AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗ್ಗೇಶ್​ ಮನೆಗೆ ಬಂತು ಹೊಸ BMW ಕಾರು; ಅಚ್ಚರಿಯ ರೀತಿಯಲ್ಲಿ ಸಿಕ್ಕಿದೆ ಗುರು ರಾಯರ ಪ್ರತಿಮೆ

Jaggesh: ಬಹುಬೇಡಿಕೆಯ ನಟ ಜಗ್ಗೇಶ್​ ಅವರು ಹೊಸ BMW ಕಾರು ಖರೀದಿಸಿದ್ದಾರೆ. ಅದರ ಜೊತೆ ಗುರು ರಾಯರ ಪ್ರತಿಮೆ ಸಿಕ್ಕಿದ್ದು ವಿಶೇಷ.

ಜಗ್ಗೇಶ್​ ಮನೆಗೆ ಬಂತು ಹೊಸ BMW ಕಾರು; ಅಚ್ಚರಿಯ ರೀತಿಯಲ್ಲಿ ಸಿಕ್ಕಿದೆ ಗುರು ರಾಯರ ಪ್ರತಿಮೆ
ಗುರು ರಾಯರ ಪ್ರತಿಮೆ ಸಿಕ್ಕ ಖುಷಿಯಲ್ಲಿ ಸ್ನೇಹಿತರ ಜೊತೆ ಜಗ್ಗೇಶ್​
TV9 Web
| Edited By: |

Updated on: May 08, 2022 | 12:53 PM

Share

ನಟ ಜಗ್ಗೇಶ್​ ಅವರು ರಾಘವೇಂದ್ರ ಸ್ವಾಮಿಗಳ (Raghavendra Swamy) ಭಕ್ತರು ಎಂಬುದನ್ನು ಹೊಸದಾಗಿ ಹೇಳಬೇಕಾದ್ದಿಲ್ಲ. ಅವರ ವೃತ್ತಿ ಜೀವನದಲ್ಲಿ ಗುರು ರಾಯರ ಕೃಪೆ ಸಾಕಷ್ಟಿದೆ. ಆ ಬಗ್ಗೆ ಅನೇಕ ಸಂದರ್ಭಗಳಲ್ಲಿ ಜಗ್ಗೇಶ್​ ಅವರು ಹೇಳಿಕೊಂಡಿದ್ದುಂಟು. ಬದುಕಿನ ಅನೇಕ ತಿರುವುಗಳಲ್ಲಿ ತಮಗೆ ಸೂಕ್ತ ದಾರಿ ತೋರಿಸಿದ್ದೇ ರಾಘವೇಂದ್ರ ಸ್ವಾಮಿಗಳು ಎಂಬುದನ್ನು ಜಗ್ಗೇಶ್​ ಎಷ್ಟೋ ಬಾರಿ ಸ್ಮರಿಸಿಕೊಂಡಿದ್ದಿದೆ. ಪ್ರತಿ ದಿನವೂ ಅವರು ಗುರು ರಾಯರಿಗೆ ಪೂಜೆ ಸಲ್ಲಿಸುತ್ತಾರೆ. ರಾಯರ ಮೇಲೆ ಅಪಾರವಾದ ಭಕ್ತಿ ಮತ್ತು ನಂಬಿಕೆಯನ್ನು ಇಟ್ಟುಕೊಂಡಿರುವ ಜಗ್ಗೇಶ್​ (Jaggesh) ಅವರಿಗೆ ಇಂದಿಗೂ ಒಂದಿಲ್ಲೊಂದು ರೂಪದಲ್ಲಿ ರಾಘವೇಂದ್ರ ಸ್ವಾಮಿಗಳ ಇರುವಿಕೆ ಅರಿವಿಗೆ ಬರುತ್ತಿದೆ. ಆ ಕುರಿತು ಅವರು ಸೋಶಿಯಲ್​ ಮೀಡಿಯಾದಲ್ಲಿ ಆಗಾಗ ಪೋಸ್ಟ್​ ಮಾಡುತ್ತಿರುತ್ತಾರೆ. ಇತ್ತೀಚೆಗೆ ನಡೆದ ಒಂದು ಘಟನೆಯನ್ನು ಅವರೀಗ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಭಕ್ತರು ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ರಾಘವೇಂದ್ರ ಸ್ವಾಮಿಗಳು ಯಾವ ರೀತಿಯಲ್ಲಿ ಈಡೇರಿಸುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿ ಈ ಘಟನೆಯನ್ನು ‘ನವರಸ ನಾಯಕ’ ಜಗ್ಗೇಶ್ (Navarasa Nayaka Jaggesh)​ ವಿವರಿಸಿದ್ದಾರೆ. ಹೊಸ ಬಿಎಂಡಬ್ಲ್ಯೂ ಕಾರು ಖರೀದಿಸಿರುವ ಅವರಿಗೆ ರಾಯರ ಪ್ರತಿಮೆ ಕೂಡ ಸಿಕ್ಕಿದೆ.

