ಹಿಂದೂ-ಕ್ರೈಸ್ತ ಸಂಪ್ರದಾಯದಂತೆ ಮಗನಿಗೆ ಹೆಸರಿಟ್ಟಿದ್ದಕ್ಕೆ ಕಾರಣ ತಿಳಿಸಿದ ಮೇಘನಾ ರಾಜ್
Raayan Raj Sarja: ಚಿರಂಜೀವಿ ಸರ್ಜಾ ಪುತ್ರನಿಗೆ ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರವೂ ನಾಮಕರಣ ಮಾಡಿದ್ದರ ಬಗ್ಗೆ ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂಥವರಿಗೆ ಮೇಘನಾ ರಾಜ್ ಸ್ಪಷ್ಟನೆ ನೀಡಿದ್ದಾರೆ.
ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರನಿಗೆ ರಾಯನ್ ರಾಜ್ ಸರ್ಜಾ ಎಂದು ಹೆಸರು ಇಡಲಾಗಿದೆ. ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯಗಳ ಪ್ರಕಾರ ಶುಕ್ರವಾರ (ಸೆ.3) ನಾಮಕರಣ ಮಾಡಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ ಕೂಡ. ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರವೂ ಮಗನಿಗೆ ನಾಮಕರಣ ಮಾಡಿದ್ದರ ಬಗ್ಗೆ ಕೆಲವು ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅಂಥವರಿಗೆ ಸ್ಪಷ್ಟನೆ ನೀಡುವ ರೀತಿಯಲ್ಲಿ ಮೇಘನಾ ರಾಜ್ ಅವರು ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ನಾಮಕರಣ ಶಾಸ್ತ್ರದ ವಿಡಿಯೋ ಹಂಚಿಕೊಂಡು, ಅದರ ಜೊತೆ ತಮ್ಮ ಮಾತುಗಳನ್ನು ಬರೆದುಕೊಂಡಿದ್ದಾರೆ.
‘ನನ್ನ ಮಗನಿಗೆ ಅತ್ಯುತ್ತಮವಾದನ್ನು ನೀಡುವುದು ತಾಯಿಯಾಗಿ ನನಗೆ ಮುಖ್ಯವಾಗುತ್ತದೆ. ಅವನ ತಂದೆ-ತಾಯಿ ಖುಷಿಪಟ್ಟ ರೀತಿಯಲ್ಲಿ ಎರಡೂ ಧರ್ಮಗಳಲ್ಲಿ ಇರುವ ಒಳ್ಳೆಯದು ಅವನಿಗೆ ಯಾಕೆ ಸಿಗಬಾರದು? ಜಾತಿ-ಧರ್ಮಗಳ ಭೇದ ಇಲ್ಲದೇ ಎಲ್ಲ ಜನರು ಅವನಿಗಾಗಿ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದಾರೆ. ಎಲ್ಲ ದೇವರಿಂದಲೂ ನಾವು ಆಶೀರ್ವಾದ ಬೇಡುತ್ತೇವೆ’ ಎಂದು ಮೇಘನಾ ಪೋಸ್ಟ್ ಮಾಡಿದ್ದಾರೆ.
‘ಎರಡೂ ಸಂಪ್ರದಾಯದ ಪ್ರಕಾರ ಇದನ್ನು ಮಾಡುವುದು ನನಗೆ ಮುಖ್ಯವಾಗಿತ್ತು. ಯಾಕೆಂದರೆ ಅವನ ತಂದೆ, ನಮ್ಮ ರಾಜ ಚಿರು ಅವರು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದರು. ಎರಡೂ ಸಂಪ್ರದಾಯದಲ್ಲಿ ಇರುವ ಉತ್ತಮ ವಿಚಾರಗಳನ್ನು ಆಚರಿಸಿದ್ದೇವೆ’ ಎಂದು ಮೇಘನಾ ಸ್ಪಷ್ಟನೆ ನೀಡಿದ್ದಾರೆ.
