ನಟಿ ಲೀಲಾವತಿ ಸ್ಮಾರಕ ಉದ್ಘಾಟನೆಗೆ ಕ್ಷಣಗಣನೆ; ವಿನೋದ್ ರಾಜ್ ಕನಸು ನನಸು
ಖ್ಯಾತ ನಟಿ ಲೀಲಾವತಿ ಅವರ ಅಗಲಿಕೆಯ ನಂತರ ಸ್ಮಾರಕ ನಿರ್ಮಾಣ ಮಾಡುವ ಕೆಲಸಕ್ಕೆ ವಿನೋದ್ ರಾಜ್ ಕೈ ಹಾಕಿದ್ದರು. ಈಗ ಆ ಕೆಲಸ ಪೂರ್ಣಗೊಂಡಿದೆ. ಸ್ಮಾರಕ ಉದ್ಘಾಟನೆಯ ಕ್ಷಣ ಕೂಡ ಬಂದಿದೆ. ಡಿಸೆಂಬರ್ 5ರಂದು ಲೀಲಾವತಿ ಅವರ ಭವ್ಯ ಸ್ಮಾರಕ ಉದ್ಘಾಟನೆಗೊಳ್ಳಲಿದೆ. ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.
ಕನ್ನಡದ ಖ್ಯಾತ ನಟಿ ಲೀಲಾವತಿ ಅವರು 2023ರ ಡಿಸೆಂಬರ್ 8ರಂದು ನಿಧನರಾಗಿದರು. ಅವರು ಇಹಲೋಕ ತ್ಯಜಿಸಿ ಒಂದು ವರ್ಷ ಕಳೆದಿದ್ದು, ತಾಯಿಗಾಗಿ ಮಗ ವಿನೋದ್ ರಾಜ್ ಅವರು ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಅಮ್ಮ-ಮಗ ಅಂದ್ರೆ ಲೀಲಾವತಿ-ವಿನೋದ್ ರಾಜ್ ಎನ್ನುವಷ್ಟು ಇಬ್ಬರೂ ಸದಾ ಜೊತೆಯಲ್ಲಿ ಇರುತ್ತಿದ್ದರು. ಅಮ್ಮನನ್ನು ಕಳೆದುಕೊಂಡ ವಿನೋದ್ ರಾಜ್ ತಾಯಿಗೆ ಸುಂದರವಾದ ಸ್ಮಾರಕ ಕಟ್ಟಿದ್ದಾರೆ. ಈ ಸ್ಮಾರಕ ಗುರುವಾರ (ಡಿ.5) ಉದ್ಘಾಟನೆ ಆಗಲಿದೆ. ಸೋಲದೇವನಹಳ್ಳಿಯ ಸ್ವಂತ ತೋಟದಲ್ಲಿ ಸ್ಮಾರಕ ನಿರ್ಮಾಣ ಮಾಡಿದ್ದಾರೆ.
ನಟ ವಿನೋದ್ ರಾಜ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೋಲದೇವನಹಳ್ಳಿಯಲ್ಲಿ ಇರುವ ತೋಟದ ಮುಂಭಾಗ ಈ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಡಿಸೆಂಬರ್ 5ರಂದು ಬೆಳಿಗ್ಗೆ 10 ಈ ಸ್ಮಾರಕವನ್ನು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ನೆಲಮಂಗಲ ಶಾಸಕ ಎಸ್. ಶ್ರೀನಿವಾಸ್ ಅವರು ಉದ್ಘಾಟನೆ ಮಾಡಲಿದ್ದಾರೆ.
ಲೀಲಾವತಿ ಅಗಲಿದ ಕ್ಷಣದಿಂದಲೂ ವಿನೋದ್ ರಾಜ್ ಅವರು ತಾಯಿಯ ನೆನಪಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಅಮ್ಮನ ನೆನಪಿಗಾಗಿ ಯಾರ ಸಹಾಯವೂ ಪಡೆಯದೆ ಒಂದು ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ತಮ್ಮ ತೋಟದಲ್ಲಿ ಸ್ಮಾರಕವನ್ನು ಅವರು ನಿರ್ಮಿಸಿದ್ದಾರೆ. ಲೀಲಾವತಿಯವರ ಬಾಲ್ಯದಿಂದ ಬದುಕಿನ ಕೊನೆ ಕ್ಷಣದವರೆಗೂ ಸವೆಸಿ ಹೋದ ಕಾಲಘಟ್ಟಗಳ 60ಕ್ಕೂ ಹೆಚ್ಚು ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಲಾಗಿದೆ ಎಂಬುದು ವಿಶೇಷ.
ಇದನ್ನೂ ಓದಿ: ಅರ್ಕಾವತಿ ನದಿಗೆ ತ್ಯಾಜ್ಯ ಸುರಿದವರನ್ನು ಹಿಡಿದು ತರಾಟೆಗೆ ತೆಗೆದುಕೊಂಡ ವಿನೋದ್ ರಾಜ್
ಲೀಲಾವತಿ ಅವರ ಸ್ಮಾರಕಕ್ಕೆ ದೇವನಹಳ್ಳಿಯ ಬಳಿಯ ಸಾದಹಳ್ಳಿ ಶಿಲೆಗಳನ್ನು ಬಳಸಿ ದೇಗುಲದ ರೂಪ ನೀಡಲಾಗಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಚಲನಚಿತ್ರ ಕಲಾವಿದರಿಗೆ ಸನ್ಮಾನವನ್ನು ಕೂಡ ವಿನೋದ್ ರಾಜ್ ಹಮ್ಮಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿಕೆ. ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ಸಚಿವರು ಆದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ, ನೆಲಮಂಗಲ ಶಾಸಕ ಶ್ರೀನಿವಾಸ್ ಸೇರಿದಂತೆ ಮುಖಂಡರು, ಗ್ರಾಮಸ್ಥರು ಸ್ಮಾರಕ ಉದ್ಘಾಟನೆಗೆ ಆಗಮಿಸಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:38 pm, Wed, 4 December 24