‘ಸೋನಾ ಬೇಬಿ’ ಜೊತೆ ಬಿಂದಾಸ್ ಆಗಿ ಕುಣಿದ ಪ್ರಜ್ವಲ್ ದೇವರಾಜ್

Prajwal Devraj: ಪ್ರಜ್ವಲ್ ದೇವರಾಜ್ ನಟನೆಯ ‘ಗಣ’ ಸಿನಿಮಾದ ಟೀಸರ್, ಪೋಸ್ಟರ್​ ಈಗಾಗಲೇ ಸಖತ್ ಗಮನ ಸೆಳೆದಿದೆ. ಇದೀಗ ಸಿನಿಮಾದ ಹೊಸ ಹಾಡೊಂದು ಬಿಡುಗಡೆ ಆಗಿದೆ.

‘ಸೋನಾ ಬೇಬಿ’ ಜೊತೆ ಬಿಂದಾಸ್ ಆಗಿ ಕುಣಿದ ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್
Follow us
ಮಂಜುನಾಥ ಸಿ.
|

Updated on: Nov 25, 2023 | 9:38 PM

ಪ್ರಜ್ವಲ್ ದೇವರಾಜ್ (Prajwal Devraj) ನಾಯಕರಾಗಿ ನಟಿಸಿರುವ ‘ಗಣ’ ಸಿನಿಮಾದ ಟೀಸರ್ ಬಿಡುಗಡೆ ಆಗಿ ಗಮನ ಸೆಳೆದಿದೆ. ಸಿನಿಮಾದ ಪೋಸ್ಟರ್​ ಸಹ ಸಿನಿಮಾದ ಬಗ್ಗೆ ಕುತೂಹಲ ಮೂಡಿಸುವಂತಿದೆ. ಇದೀಗ ಸಿನಿಮಾದ ಹೊಸ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಸಿನಿಮಾದ ಐಟಂ ಹಾಡನ್ನು ಯೂಟ್ಯೂಬ್​ನಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ. ಹಾಡು ಸಖತ್ ಕ್ಯಾಚಿಯಾಗಿದ್ದು ಪ್ರಜ್ವಲ್ ದೇವರಾಜ್ ಹಾಗೂ ಇತರೆ ನಟ-ನಟಿಯರು ಬಿಂದಾಸ್ ಆಗಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

‘ಮೈ ನೇಮ್ ಈಸ್ ಸೋನಾ ಬೇಬಿ, ಕಣ್ಣಾಮುಚ್ಚಾಲೆ ನನ್ನ ಹಾಬಿ’ ಎಂದು ಶುರುವಾಗುವ ಈ ಹಾಡಿಗೆ ವಿ.ನಾಗೇಂದ್ರಪ್ರಸಾದ್ ಸಾಹಿತ್ಯ ಒದಗಿಸಿದ್ದಾರೆ. ಈ ಹಾಡು ಹಾಡು “ಸರಿಗಮಪ” ಆಡಿಯೋ ಸಂಸ್ಥೆ ಮೂಲಕ ಬಿಡುಗಡೆಯಾಗಿದೆ. ಮುರಳಿ ಮಾಸ್ಟರ್ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಈ ಮಾಸ್ ಐಟಂ ಹಾಡಿಗೆ ಪ್ರಜ್ವಲ್ ದೇವರಾಜ್, ನಮೃತಾ ಮಲ್ಲ ಹಾಗೂ ರವಿಕಾಳೆ ಹೆಜ್ಜೆ ಹಾಕಿದ್ದಾರೆ. ದರ್ಶನ್ ನಟನೆಯ ‘ಕ್ರಾಂತಿ’ ಸಿನಿಮಾದ “ಶೇಕ್ ಇಟ್ ಪುಷ್ಪವತಿ” ವೈರಲ್ ಹಾಡು ಸೇರಿದಂತೆ ಅನೇಕ ಯಶಸ್ವಿ ಹಾಡುಗಳನ್ನು ಹಾಡಿರುವ ಐಶ್ವರ್ಯ ರಂಗರಾಜನ್ ಈ ಹಾಡನ್ನು ಸಹ ಹಾಡಿದ್ದಾರೆ.

ಇದನ್ನೂ ಓದಿ:ಪ್ರಜ್ವಲ್ ದೇವರಾಜ್ ಹೊಸ ಚಿತ್ರಕ್ಕೆ ಚಾಲನೆ, ತೆಲುಗಿನ ಜನಪ್ರಿಯ ನಟ ಕನ್ನಡಕ್ಕೆ ಎಂಟ್ರಿ

ತೆಲುಗಿನ ಸ್ಟಾರ್ ನಿರ್ದೇಶಕ ಸುಕುಮಾರ್ ಜೊತೆಗೆ ‘ನೇನೊಕ್ಕಡಿನೆ’, ‘100 ಪರ್ಸೆಂಟ್ ಲವ್’ ಇನ್ನೂ ಕೆಲವು ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿರುವ ಹರಿ ಪ್ರಸಾದ್ ಜಕ್ಕ ‘ಗಣ’ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ಮೊದಲ ಸಿನಿಮಾ. ತೆಲುಗಿನಲ್ಲಿ ಈಗಾಗೇ ಎರಡು ಸಿನಿಮಾಗಳನ್ನು ಹರಿ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಪೂರ್ಣವಾಗಿದೆ. 80 ದಿನಗಳ ಕಾಲ, ಮೈಸೂರು, ಬೆಂಗಳೂರು ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ.

ಚೆರಿ ಕ್ರಿಯೇಷನ್ಸ್ ಲಾಂಛನದಲ್ಲಿ ಪಾರ್ಥು ‘ಗಣ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ಹರಿಪ್ರಸಾದ್ ಜಕ್ಕ ನಿರ್ದೇಶಿಸಿದ್ದಾರೆ. ಜೈ ಆನಂದ್ ಛಾಯಾಗ್ರಹಣ ಮಾಡಿದ್ದಾರೆ, ಸಿನಿಮಾಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಹರೀಶ್ ಕೊಮ್ಮೆ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಸತೀಶ್ ಎ ಕಲಾ ನಿರ್ದೇಶನ ಹಾಗೂ ಡಿ.ಜೆ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಚಿಕ್ಕಬಳ್ಳಾಪುರ ಶ್ರೀನಿವಾಸ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

ಪ್ರಜ್ವಲ್ ದೇವರಾಜ್ ಎದುರು ನಾಯಕಿಯಾಗಿ ಯಶಾ ಶಿವಕುಮಾರ್, ವೇದಿಕಾ ಕುಮಾರ್, ಕೃಷಿ ತಾಪಂಡ ನಟಿಸಿದ್ದಾರೆ. ವಿಶಾಲ್ ಹೆಗಡೆ, ರವಿ ಕಾಳೆ, ಸಂಪತ್ ರಾಜ್, ಶಿವರಾಜ್ ಕೆ.ಆರ್ ಪೇಟೆ, ರಮೇಶ್ ಭಟ್ ಮುಂತಾದವರು “ಗಣ” ಚಿತ್ರದ ತಾರಾಬಳಗದಲ್ಲಿದ್ದಾರೆ. ಸಿನಿಮಾ ಅತಿ ಶೀಘ್ರದಲ್ಲಿ ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