ಲಹರಿ ಮಹೇಶ್, ಸಿದ್ ಶ್ರೀರಾಮ್ ಧ್ವನಿಯಲ್ಲಿ ‘ಬ್ರ್ಯಾಟ್’ ಚಿತ್ರದ ‘ನಾನೇ ನೀನಂತೆ..’ ಹಾಡು
‘ಸರಿಗಮಪ’ ಖ್ಯಾತಿಯ ಲಹರಿ ಮಹೇಶ್ ಅವರಿಗೆ ‘ಬ್ರ್ಯಾಟ್’ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿತು. ಖ್ಯಾತ ಗಾಯಕ ಸಿದ್ ಶ್ರೀರಾಮ್ ಜೊತೆ ಅವರು ಹಾಡಿದ ‘ನಾನೇ ನೀನಂತೆ..’ ಹಾಡು ಬಿಡುಗಡೆ ಆಗಿದೆ. ಸಾಂಗ್ ರಿಲೀಸ್ ಕಾರ್ಯಕ್ರಮದಲ್ಲಿ ‘ಬ್ರ್ಯಾಟ್’ ಚಿತ್ರತಂಡದ ಸದಸ್ಯರು ಭಾಗಿಯಾಗಿದ್ದರು. ಇತ್ತೀಚೆಗೆ ಸುದ್ದಿಗೋಷ್ಠಿ ನಡೆಯಿತು.

ನಟ ಡಾರ್ಲಿಂಗ್ ಕೃಷ್ಣ ಅವರು ‘ಬ್ರ್ಯಾಟ್’ (Brat) ಸಿನಿಮಾದಲ್ಲಿ ನಟಿಸಿದ್ದಾರೆ. ಶೀರ್ಷಿಕೆ ಮೂಲಕ ಈ ಸಿನಿಮಾ ಕೌತುಕ ಸೃಷ್ಟಿ ಮಾಡಿದೆ. ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಸಕ್ಸಸ್ ಬಳಿಕ ನಿರ್ದೇಶಕ ಶಶಾಂಕ್ ಮತ್ತು ನಟ ಡಾರ್ಲಿಂಗ್ ಕೃಷ್ಣ (Darling Krishna) ಅವರ ಕಾಂಬಿನೇಷನ್ನಲ್ಲಿ ‘ಬ್ರ್ಯಾಟ್’ ಸಿನಿಮಾ ಸಿದ್ಧವಾಗಿದೆ. ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ನಿರ್ಮಾಪಕ ಮಂಜುನಾಥ್ ಕಂದಕೂರ್ ಅವರು ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ವಿಶೇಷ ಎಂದರೆ, ಈ ಸಿನಿಮಾ ಕನ್ನಡದ ಜೊತೆಗೆ 5 ಭಾಷೆಗಳಲ್ಲಿ ಬಿಡುಗಡೆಗೆ ಸಜ್ಜಾಗಿದೆ. ‘ಬ್ರ್ಯಾಟ್’ ಸಿನಿಮಾದ ‘ನಾನೇ ನೀನಂತೆ..’ ಹಾಡನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.
ಅರ್ಜುನ್ ಜನ್ಯ ಅವರು ‘ಬ್ರ್ಯಾಟ್’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ನಾನೇ ನೀನಂತೆ..’ ಹಾಡು ಆನಂದ್ ಆಡಿಯೋ ಮೂಲಕ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗಿದೆ. ಕನ್ನಡ ಮತ್ತು ತೆಲುಗಿನಲ್ಲಿ ಸಿದ್ ಶ್ರೀರಾಮ್ ಹಾಡಿದ್ದಾರೆ. ಕನ್ನಡದ ಫಿಮೇಲ್ ವರ್ಷನ್ಗೆ ಲಹರಿ ಮಹೇಶ್ ಧ್ವನಿಯಾಗಿದ್ದಾರೆ.
