕ್ಕಾಗಿ ಅವರು ತಮ್ಮ ಮಗನಿಗೆ ಪುನೀತ್​ ಎಂದು ನಾಮಕರಣ ಮಾಡಿದ್ದಾರೆ. ಜೊತೆಗೆ ರಸಮಂಜರಿ ಕಾರ್ಯಕ್ರಮ ನಡೆಸಿದ್ದಾರೆ. ದಂಪತಿಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ.

ಯಾತನೂರು ಗ್ರಾಮದಲ್ಲೂ ಮಗುವಿಗೆ ಪುನೀತ್​ ಎಂದು ನಾಮಕರಣ:

ಕೆಲವೇ ದಿನಗಳ ಹಿಂದೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಾತನೂರು ಗ್ರಾಮದಲ್ಲೂ ಇದೇ ರೀತಿ ಆಯಿತು. ಯಾತನೂರು ಗ್ರಾಮದ ಸಿದ್ದು ಮತ್ತು ಕಾವೇರಿ ದಂಪತಿಗೆ ಪುನೀತ್​ ರಾಜ್​ಕುಮಾರ್​ ಎಂದರೆ ಅಪಾರ ಅಭಿಮಾನ. ಹಾಗಾಗಿ ತಮ್ಮ ಮೊದಲನೇ ಮಗುವಿಗೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಿದ್ದಾರೆ. ಡಿ.5ರಂದು ಈ ಜೋಡಿಗೆ ಗಂಡು ಮಗು ಜನಿಸಿತು. ಹೆರಿಗೆಗೂ ಮುನ್ನವೇ ಅವರು ಈ ತೀರ್ಮಾನಕ್ಕೆ ಬಂದಿದ್ದರು. ಒಂದುವೇಳೆ ಗಂಡು ಮಗು ಜನಿಸಿದರೆ ಪುನೀತ್​ ರಾಜ್​ಕುಮಾರ್​ ಎಂದು ನಾಮಕರಣ ಮಾಡಲು ದಂಪತಿ ನಿರ್ಧರಿಸಿದ್ದರು. ಅವರ ಆಸೆ ನೆರವೇರಿತು.

ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರು ಇಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ಯಾರಿಗೂ ಸಾಧ್ಯವಾಗುತ್ತಿಲ್ಲ. ಭೌತಿಕವಾಗಿ ಪುನೀತ್​ ನಮ್ಮೊಂದಿಗೆ ಇಲ್ಲದೇ ಇರಬಹುದು. ಆದರೆ ಅಭಿಮಾನಿಗಳ ಎದೆಯಲ್ಲಿ ಪುನೀತ್​ ಎಂದೆಂದಿಗೂ ಅಮರ. ಕಂಠೀರವ ಸ್ಡುಡಿಯೋ ಆವರಣದಲ್ಲಿ ಇರುವ ಅಪ್ಪು ಸಮಾಧಿಗೆ ಪ್ರತಿದಿನ ನೂರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ.

ಇದನ್ನೂ ಓದಿ:

ಅಪ್ಪು-ಅಂಬಿ ಫ್ಯಾನ್ಸ್​ ನಡುವೆ ಮನಸ್ತಾಪ? ರಸ್ತೆಗೆ ಪುನೀತ್​ ಹೆಸರಿಡುವುದಕ್ಕೆ ಅಂಬರೀಷ್​ ಅಭಿಮಾನಿಗಳ ಆಕ್ಷೇಪ

James Special Poster: ‘ಜೇಮ್ಸ್’​ ಹೊಸ ಪೋಸ್ಟರ್​ ರಿಲೀಸ್​; ಪುನೀತ್​ ಫ್ಯಾನ್ಸ್​ಗೆ ಗಣರಾಜ್ಯೋತ್ಸವದ ಗಿಫ್ಟ್

Follow us on

Related Stories

Most Read Stories

Click on your DTH Provider to Add TV9 Kannada