‘ಲವ್ ಓಟಿಪಿ’ಗೆ ನೀರಸ ಪ್ರತಿಕ್ರಿಯೆ, ಕಣ್ಣೀರಿಡುತ್ತಾ ನೋವು ತೋಡಿಕೊಂಡ ನಟ
Love OTP movie: ‘ಅಕಿರ’, ‘ವಾಸು ನಾನ್ ಪಕ್ಕಾ ಲೋಕಲ್’ ಇತ್ತೀಚೆಗಿನ ‘ಆರಾಮ್ ಅರವಿಂದ ಸ್ವಾಮಿ’ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ ನಿನ್ನೆ (ಶುಕ್ರವಾರ) ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ಪ್ರಕಟಗೊಂಡಿವೆ. ಆದರೆ ಜನ ಸಿನಿಮಾ ನೋಡಲು ಬಂದಿಲ್ಲ. ಇದು ಅನೀಶ್ ಅವರಿಗೆ ತೀವ್ರ ನೋವುಂಟು ಮಾಡಿದ್ದು, ಕಣ್ನೀರು ಹಾಕುತ್ತಾ ಭಾವುಕವಾಗಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.

ಕನ್ನಡದಲ್ಲಿ ಈಗಾಗಲೇ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿರುವ ಅನೀಶ್ ಅವರ ಹೊಸ ಸಿನಿಮಾ ‘ಲವ್ ಒಟಿಪಿ’ (Love OTP) ಇದೇ ವಾರ ಬಿಡುಗಡೆ ಆಗಿದೆ. ಸಿನಿಮಾದ ಬಗ್ಗೆ ಒಳ್ಳೆಯ ವಿಮರ್ಶೆಗಳು ವ್ಯಕ್ತವಾಗಿವೆ. ಪ್ರೇಮಕತೆಯುಳ್ಳ ಈ ಸಿನಿಮಾವನ್ನು ಲವ-ಲವಿಕೆಯಿಂದ ನಿರ್ದೇಶಕರು ತೆರೆಗೆ ತಂದಿದ್ದಾರೆ. ಸಿನಿಮಾದ ಬಗ್ಗೆ ಸಾಕಷ್ಟು ಧನಾತ್ಮಕ ವಿಮರ್ಶೆಗಳು ಬಂದ ಹೊರತಾಗಿಯೂ ಚಿತ್ರಮಂದಿರಗಳಿಗೆ ಜನ ಬಂದಿಲ್ಲ. ಇದು ನಟ ಅನೀಶ್ ಅವರಿಗೆ ಬೇಸರ ತರಿಸಿದ್ದು, ಕಣ್ಣೀರು ಹಾಕುತ್ತಾ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
‘ನನ್ನ ಹದಿನಾರು ವರ್ಷದ ನಟನಾ ವೃತ್ತಿ ಜೀವನದಲ್ಲಿ ಇಷ್ಟು ಒಳ್ಳೆಯ ವಿಮರ್ಶೆಗಳು ನನ್ನ ಇನ್ಯಾವ ಸಿನಿಮಾಕ್ಕೂ ಸಿಕ್ಕಿರಲಿಲ್ಲ. ಸಿನಿಮಾ ನೋಡಿದವರೆಲ್ಲ ಬ್ಲಾಕ್ ಬಸ್ಟರ್ ವಿಮರ್ಶೆಗಳನ್ನೇ ನೀಡಿದ್ದಾರೆ. ವಿಮರ್ಶೆಗಳನ್ನು ನೋಡಿ ಒಂದೊಳ್ಳೆ ಸಿನಿಮಾ ಕೊಟ್ಟೆವು ಎಂಬ ನೆಮ್ಮದಿಯಲ್ಲಿ ಇದ್ದೆ. ಆದರೆ ಇಂದು (ನವೆಂಬರ್ 15) ಬೆಳಿಗ್ಗೆ ಕಲೆಕ್ಷನ್ಗಳನ್ನು ನೋಡಿದಾಗ ಬಹಳ ಬೇಸರ ಆಯ್ತು. ನಾನು ಚಿತ್ರರಂಗದಲ್ಲಿ ಇರಬೇಕಾ ಬೇಡವಾ ಎಂಬ ಪ್ರಶ್ನೆಗಳು ನನಗೆ ಹುಟ್ಟಿಕೊಂಡಿವೆ’ ಎಂದು ಭಾವುಕರಾಗಿದ್ದಾರೆ ನಟ.