ಇನ್ನುಳಿದ 4 ಭಾಷೆಗಳಲ್ಲಿ ಫೀಮೇಲ್ ವರ್ಷನ್ಗೆ ಸಿರೀಶಾ ಅವರು ಧ್ವನಿ ನೀಡಿದ್ದಾರೆ. ಹಿಂದಿಯಲ್ಲಿ ಮೇಲ್ ವರ್ಷನ್ ನಿಹಾಲ್ ತಾವ್ರೋ, ತೆಲುಗು ಮತ್ತು ತಮಿಳಿನಲ್ಲಿ ಶ್ರೀಕಾಂತ್ ಹರಿಹರನ್ ಹಾಡಿದ್ದಾರೆ. ಈ ಮೊದಲು ಶಶಾಂಕ್, ಅರ್ಜುನ್ ಜನ್ಯ ಮತ್ತು ಸಿದ್ ಶ್ರೀರಾಮ್ ಅವರ ಕಾಂಬಿನೇಶನ್ನಲ್ಲಿ ಬಂದ ‘ಲವ್ 360’ ಸಿನಿಮಾದ ‘ಜಗವೇ ನೀನು ಗೆಳತಿಯೇ..’ ಸಾಂಗ್ ಸೂಪರ್ ಹಿಟ್ ಆಗಿತ್ತು. ಅದೇ ರೀತಿ ಈಗ ‘ನಾನೇ ನೀನಂತೆ..’ ಸಾಂಗ್ ಕೂಡ ಸದ್ದು ಮಾಡಲು ಆರಂಭಿಸಿದೆ.
‘ನಾನೇ ನೀನಂತೆ..’ ಹಾಡು:
ಸುದ್ದಿಗೋಷ್ಠಿಯಲ್ಲಿ ನಟ ಡಾರ್ಲಿಂಗ್ ಕೃಷ್ಣ ಮಾತನಾಡಿದರು. ‘ಈ ಸಿನಿಮಾದಲ್ಲಿನ ನನ್ನ ಫಸ್ಟ್ ಲುಕ್ಗೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅದಕ್ಕೆ ನಮ್ಮ ಡೈರೆಕ್ಟರ್ ಶಶಾಂಕ್ ಮತ್ತು ತಂಡವೇ ಕಾರಣ. ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ’ ಎಂದು ಅವರು ಹೇಳಿದರು. ನಿರ್ದೇಶಕ ಶಶಾಂಕ್ ಮಾತನಾಡಿ, ‘ನನ್ನ ಸಿನಿ ಜರ್ನಿಯಲ್ಲೇ ಅತೀ ಹೆಚ್ಚು ವೆಚ್ಚದಲ್ಲಿ ಮೂಡಿಬಂದಿರುವ ಹಾಡಿದು. ಈ ಹಾಡಿನ ಟ್ಯೂನ್ ಅಂತಿಮಗೊಳಿಸಲು ಸುಮಾರು 6 ತಿಂಗಳು ಸಮಯ ಹಿಡಿಯಿತು. ನಿರ್ಮಾಪಕ ಮಂಜುನಾಥ್ ಅವರು ಯಾವುದೇ ಕೊರತೆ ಬಾರದ ರೀತಿಯಲ್ಲಿ ಈ ಹಾಡನ್ನು ನಿರ್ಮಾಣ ಮಾಡಿದ್ದಾರೆ’ ಎಂದರು.
ಇದನ್ನೂ ಓದಿ: ಶ್ರೇಯಾ ಘೋಷಾಲ್ ಹಾಡಬೇಕಿದ್ದ ಸಾಂಗ್ ಈಗ ಲಹರಿ ಮಹೇಶ್ ಪಾಲಾಯ್ತು
ಮನಿಶಾ ಕಂದಕೂರ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ನಾನು ಮೂಲತಃ ಕನ್ನಡದ ಹುಡುಗಿ. ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ಮಧ್ಯಮ ವರ್ಗದ ಹುಡುಗಿಯ ಪಾತ್ರ ಮಾಡಿದ್ದೇನೆ. ಸಿನಿಮಾದಲ್ಲೂ ನನ್ನ ಪಾತ್ರದ ಹೆಸರು ಮನಿಶಾ’ ಎಂದು ಅವರು ಮಾಹಿತಿ ನೀಡಿದರು. ಸಾಂಗ್ ಬಿಡುಗಡೆ ವೇಳೆ ನಿರ್ಮಾಪಕ ಮಂಜುನಾಥ್ ಕಂದಕೂರ್, ಗಾಯಕಿ ಲಹರಿ ಮಹೇಶ್, ಆನಂದ್ ಆಡಿಯೋ ಶ್ಯಾಮ್, ಡ್ಯಾನ್ಸ್ ಕೊರಿಯೋಗ್ರಾಫರ್ ಕಲೈ ಮಾಸ್ಟರ್, ಛಾಯಾಗ್ರಾಹಕ ಅಭಿಷೇಕ್ ಕಲ್ಲತ್ತಿ ಮುಂತಾದವರು ಭಾಗಿ ಆಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




