‘ನಾಗವಲ್ಲಿ ಬಂಗಲೆ’ ಸಿನಿಮಾದ ಪೋಸ್ಟರ್, ಟೀಸರ್ ಬಿಡುಗಡೆ; ಫೆ.28ರಂದು ತೆರೆಗೆ
ಫೆಬ್ರವರಿ 28ರಂದು ‘ನಾಗವಲ್ಲಿ ಬಂಗಲೆ’ ಸಿನಿಮಾ ಬಿಡುಗಡೆ ಆಗಲಿದೆ. ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ 6 ಮುಖ್ಯ ಪಾತ್ರಗಳು ಈ ಸಿನಿಮಾದಲ್ಲಿ ಇವೆ. ಈ ಚಿತ್ರದ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ ಮಾಡಲಾಗಿದೆ. ತೇಜಸ್ವಿನಿ, ಸಿಮ್ರಾನ್, ರೂಪಶ್ರೀ, ಮಾನಸಾ, ಸುಷ್ಮಾ, ಶ್ವೇತಾ, ರಂಜಿತಾ, ಯಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.
![‘ನಾಗವಲ್ಲಿ ಬಂಗಲೆ’ ಸಿನಿಮಾದ ಪೋಸ್ಟರ್, ಟೀಸರ್ ಬಿಡುಗಡೆ; ಫೆ.28ರಂದು ತೆರೆಗೆ](https://images.tv9kannada.com/wp-content/uploads/2025/01/nagavalli-bangale-team.jpg?w=1280)
ನಾಗವಲ್ಲಿ ಎಂಬ ಹೆಸರು ಕೇಳಿದರೆ ಸಾಕು ಹಾರರ್ಪ್ರಿಯರ ಕಿವಿ ಚುರುಕಾಗುತ್ತದೆ. ಹಾರರ್ ಸಿನಿಮಾ ಲೋಕದಲ್ಲಿ ಆ ಪರಿ ಕ್ರೇಜ್ ಸೃಷ್ಟಿ ಮಾಡಿರುವ ಪಾತ್ರ ಅದು. ಈಗ ‘ನಾಗವಲ್ಲಿ ಬಂಗಲೆ’ ಶೀರ್ಷಿಕೆಯಲ್ಲಿ ಹೊಸ ಸಿನಿಮಾ ಬರುತ್ತಿದೆ. ಟೈಟಲ್ ಹೀಗಿರುವಾಗ ಸಿನಿಮಾದ ಕಥಾವಸ್ತು ಯಾವ ರೀತಿ ಇರಲಿದೆ ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಹೌದು, ಈ ಬಾರಿ ಕೂಡ ಪ್ರೇಕ್ಷಕರರನ್ನು ಭಯ ಬೀಳುಸುವ ಪ್ರಯತ್ನವನ್ನು ಈ ಸಿನಿಮಾ ಮೂಲಕ ಮಾಡಲು ಹೊರಟಿದೆ ಹೊಸ ತಂಡ.
ಇತ್ತೀಚೆಗೆ ‘ನಾಗವಲ್ಲಿ ಬಂಗಲೆ’ ಸಿನಿಮಾ ಟೀಸರ್ ಮತ್ತು ಪೋಸ್ಟರ್ ಬಿಡುಗಡೆ ಮಾಡಲಾಯಿತು. ಶಾಸಕ ಕೆ. ಗೋಪಾಲಯ್ಯ ಮತ್ತು ಲಹರಿ ವೇಲು ಅವರು ಟೀಸರ್, ಪೋಸ್ಟರ್ ಬಿಡುಗಡೆ ಮಾಡಿದರು. ಬಳಿಕ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಮಾಜಿ ಉಪ ಮಹಾಪೌರರಾದ ಪುಟ್ಟರಾಜು ಕೂಡ ಈ ವೇಳೆ ಹಾಜರಿದ್ದರು. ಈ ಸಿನಿಮಾವನ್ನು ಫೆಬ್ರವರಿ 28 ರಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ: ಘೋಷಣೆಯಾಯ್ತು ಭಾರತದ ಅತ್ಯುತ್ತಮ ಹಾರರ್ ಸಿನಿಮಾದ ಎರಡನೇ ಭಾಗ
ಕವಿ ರಾಜೇಶ್ ಅವರು ‘ನಾಗವಲ್ಲಿ ಬಂಗಲೆ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಪ್ರತಿನಿಧಿಸುವ 6 ಪಾತ್ರಗಳಿವೆ. ಆರು ಹುಡುಗಿಯರು ಈ ಪಾತ್ರಗಳನ್ನು ನಿಭಾಯಿಸಿದ್ದಾರೆ. ನಾಗವಲ್ಲಿ ಪಾತ್ರದಲ್ಲಿ ತೇಜಸ್ವಿನಿ ನಟಿಸಿದ್ದಾರೆ. ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಪಾತ್ರಗಳಿಗೆ ಸಿಮ್ರಾನ್, ಮಾನಸಾ, ರೂಪಶ್ರೀ, ಸುಷ್ಮಾ, ರಂಜಿತಾ, ಶ್ವೇತಾ ಅವರು ಬಣ್ಣ ಹಚ್ಚಿದ್ದಾರೆ.
ಈ ಸಿನಿಮಾದಲ್ಲಿ ನಾಯಕನಾಗಿ ಯಶ್ ನಟಿಸಿದ್ದಾರೆ. ತ್ರಿಭುವನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಆರು ಪಾತ್ರಗಳು ‘ನಾಗವಲ್ಲಿ ಬಂಗಲೆ’ಯನ್ನು ಪ್ರವೇಶಿಸಿದಾಗ ಏನೆಲ್ಲ ಘಟನೆಗಳು ನಡೆಯುತ್ತವೆ ಎಂಬುದೇ ಸಿನಿಮಾದ ಸಾರಾಂಶ ಎಂದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಜೆ.ಎಂ. ಪ್ರಹ್ಲಾದ್ ಅವರು ಮಾಹಿತಿ ನೀಡಿದ್ದಾರೆ. ‘ಹಂಸ ವಿಷನ್ಸ್’ ಮೂಲಕ ನೆ.ಲ. ಮಹೇಶ್ ಮತ್ತು ನೇವಿ ಮಂಜು ಅವರು ಸಿನಿಮಾವನ್ನು ನಿರ್ಮಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.