‘ರಾಯನ್ ಎಂಬ ಈ ಹೆಸರು ಕೂಡ ಎಲ್ಲ ಧರ್ಮಕ್ಕೆ ಸೇರಿದೆ. ಬೇರೆ ಬೇರೆ ವರ್ಷನ್, ಬೇರೆ ಬೇರೆ ಉಚ್ಛಾರ ಇರಬಹುದು. ಆದರೆ ಅರ್ಥ ಒಂದೇ. ರಾಯನ್ ರಾಜ್ ಸರ್ಜಾ ಎಂದು ನಮ್ಮ ಯುವರಾಜನನ್ನು ಪರಿಚಯಿಸುತ್ತಿದ್ದೇವೆ. ಮಗನೇ ನೀನು ತಂದೆಯಂತೆಯೇ ಬೆಳೆಯಬೇಕು. ಜನರನ್ನು ಮತ್ತು ಜನರು ಮಾಡುವ ಮಾನವೀಯ ಕೆಲಸಗಳನ್ನು ಅವರು ಪ್ರೀತಿಸುತ್ತಿದ್ದರು. ಜನರ ಹಿನ್ನೆಲೆ ನೋಡಿ ಪ್ರೀತಿಸುತ್ತಿರಲಿಲ್ಲ’ ಎಂದು ಮೇಘನಾ ಬರೆದುಕೊಂಡಿದ್ದಾರೆ.
View this post on Instagram
ಧ್ರುವ ಸರ್ಜಾ, ಪ್ರಮೀಳಾ ಜೋಷಾಯ್, ಸುಂದರ್ ರಾಜ್, ಧ್ರುವ ಪತ್ನಿ ಪ್ರೇರಣಾ, ಪ್ರಜ್ವಲ್ ದೇವರಾಜ್, ಅವರ ಪತ್ನಿ ರಾಗಿಣಿ ಚಂದ್ರನ್ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ‘ಸ್ವರ್ಗದ ಬಾಗಿಲನ್ನು ತೆರೆದುಕೊಟ್ಟ ಯುವರಾಜ’ ಎಂಬ ಅರ್ಥ ಈ ಹೆಸರಿಗೆ ಇದೆ ಎಂದು ಆ ದಿನವೇ ಮೇಘನಾ ರಾಜ್ ವಿವರಿಸಿದ್ದರು. ‘ರಾಯನ್ ಎಂಬ ಹೆಸರು ನನ್ನ ಮನಸಿನಲ್ಲಿ ಮೊದಲಿನಿಂದಲೂ ಇತ್ತು. ಚಿರು ನಮ್ಮ ಪಾಲಿಗೆ ರಾಜ. ಅವರಿಗೆ ಹುಟ್ಟಿದ ಈ ಮಗು ಯುವರಾಜ. ನಮ್ಮ ಎಲ್ಲರ ಜೀವನದಲ್ಲಿ ಕತ್ತಲೆ ತುಂಬಿತ್ತು. ಆದರೆ ನಮಗೆ ಬೆಳಕು ತಂದವನೇ ನನ್ನ ಮಗ’ ಎಂದು ಮೇಘನಾ ರಾಜ್ ಹೇಳಿದರು.
ಇದನ್ನೂ ಓದಿ:
ಮೇಘನಾ ರಾಜ್ ಸುದ್ದಿಗೋಷ್ಠಿ: ರಾಯನ್ ರಾಜ್ ಸರ್ಜಾ ಹೆಸರಿನ ಬಗ್ಗೆ ಮನಬಿಚ್ಚಿ ಮಾತನಾಡಿದ ಕುಟುಂಬ
‘ಮೇಘನಾಳನ್ನು ನಾವು ನೋಡಿಕೊಳ್ತೀವಿ, ಬೇರೆ ಯಾರೂ ಬೇಡ’; ಪ್ರಮೀಳಾ ಜೋಷಾಯ್ ನೇರ ಮಾತು