ಪ್ರಜ್ವಲ್ ದೇವರಾಜ್ ಹೊಸ ಸಿನಿಮಾಗೆ ‘ಕರಾವಳಿ’ ಶೀರ್ಷಿಕೆ; ಟೀಸರ್ ನೋಡಿ ವಾವ್ ಎಂದ ಸಿನಿಪ್ರಿಯರು
ಕಥೆಯ ಎಳೆಯ ಬಗ್ಗೆ ಕೌತುಕ ಮೂಡುವ ರೀತಿಯಲ್ಲಿ ‘ಕರಾವಳಿ’ ಟೀಸರ್ ಮೂಡಿಬಂದಿದೆ. ಕೋಣದ ಮೇಲೆ ಕುಳಿತಿರುವ ಪ್ರಜ್ವಲ್ ದೇವರಾಜ್ ಅವರ ಫಸ್ಟ್ ಲುಕ್ ಗಮನ ಸೆಳೆಯುತ್ತಿದೆ. ಗುರುದತ್ತ್ ಗಾಣಿಗ ನಿರ್ದೇಶನದ ಈ ಸಿನಿಮಾಗೆ ಶೀಘ್ರದಲ್ಲೇ ಚಿತ್ರೀಕರಣ ಆರಂಭ ಆಗಲಿದೆ.
ನಟ ಪ್ರಜ್ವಲ್ ದೇವರಾಜ್ (Prajwal Devaraj) ಹಾಗೂ ನಿರ್ದೇಶಕ ಗುರುದತ್ ಗಾಣಿಗ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಹೊಸ ಸಿನಿಮಾದ ಶೀರ್ಷಿಕೆ ಅನಾವರಣ ಮಾಡಲಾಗಿದೆ. ರೋಚಕವಾದ ಟೀಸರ್ ಮೂಲಕ ಟೈಟಲ್ ಏನು ಎಂಬುದನ್ನು ಘೋಷಿಸಲಾಗಿದೆ. ಈ ಸಿನಿಮಾಗೆ ‘ಕರಾವಳಿ’ (Karavali) ಎಂದು ಹೆಸರು ಇಡಲಾಗಿದೆ. ಶೀರ್ಷಿಕೆಗೆ ತಕ್ಕಂತೆಯೇ ಈ ಸಿನಿಮಾದಲ್ಲಿ ಕರಾವಳಿಯ ಸಂಸ್ಕೃತಿಯನ್ನು ತೋರಿಸಲಾಗುತ್ತದೆ. ಕಂಬಳದ ಕಹಾನಿ ಇದರಲ್ಲಿ ಇರಲಿದೆ. ಅದಕ್ಕೆ ಸಾಕ್ಷಿ ಒದಗಿಸುವಂತೆ ಈ ಟೀಸರ್ (Karavali Teaser) ಮೂಡಿಬಂದಿದೆ. ಪ್ರಜ್ವಲ್ ದೇವರಾಜ್ ಅವರ ಅಭಿಮಾನಿಗಳಿಂದ ಈ ಟೀಸರ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
‘ಕರಾವಳಿ’ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್ ಅನ್ನು ಮಂಗಳೂರಿನಲ್ಲಿ ಗ್ರ್ಯಾಂಡ್ ಆಗಿ ಲಾಂಚ್ ಮಾಡಲಾಗಿದೆ. ಈ ಸಿನಿಮಾದಲ್ಲಿ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ಮತ್ತು ‘ಅಂಬಿ ನಿಂಗೆ ವಯಸ್ಸಾಯ್ತೋ’ ಸಿನಿಮಾದ ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಅವರ ಕಾಂಬಿನೇಷನ್ ಇರಲಿದೆ ಎಂಬ ಕಾರಣಕ್ಕೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡಿದೆ. ಗುರುದತ್ ಅವರ ನಿರ್ದೇಶನದ 2ನೇ ಸಿನಿಮಾ ಇದಾಗಿದ್ದು, ಟೀಸರ್ ಮೂಲಕ ಅವರು ಭರವಸೆ ಮೂಡಿಸಿದ್ದಾರೆ. ಕರಾವಳಿ ಭಾಗದ ಸಂಸ್ಕೃತಿ, ಯಕ್ಷಗಾನ, ದೈವ, ಕಂಬಳ ಮುಂತಾದ ಅಂಶಗಳು ಈ ಸಿನಿಮಾದಲ್ಲಿ ಇರಲಿವೆ.
ಕಥೆಯ ಎಳೆಯ ಬಗ್ಗೆ ಕೌತುಕ ಮೂಡುವ ರೀತಿಯಲ್ಲಿ ‘ಕರಾವಳಿ’ ಟೀಸರ್ ಮೂಡಿಬಂದಿದೆ. ಈ ಟೀಸರ್ ಗಮನಿಸಿದರೆ ಮನುಷ್ಯ ಮತ್ತು ಪ್ರಾಣಿ ನಡುವಿನ ಸಂಘರ್ಷದ ಕಥೆ ಇದರಲ್ಲಿ ಇರಬಹುದೇ ಎಂಬ ಕೌತುಕ ಸೃಷ್ಟಿಯಾಗುವಂತಿದೆ. ಹಿನ್ನೆಲೆಯಲ್ಲಿ ಕೇಳಿಸುವ ಯಕ್ಷಗಾನದ ಧ್ವನಿಯಿಂದ ಟೀಸರ್‌ನ ರೋಚಕತೆ ಹೆಚ್ಚಾಗಿದೆ. ಕೋಣದ ಮೇಲೆ ಕುಳಿತು ಪ್ರಜ್ವಲ್ ದೇವರಾಜ್ ಎಂಟ್ರಿ ನೀಡಿರುವುದು ವಿಶೇಷವಾಗಿದೆ.
ಇದನ್ನೂ ಓದಿ: Prajwal Devaraj: ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಹೊರಟ ಪ್ರಜ್ವಲ್ ದೇವರಾಜ್; ಈ ಚಿತ್ರದ ಹೆಸರು ‘ಜಾತರೆ’
ಮಂಗಳೂರಿನಲ್ಲಿ ‘ಕರಾವಳಿ’ ಸಿನಿಮಾಗೆ ಚಿತ್ರೀಕರಣ ನಡೆಯಲಿದೆ. ಶೀಘ್ರದಲ್ಲೇ ಶೂಟಿಂಗ್ ಆರಂಭ ಆಗಲಿದೆ. ಸಚಿನ್ ಬಸ್ರೂರು ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯೂ ಸದಾನಂದನ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ತಮ್ಮ ವೃತ್ತಿಜೀವನದಲ್ಲಿ ಈವರೆಗೂ ಮಾಡಿರದಂತಹ ಪಾತ್ರ ಈ ಸಿನಿಮಾದಲ್ಲಿ ಇರಲಿದೆ. ಇದು ಅವರ 40ನೇ ಸಿನಿಮಾ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.