ಸೋಶಿಯಲ್​ ಮೀಡಿಯಾದಲ್ಲಿ ‘ನವರಸ ನಾಯಕ’ ಜಗ್ಗೇಶ್​ ಅವರು ಸದಾ ಆ್ಯಕ್ಟೀವ್​ ಆಗಿರುತ್ತಾರೆ. ಕನ್ನಡದಲ್ಲಿಯೇ ಪೋಸ್ಟ್​ ಮಾಡುವ ಮೂಲಕ ಅನೇಕ ವಿಷಯದ ಬಗ್ಗೆ ತಮ್ಮ ಅನಿಸಿಕೆಯನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಈಗ ಅವರು ಒಂದು ಹೊಸ ಪ್ರಸಂಗವನ್ನು ತಿಳಿಸಿದ್ದಾರೆ. ರಾಘವೇಂದ್ರ ಸ್ವಾಮಿಗಳ ಕುರಿತು ಅವರು ಪೋಸ್ಟ್​ ಮಾಡಿದ್ದು ಈ ರೀತಿ ಇದೆ:

‘ನೆನೆದವರ ಮನದಲ್ಲಿ ಗುರುರಾಯ. ಆತ್ಮೀಯ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ‘ರಾಘವೇಂದ್ರ ಸ್ಟೋರ್ಸ್’ ಮುಗಿದ ತಕ್ಷಣ ನನಗೆ ಹೊಸ ಕಾರು BMW-x5 ಕೊಳ್ಳಲು ಪ್ರೇರೇಪಿಸಿ ಬುಕ್ ಮಾಡಿಸಿದ. ನನಗೆ ನನ್ನ ಕಾರಿನಲ್ಲಿ ರಾಯರ ಪ್ರತಿಮೆ ಕಡ್ಡಾಯ. ಹಾಗಾಗಿ ಮಂತ್ರಾಲಯದಲ್ಲಿ ರಾಯರ ಪಾದುಕೆ ಕೊಂಡು, ಬೃಂದಾವನದಲ್ಲಿ ಇರಿಸಿ ತಂದೆ. ಆದರೆ ನನಗೆ ರಾಯರ ಪ್ರತಿಮೆ ತೃಪ್ತಿಯಾಗಲಿಲ್ಲ. ಕಾರು ಡೆಲಿವರಿ ಸಮಯದಲ್ಲಿ ಕೊಳ್ಳುವ ಎಂದು ಮನದಲ್ಲಿ ಸಂಕಲ್ಪಿಸಿದೆ. ನೋಡಿದರೆ ನನ್ನ ಮಿತ್ರ ಸುನಿಲ್​ ಆಕಸ್ಮಿಕ ಮನೆಗೆ ಬಂದರು. ಅಪರೂಪದ ಈ ಹ್ಯಾಂಡ್​ಮೇಡ್​ ಬೆಳ್ಳಿ ರಾಯರ ಪ್ರತಿಮೆ ಕೊಟ್ಟರು. ರಾಯರು ಎಂಥ ಕರುಣಾಮಯಿ. ತಮ್ಮ ಭಕ್ತರು ಮನಸಲ್ಲಿ ಅಂದುಕೊಂಡದ್ದು ನೆರವೇರಿಸಿಬಿಡುತ್ತಾರೆ. ನಾನು ಧನ್ಯ ಅನ್ನಿಸಿತು. ಆಧ್ಯಾತ್ಮಿಕ ಮಾರ್ಗ ಅರಿವಿದ್ದವರಿಗೆ ಮಾತ್ರ ಅರಿವಾಗೋದು ರಾಯರ ಪವಾಡ. ರಾಯರ ಭಕ್ತರ ಹೃದಯಕ್ಕೆ ತಿಳಿಸುವ ಮನಸಾಯಿತು. ತಿಳಿಸಿ ಮನಸ್ಸು ಹಗುರ ಮಾಡಿಕೊಂಡೆ. ನಂಬಿಕೆ ಭಕ್ತಿಯಿಂದ ಕೂಗಿದರೆ ರಾಯರು ನಮ್ಮ ನಿಮ್ಮ ಗಮನಿಸುತ್ತಾರೆ. ನಮ್ಮ ಜೊತೆ ನಿಲ್ಲುತ್ತಾರೆ. ಶುಭಮಸ್ತು’ ಎಂದು ಜಗ್ಗೇಶ್​ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
Image
‘ನವರಸ ನಾಯಕ ಆಗಿದ್ರೆ ಮಾತ್ರ ಹೀಗೆ ನಟಿಸೋಕೆ ಸಾಧ್ಯ’; ಸುದೀಪ್​ ನಟನೆ ಬಗ್ಗೆ ಜಗ್ಗೇಶ್​ ಹೊಗಳಿಕೆ
Image
‘ಎದ್ದೇಳು ಮಂಜುನಾಥ 2’ ಚಿತ್ರದಲ್ಲಿ ಜಗ್ಗೇಶ್​ ಇರಲ್ಲ; ಹಾಗಾದರೆ ಈ ಸಿನಿಮಾದ ಹೀರೋ ಯಾರು?
Image
3 ತಿಂಗಳ ರಾಯರ ಸೇವೆ ಬಳಿಕ ನಡೆದಿದ್ದು ಪವಾಡ; ಬದುಕಿನ ಅಚ್ಚರಿಯ ವಿಚಾರ ತೆರೆದಿಟ್ಟ ನಟ ಜಗ್ಗೇಶ್​
Image
‘ನನಗೆ ಇಷ್ಟು ದೊಡ್ಡ ಯಶಸ್ಸು ಸಿಕ್ಕಿದ್ದು ಇದೇ ಮೊದಲು’; ಎಲ್ಲರಿಗೂ ಧನ್ಯವಾದ ತಿಳಿಸಿದ ‘ತೋತಾಪುರಿ’ ಜಗ್ಗೇಶ್​