‘ಸಿನಿಮಾ ರಂಗದಲ್ಲಿ ನಾನು ಇರಬೇಕಾ ಬೇಡವಾ ಎನಿಸಿತು. ನನ್ನಿಂದ ಪ್ರೇಕ್ಷಕರನ್ನು ಸೆಳೆಯಲು ಆಗುತ್ತಿಲ್ಲವಾ ಅನಿಸಲು ಶುರುವಾಗಿದೆ. ಸಿನಿಮಾಗಳಲ್ಲಿ ನಟಿಸುವುದು ನಿಲ್ಲಿಸಿಬಿಡಬೇಕಾ ಎನಿಸಿದೆ. ಏಕೆಂದರೆ ಎಂಥಹಾ ಒಳ್ಳೆಯ ಸಿನಿಮಾ ಮಾಡಿ, ಅದಕ್ಕೆ ಬಹಳ ಒಳ್ಳೆಯ ವಿಮರ್ಶೆಗಳು ಬಂದಿದ್ದರೂ ಸಹ ಜನರನ್ನು ರೀಚ್ ಆಗಲು ಆಗುತ್ತಿಲ್ಲ. ಸಿನಿಮಾ ನೋಡಿದ ಪತ್ರಕರ್ತ ಮಿತ್ರರು ಕರೆ ಮಾಡಿ ಖುಷಿ ವ್ಯಕ್ತಪಡಿಸಿದರು. ಒಳ್ಳೆಯ ಸಿನಿಮಾ ಮಾಡಿದ್ದೀರಿ ಎಂದು ಆದರೆ ಜನ ಬರುತ್ತಿಲ್ಲ ಎಂಬುದು ಅವರಿಗೇ ಶಾಕ್ ಆಗಿದೆ’ ಎಂದಿದ್ದಾರೆ ಅನೀಶ್.
ಇದನ್ನೂ ಓದಿ:ಸಿನಿಮಾ ಒಳ್ಳೆ ವಿಮರ್ಶೆ ಪಡೆದರೂ ಜನ ಬರ್ತಿಲ್ಲ ಎಂದು ಅನೀಶ್ ಕಣ್ಣೀರು
‘ನನ್ನ ‘ಅಕಿರ’, ‘ವಾಸು ನಾನ್ ಪಕ್ಕಾ ಲೋಕಲ್’ ಇತ್ತೀಚೆಗಿನ ‘ಆರಾಮ್ ಅರವಿಂದ ಸ್ವಾಮಿ’ ಅಂತಹಾ ಸಿನಿಮಾಗಳನ್ನು ನೋಡಿ ನನ್ನ ಮೇಲೆ ನಂಬಿಕೆ ಇರಿಸಿಕೊಂಡವರಿಗೆ ಹೇಳುತ್ತಿದ್ದೇನೆ. ಮುಂದಿನ ವಾರ ನೋಡುತ್ತೀನಿ, ಒಟಿಟಿಗೆ ಬಂದ ಮೇಲೆ ನೋಡುತ್ತೀನಿ ಎಂದೆಲ್ಲ ಅಂದುಕೊಳ್ಳಬೇಡಿ. ಯಾಕೆಂದರೆ ನನಗೆಂದೂ ಯಾರೂ ಇಲ್ಲ. ನಾನು ಒಬ್ಬಂಟಿ, ನಟನೆ ಜೊತೆಗೆ ಎಲ್ಲವನ್ನೂ ನಾನೇ ಮಾಡಬೇಕು. ಹಣ ಕೊಟ್ಟು ಚಿತ್ರಮಂದಿರಗಳಲ್ಲಿ ಸಿನಿಮಾ ಉಳಿಸಿಕೊಳ್ಳಲು ಆಗುವುದಿಲ್ಲ. ನನ್ನನ್ನು ಉಳಿಸಬೇಕು ಎಂದರೆ ಈ ಎರಡು ದಿನಗಳು ಮಾತ್ರವೇ ಇರುವುದು. ಇದು ಮಿಸ್ ಆದರೆ, ಇದು ನನ್ನ ಕೊನೆಯ ಪ್ರಯತ್ನ ಎನಿಸಿಕೊಳ್ಳುತ್ತೆ’ ಎಂದಿದ್ದಾರೆ ಅನೀಶ್.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




