Meghana Raj: ಮೇಘನಾ ರಾಜ್ ಕಮ್ಬ್ಯಾಕ್ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್; ಅಭಿಮಾನಿಗಳು ಫುಲ್ ಖುಷ್
Prajwal Devaraj Meghana Raj Movie: ಮೇಘನಾ ರಾಜ್ ನಟನೆಯ ಈ ಚಿತ್ರವನ್ನು ಪನ್ನಗ ಭರಣ ನಿರ್ಮಿಸುತ್ತಿದ್ದಾರೆ. ಅತಿಥಿ ಪಾತ್ರ ಮಾಡುವ ಮೂಲಕ ಪ್ರಜ್ವಲ್ ದೇವರಾಜ್ ಕೂಡ ಚಿತ್ರತಂಡಕ್ಕೆ ಸೇರ್ಪಡೆ ಆಗಿದ್ದಾರೆ.
ನಟಿ ಮೇಘನಾ ರಾಜ್ (Meghana Raj) ಅವರು ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ’ ಚಿತ್ರದ ಬಂತರ ಅವರು ಯಾವುದೇ ಚಿತ್ರಗಳಲ್ಲಿ ನಟಿಸಿರಲಿಲ್ಲ. ಈಗ ಅವರು ಮತ್ತೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ತಮಗೆ ಸರಿ ಎನಿಸುವಂತಹ ಪಾತ್ರ ಮತ್ತು ಕಥೆಯನ್ನು ಆಯ್ದುಕೊಂಡು ಬಣ್ಣ ಹಚ್ಚುತ್ತಿದ್ದಾರೆ. ಆ ಪೈಕಿ ಪನ್ನಗ ಭರಣ (Pannaga Bharana) ನಿರ್ಮಾಣ ಮಾಡುತ್ತಿರುವ ಹೊಸ ಸಿನಿಮಾ ಮೇಲೆ ನಿರೀಕ್ಷೆ ಇದೆ. ಈ ಸಿನಿಮಾಗೆ ವಿಶಾಲ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಏನು ಎಂಬುದು ಇನ್ನೂ ರಿವೀಲ್ ಆಗಿಲ್ಲ. ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ (Prajwal Devaraj) ಅವರು ಅತಿಥಿ ಪಾತ್ರ ಮಾಡಿರುವುದು ಅಧಿಕೃತವಾಗಿದೆ. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ಅವರಿಗೆ ಖುಷಿ ಇದೆ. ಬಾಲ್ಯದ ಸ್ನೇಹಿತರಾದ ಮೇಘನಾ ರಾಜ್ ಮತ್ತು ಪ್ರಜ್ವಲ್ ದೇವರಾಜ್ ಅವರು ಒಂದೇ ಸಿನಿಮಾದಲ್ಲಿ ಅಭಿನಯಿಸಿದ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಎಗ್ಸೈಟ್ ಆಗಿದ್ದಾರೆ.
ಚಿರಂಜೀವಿ ಸರ್ಜಾ, ಪನ್ನಗ ಭರಣ, ಪ್ರಜ್ವಲ್ ದೇವರಾಜ್ ಜೊತೆ ಸೇರಿ ಒಂದು ಸಿನಿಮಾ ಮಾಡಬೇಕು ಎಂಬುದು ಒಂದಷ್ಟು ವರ್ಷಗಳ ಹಿಂದಿನ ಕನಸಾಗಿತ್ತು. ಆದರೆ ಇಂದು ಚಿರಂಜೀವಿ ಸರ್ಜಾ ಅವರು ಭೌತಿಕವಾಗಿ ಇಲ್ಲ. ಪತಿಯ ಅಗಲಿಕೆಯ ನೋವನ್ನು ನುಂಗಿಕೊಂಡು ಮೇಘನಾ ರಾಜ್ ಅವರು ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಆ ಚಿತ್ರಕ್ಕೆ ಪನ್ನಗ ಭರಣ ಬಂಡವಾಳ ಹೂಡುತ್ತಿದ್ದಾರೆ. ಅತಿಥಿ ಪಾತ್ರ ಮಾಡುವ ಮೂಲಕ ಪ್ರಜ್ವಲ್ ದೇವರಾಜ್ ಅವರು ಎಂಟ್ರಿ ನೀಡಿರುವುದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದಂತಾಗಿದೆ.
‘ಈ ಸಿನಿಮಾ ಶುರು ಆದಾಗಿನಿಂದ ನಾನು ಚಿತ್ರತಂಡದ ಜೊತೆ ಸಂಪರ್ಕದಲ್ಲಿದ್ದೆ. ನಿರ್ದೇಶಕ ವಿಶಾಲ್ ಒಂದು ದಿನ ಸ್ಕ್ರಿಪ್ಟ್ ಬಗ್ಗೆ ಮಾತನಾಡಲು ಬರುತ್ತಾರೆ ಅಂತ ಪನ್ನಗ ಮತ್ತು ಮೇಘನಾ ಹೇಳಿದರು. ನನ್ನ ಅಭಿಪ್ರಾಯ ತಿಳಿಯಲು ಬರುತ್ತಿದ್ದಾರೆ ಅಂತ ನಾನು ಊಹಿಸಿದ್ದೆ. ಬಳಿಕ ಮೇಘನಾ ಕರೆಮಾಡಿ ಹೇಗನಿಸಿತು ಎಂದು ಕೇಳಿದರು. ನನಗೆ ಇಷ್ಟವಾಯ್ತು ಎಂದೆ. ಈ ಚಿತ್ರದಲ್ಲಿ ನಟಿಸಬೇಕು ಎಂದು ಅವರು ಹೇಳಿದಾಗ ಒಪ್ಪಿಕೊಳದೇ ಇರಲು ಸಾಧ್ಯವೇ?’ ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.
ಚಂದನವನದಲ್ಲಿ ಪ್ರಜ್ವಲ್ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ನಟಿಸಿರುವ ‘ವೀರಂ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ‘ಮಾಫಿಯಾ’ ಚಿತ್ರದ ಕೆಲಸಗಳು ಕೂಡ ಬಿರುಸಿನಿಂದ ಸಾಗಿವೆ. ಮೇಘನಾ ರಾಜ್-ಚಿರಂಜೀವಿ ಕುಟುಂಬದ ಜೊತೆಗೆ ಅವರಿಗೆ ಉತ್ತಮ ಸ್ನೇಹ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:02 pm, Thu, 29 September 22