ಸಾಮಾನ್ಯ ಹಳ್ಳಿ ಹುಡುಗನೊಬ್ಬ ನಂತರ ‘ನವರಸ ನಾಯಕ’ ಆಗುವ ಮಟ್ಟಕ್ಕೆ ಬೆಳೆಯಲು ರಾಯರ ಕೃಪೆಯೇ ಕಾರಣ ಎಂದು ಜಗ್ಗೇಶ್​ ಅವರು ಬಲವಾಗಿ ನಂಬಿದ್ದಾರೆ. ಆ ನಂಬಿಕೆಯ ಬೀಜವನ್ನು ಪ್ರತಿಯೊಬ್ಬರ ಮನದಲ್ಲೂ ಅವರು ಬಿತ್ತುತ್ತಾರೆ. ತಮ್ಮ ಬದುಕಿನಲ್ಲಿ ರಾಘವೇಂದ್ರ ಸ್ವಾಮಿಗಳ ಪವಾಡ ಯಾವೆಲ್ಲ ರೀತಿ ನಡೆದಿದೆ ಎಂಬುದನ್ನು ಜಗ್ಗೇಶ್​ ಆಗಾಗ ತಿಳಿಸಿಕೊಡುತ್ತಾರೆ. ಸಿನಿಮಾ ವಿಚಾರಕ್ಕೆ ಬರುವುದಾದರೆ, ಜಗ್ಗೇಶ್​ ಅವರಿಗೆ ಇಂದಿಗೂ ದೊಡ್ಡಮಟ್ಟದ ಡಿಮ್ಯಾಂಡ್​ ಇದೆ. ‘ಹೊಂಬಾಳೆ ಫಿಲ್ಮ್ಸ್​’ ಸಿನಿಮಾಣದ ‘ರಾಘವೇಂದ್ರ ಸ್ಟೋರ್ಸ್​’ ಚಿತ್ರದ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ವಿಜಯ್​ ಪ್ರಸಾದ್​ ನಿರ್ದೇಶನದ ‘ತೋತಾಪುರಿ’ ಸಿನಿಮಾದಲ್ಲೂ ಅವರು ನಟಿಸಿದ್ದು, ಆ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.