‘ಸಾಹಸ ಸಿಂಹ’ ವಿಷ್ಣುವರ್ಧನ್ (Dr Vishnuvardhan) ಎಂದರೆ ಚಂದನವನದಲ್ಲಿ ಅನೇಕರಿಗೆ ಸ್ಫೂರ್ತಿ. ಇಂದು (ನ.27) ಅವರ ಹೊಸ ಮನೆಯ ಗೃಹ ಪ್ರವೇಶ ಮಾಡಲಾಗಿದೆ. ಬೆಂಗಳೂರಿನ ಜಯನಗರದಲ್ಲಿ ಈ ಮನೆ ಇದೆ. ಇದಕ್ಕೆ (Vishnuvardhan New House) ‘ವಲ್ಮೀಕ’ ಎಂದು ಹೆಸರು ಇಡಲಾಗಿದೆ. ಗೃಹ ಪ್ರವೇಶದ ಸಮಾರಂಭಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು, ಸಿನಿಮಾ-ಕಿರುತೆರೆ ಸೆಲೆಬ್ರಿಟಿಗಳು ಆಗಮಿಸಿ ವಿಷ್ಣುವರ್ಧನ್ ಅವರ ಕುಟುಂಬದ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ವೇಳೆ ನವರಸ ನಾಯಕ ಜಗ್ಗೇಶ್ (Navarasa Nayaka Jaggesh) ಅವರು ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಹಲವು ವರ್ಷಗಳ ಹಿಂದೆ ಜಯನಗರದಲ್ಲಿ ವಿಷ್ಣುವರ್ಧನ್ ಮನೆ ಕಟ್ಟಿದಾಗ ಪರಿಸ್ಥಿತಿ ಯಾವ ರೀತಿ ಇತ್ತು ಎಂಬುದರ ಬಗ್ಗೆ ಜಗ್ಗೇಶ್ ಮಾತನಾಡಿದ್ದಾರೆ. ಅಲ್ಲದೇ, ಈಗ ಚಿತ್ರರಂಗದ ನಿರ್ಮಾಪಕರು ವಿಷ್ಣು ಅಳಿಯ ಅನಿರುದ್ಧ್ ಅವರ ಪರ ನಿಲ್ಲಬೇಕು ಎಂದು ಜಗ್ಗೇಶ್ ಹೇಳಿದ್ದಾರೆ.
‘ವಿಷ್ಣುವರ್ಧನ್ ಅವರು ನಮಗೆಲ್ಲ ಹಿರಿಯರು. ನಮಗೆ ಶುಭ ಹಾರೈಸಿದವರು ಅವರು. ಈ ಮನೆಗೆ ಸಂಬಂಧ ಪಟ್ಟಂತೆ ಒಂದು ಬ್ಯೂಟಿಫುಲ್ ಕಥೆ ಇದೆ’ ಎಂದು ಜಗ್ಗೇಶ್ ಮಾತು ಆರಂಭಿಸಿದರು. ‘ಮೊದಲಿಗೆ ವಿಷ್ಣುವರ್ಧನ್ ಅವರು ಇಲ್ಲೊಂದು ಮನೆ ಕಟ್ಟುತ್ತಾರೆ. ಆಗ ಪಕ್ಕದ ಸೈಟಿನ ವ್ಯಕ್ತಿ ಬಂದು, ಸರ್ ನೀವು ನಮ್ಮ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದೀರಿ ಅಂತ ಹೇಳ್ತಾನೆ. ಆಗ ವಿಷ್ಣುವರ್ಧನ್ ಗಾಬರಿಯಾದರು. ಆದರೆ ಪಕ್ಕದ ಸೈಟಿನವರು ಎಂಥ ಅದ್ಭುತ ವ್ಯಕ್ತಿ ಎಂದರೆ, ಪರವಾಗಿಲ್ಲ ಸರ್ ಈ ಜಾಗ ಕೂಡ ನೀವೇ ಇಟ್ಕೊಳ್ಳಿ ಅಂತ ಕೊಟ್ಟರು. ಹಾಗಾಗಿ ಇಲ್ಲಿ ವಿಷ್ಣುವರ್ಧನ್ ಅವರಿಗೆ ಡಬಲ್ ಸೈಟ್ ಸಿಕ್ಕಿತು’ ಎಂದಿದ್ದಾರೆ ಜಗ್ಗೇಶ್.
‘ವಿಷ್ಣುವರ್ಧನ್ ಅವರಿಗೆ ಇದು ಪ್ರಿಯವಾದ ಜಾಗ. ಪರಿಸರದಲ್ಲಿ ನಾನು ಇರುತ್ತೇನೆ ಅಂತ ಭಗವದ್ಗೀತೆಯಲ್ಲಿ ಕೃಷ್ಣ ಹೇಳ್ತಾನೆ. ವಿಷ್ಣುವರ್ಧನ್ ಅವರ ಮನೆಯ ಮಹಡಿಯಿಂದ ನೋಡಿದರೆ ಮಲೆನಾಡಿನಲ್ಲಿ ಇದ್ದಂತಹ ಭಾವ ಮೂಡುತ್ತದೆ. ಶುದ್ಧವಾಗಿ ಬಾಳಿದವರಿಗೆ ಭಗವಂತ ಕೊಡುವ ಆಶೀರ್ವಾದ ಇದು. ಈ ಸಂದರ್ಭದಲ್ಲಿ ಆ ಸಿಂಹ ಇದ್ದಿದ್ದರೆ ಈ ಮನೆಯ ಒಂದೊಂದು ಜಾಗದಲ್ಲಿ ಹೆಂಗೆ ಘರ್ಜನೆ ಮಾಡುತ್ತಿತ್ತು ಎಂಬ ಪ್ರಶ್ನೆ ನನ್ನ ಮನದಲ್ಲಿ ಕಾಡಿತು’ ಎಂದು ಜಗ್ಗೇಶ್ ಹೇಳಿದ್ದಾರೆ.
‘ಇದು ಒಂದು ಮನೆ ರೀತಿ ಕಾಣುತ್ತಿಲ್ಲ. ದೇವಸ್ಥಾನದ ರೀತಿ ಇದೆ. ನನಗೆ ಬಹಳ ಖುಷಿಯಾದ ದಿನ ಇದು. ಈ ಸಂದರ್ಭದಲ್ಲಿ ಕನ್ನಡದ ಎಲ್ಲ ನಿರ್ಮಾಪಕರಲ್ಲಿ ನಾನು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ತುಂಬ ವರ್ಷಗಳ ಕಾಲ ವಿಷ್ಣುವರ್ಧನ್ ಅವರು ನಮ್ಮನ್ನೆಲ್ಲ ರಂಜಿಸಿದರು. ಅವರ ಅಳಿಯ ಅನಿರುದ್ಧ್ ಎಂದರೆ ಮಗನ ಥರ. ಅವರ ಜೊತೆ ಮಾಧ್ಯಮ ಮತ್ತು ಚಿತ್ರರಂಗ ನಿಲ್ಲಬೇಕು ಎಂಬುದು ನನ್ನ ಶುಭ ಹಾರೈಕೆ’ ಎಂದು ಜಗ್ಗೇಶ್ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:19 pm, Sun, 27 November 22