‘ಕೆಡಿ’ ಅಡ್ಡಾಕ್ಕೆ ಬಂದ ಬಾಲಿವುಡ್ ಬೆಡಗಿ
Prem's KD Movie: ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸುತ್ತಿರುವ ರೆಟ್ರೋ ರೌಡಿಸಂ ಕತೆಯುಳ್ಳ ಈ ಸಿನಿಮಾಕ್ಕೆ ಬಾಲಿವುಡ್ ಬೆಡಗಿಯೊಬ್ಬರು ಎಂಟ್ರಿ ನೀಡಿದ್ದಾರೆ.
ಪ್ರೇಮ್ರ (Prem) ಸಿನಿಮಾಗಳಲ್ಲಿ ಒಂದು ಐಟಂ ಹಾಡು, ಅದಕ್ಕೆ ಒಬ್ಬ ದೊಡ್ಡ ಬಾಲಿವುಡ್ ತಾರೆ ಸಾಮಾನ್ಯ. ಜೋಗಿ ಸಿನಿಮಾದಿಂದಲೂ ಪ್ರೇಮ್ ಈ ಫಾರ್ಮುಲಾ ಬಳಸಿಕೊಂಡು ಬರುತ್ತಿದ್ದಾರೆ. ಹಾಟ್ ಬೆಡಗಿಯರಾದ ಯಾನಾ ಗುಪ್ತಾ, ಮಲೈಕಾ ಶೆರಾವತ್, ಸನ್ನಿ ಲಿಯೋನಿ, ಆಮಿ ಜಾಕ್ಸನ್ ಇನ್ನೂ ಕೆಲವು ನಟಿಯರನ್ನು ಕರೆಸಿ ಐಟಂ ಹಾಡು ಮಾಡಿಸಿದ್ದಾರೆ ಪ್ರೇಮ್. ಇದೀಗ ಧ್ರುವ ಸರ್ಜಾ ನಾಯಕರಾಗಿರುವ ‘ಕೆಡಿ’ ಸಿನಿಮಾವನ್ನು ಪ್ರೇಮ್ ನಿರ್ದೇಶಿಸುತ್ತಿದ್ದು ಈ ಸಿನಿಮಾಕ್ಕೆ ಸಹ ಬಾಲಿವುಡ್ನ ಹಾಟ್ ಬೆಡಗಿಯನ್ನು ಐಟಂ ಹಾಡಿಗಾಗಿ ಕರೆಸಿದ್ದಾರೆ.
ಬಾಲಿವುಡ್ನ ಹಾಟ್ ನಟಿ ನೋರಾ ಫತೇಹಿಯನ್ನು ‘ಕೆಡಿ’ ಸಿನಿಮಾದ ವಿಶೇಷ ಹಾಡಿಗಾಗಿ ಪ್ರೇಮ್ ಕರೆಸಿದ್ದಾರೆ. ನೋರಾ ಫತೇಹಿ, ‘ಕೆಡಿ’ ಸೆಟ್ಗೆ ಆಗಮಿಸಿ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವ ವಿಡಿಯೋವನ್ನು ಪ್ರೇಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಕೆಡಿ’ ಸಿನಿಮಾ ರೆಟ್ರೋ ಕತೆಯನ್ನು ಹೊಂದಿದ್ದು, ಕ್ಲಬ್ ಡ್ಯಾನ್ಸ್ ಒಂದರಲ್ಲಿ ನೋರಾ ಫತೇಹಿ ಸೊಂಟ ಬಳುಕಿಸಲಿದ್ದಾರೆ.
ಈಗ ಪ್ರೇಮ್ ಹಂಚಿಕೊಂಡಿರುವ ವಿಡಿಯೋನಲ್ಲಿ ನೋರಾ ಫತೇಹಿ ‘ಕೆಡಿ’ ಸೆಟ್ಗೆ ಆಗಮಿಸಿ ಪ್ರೇಮ್ ಸೇರಿದಂತೆ ಚಿತ್ರತಂಡದ ಜೊತೆ ಮಾತುಕತೆ ಮಾಡುತ್ತಿರುವ ದೃಶ್ಯಗಳಿವೆ. ನೋರಾ, ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್ ಜೊತೆ ಮಾತನಾಡುತ್ತಿರುವ ದೃಶ್ಯಗಳು ಸಹ ಇವೆ. ಜೊತೆಗೆ ಸಿನಿಮಾದಲ್ಲಿನ ನೋರಾ ಲುಕ್ನ ಚಿತ್ರವನ್ನೂ ಸಹ ವಿಡಿಯೋದಲ್ಲಿ ತೋರಿಸಲಾಗಿದೆ. ಕೆಂಪು ಬಣ್ಣದ ಉಡುಗೆ ತೊಟ್ಟು ಗ್ಲಾಮರಸ್ ಆಗಿ ಕಾಣುತ್ತಿದ್ದಾರೆ ನೋರಾ ಫತೇಹಿ.
ಇದನ್ನೂ ಓದಿ:ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ನೋರಾ ಫತೇಹಿ ಮೊಕದ್ದಮೆ, ಹೇಳಿಕೆ ಬಿಡುಗಡೆ ಮಾಡಿದ ಜಾಕ್ವೆಲಿನ್
ನೋರಾ ಫತೇಹಿ, ಬಾಲಿವುಡ್ನಲ್ಲಿ ಹಲವಾರು ಸಿನಿಮಾಗಳಲ್ಲಿ ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಹಳ ಬ್ಯುಸಿ ಐಟಂ ಸಾಂಗ್ ಡ್ಯಾನ್ಸರ್ ನೋರಾ ಫತೇಹಿ. ದಕ್ಷಿಣ ಭಾರತದ ಚಿತ್ರರಂಗದ ನೋರಾಗೆ ಹೊಸದೇನೂ ಅಲ್ಲ. ತೆಲುಗಿನ ಹಲವು ಸಿನಿಮಾಗಳಲ್ಲಿ ನೋರಾ ಫತೇಹಿ ಐಟಂ ಹಾಡುಗಳಲ್ಲಿ ನಟಿಸಿದ್ದಾರೆ. ‘ಕೆಡಿ’ ನೋರಾರ ಮೊದಲ ಕನ್ನಡ ಸಿನಿಮಾ.
ಪ್ರೇಮ್ ನಿರ್ದೇಶಿಸುತ್ತಿರುವ ‘ಕೆಡಿ’ ಸಿನಿಮಾ ರೌಡಿಸಂ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಬಹುತಾರಾಗಣವಿದೆ. ಧ್ರುವ ಸರ್ಜಾ ನಾಯಕರಾಗಿರುವ ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಸಹ ಇದ್ದಾರೆ. ಜೊತೆಗೆ ರವಿಚಂದ್ರನ್ ಸಹ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಬೇರೆ ಚಿತ್ರರಂಗಗಳ ಇನ್ನೂ ಕೆಲವು ನಟರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