ರಿಷಬ್-ರಕ್ಷಿತ್ ಒಟ್ಟಿಗೆ ಬರೋದು ಯಾವಾಗ? ‘ಬೆಲ್ ಬಾಟಮ್ 2’ ಬಜೆಟ್ ಎಷ್ಟು?
ರಕ್ಷಿತ್ ಶೆಟ್ಟಿ ಅವರ ಬಹುನಿರೀಕ್ಷಿತ ರಿಚರ್ಡ್ ಆಂಟನಿ ಹಾಗೂ ರಿಷಬ್ ಶೆಟ್ಟಿ ಜೊತೆಗಿನ ಒಡನಾಟದ ಬಗ್ಗೆ ನಟ ಪ್ರಮೋದ್ ಶೆಟ್ಟಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಇಬ್ಬರೂ ಸ್ಟಾರ್ ನಟರು ಒಂದಾಗುವ ಸಿನಿಮಾಗೆ ಕಥೆ ಸಿದ್ಧವಿದ್ದು, ಬೆಲ್ ಬಾಟಮ್ ಸೀಕ್ವೆಲ್ ಮಾಡಿದರೆ ನೂರು ಕೋಟಿ ಬಜೆಟ್ ಆಗಲಿದೆ ಎಂದಿದ್ದಾರೆ. ಇವರ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಪ್ರಮೋದ್ ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು
- ನೂರು ಕೋಟಿ ಬಜೆಟ್ ಸಿನಿಮಾ
- ಬೆಲ್ ಬಾಟಮ್ ಸೀಕ್ವೆಲ್ ಬಗ್ಗೆ ಆಪ್ತ ನಟನ ಅಚ್ಚರಿಯ ಮಾತುಗಳು
- ರಕ್ಷಿತ್ ಮತ್ತು ರಿಷಬ್ ನಡುವಿನ ಬಾಂಧವ್ಯದ ಬಗ್ಗೆ ಸ್ಪಷ್ಟನೆ
ಸ್ಯಾಂಡಲ್ವುಡ್ನಲ್ಲಿ ಸದಾ ಕುತೂಹಲ ಮೂಡಿಸುವ ಹೆಸರುಗಳೆಂದರೆ ಅದು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ. ಈ ಇಬ್ಬರೂ ಪ್ರತಿಭಾವಂತ ನಟ-ನಿರ್ದೇಶಕರು ಒಂದಾಗುವುದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಘೋಷಣೆ ಮಾಡಿರುವ ಬಹುನಿರೀಕ್ಷಿತ ‘ರಿಚರ್ಡ್ ಆಂಟನಿ’ ಸಿನಿಮಾ ಬಂದು ಹಲವು ಸಮಯ ಕಳೆದಿದ್ದರೂ, ಇದರ ಪ್ರಶ್ನೆಗಳು ಹಾಗೆಯೇ ಇವೆ. ಈ ಎಲ್ಲಾ ಗೊಂದಲಗಳಿಗೆ ಮತ್ತು ಚರ್ಚೆಗಳಿಗೆ ನಟ ಪ್ರಮೋದ್ ಶೆಟ್ಟಿ ಈಗ ಸ್ಪಷ್ಟನೆ ನೀಡಿದ್ದಾರೆ.
ಇಬ್ಬರೂ ಸ್ಟಾರ್ ನಟರು ಒಂದಾಗುವುದಾದರೆ ತೆರೆಯ ಮೇಲೆ ಒಂದು ದೊಡ್ಡ ಕಥೆಯನ್ನೇ ತರಬೇಕು ಎಂಬುದು ಪ್ರಮೋದ್ ಶೆಟ್ಟಿ ಅವರ ಅಭಿಪ್ರಾಯವಾಗಿದೆ. ಇವರಿಬ್ಬರೂ ಒಟ್ಟಾಗಿ ನಟಿಸಬೇಕಿರುವ ಸಿನಿಮಾ ಒಂದಕ್ಕೆ ಈಗಾಗಲೇ ಕಥೆ ಸಿದ್ಧವಿದೆ ಎಂದು ಅವರು ಬಹಿರಂಗಪಡಿಸಿದ್ದಾರೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುವುದು ತುಸು ಕಷ್ಟವಿದ್ದು, ಮುಂದಿನ ದಿನಗಳಲ್ಲಿ ಸ್ಕ್ರಿಪ್ಟ್ ಕೆಲಸಗಳು ಸಂಪೂರ್ಣಗೊಂಡರೆ ಮಾತ್ರ ಸಿನಿಮಾ ಮಾಡುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ವೇಳೆ ‘ಬೆಲ್ ಬಾಟಮ್’ ಸಿನಿಮಾದ ಸೀಕ್ವೆಲ್ ಕುರಿತು ಮಾತನಾಡಿದ ಪ್ರಮೋದ್ ಶೆಟ್ಟಿ, ಅದರ ಕಥೆಯೂ ಸಂಪೂರ್ಣವಾಗಿ ಸಿದ್ಧವಿದೆ ಎಂದಿದ್ದಾರೆ. ಈ ಸಿನಿಮಾವನ್ನು ಮಾಡುವುದಾದರೆ ಕೇವಲ ಸಾಮಾನ್ಯ ಮಟ್ಟದಲ್ಲದೆ, ಭರ್ಜರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಮಾಡಬೇಕಿದೆ. ಹಿಂದೆ ಈ ಪ್ರಾಜೆಕ್ಟ್ಗೆ ಹದಿನೈದು ಕೋಟಿ ರೂಪಾಯಿಗಳ ಪ್ಲ್ಯಾನ್ ಇತ್ತು. ಆದರೆ, ಈಗಿನ ಬದಲಾದ ರಿಚಬ್ ಮಾರುಕಟ್ಟೆ ಲೆಕ್ಕಾಚಾರದ ಪ್ರಕಾರ ಈಗ ಸಿನಿಮಾ ಮಾಡುವುದಾದರೆ ಬಜೆಟ್ ನೂರು ಕೋಟಿ ರೂಪಾಯಿ ಗಡಿ ದಾಟಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ರಿಚರ್ಡ್ ಆಂಟನಿ ಅಪ್ಡೇಟ್; ಕೊನೆಗೂ ರಕ್ಷಿತ್ ಶೆಟ್ಟಿ ಎಲ್ಲಿದ್ದಾರೆ ಎಂಬುದನ್ನು ಹೇಳಿದ ಹೇಮಂತ್ ರಾವ್
ಇನ್ನು ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ನಡುವೆ ಯಾವುದೇ ಮನಸ್ತಾಪವಿಲ್ಲ, ಅವರ ನಡುವೆ ಎಲ್ಲವೂ ಸರಿ ಇದೆ ಎಂದು ಪ್ರಮೋದ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಸಿನಿಮಾ ಮಾಡುವ ಕುರಿತಾದ ದೃಷ್ಟಿಕೋನ ಹಾಗೂ ಅಭಿಪ್ರಾಯಗಳಲ್ಲಿ ಬದಲಾವಣೆಯಾಗಲು ರಕ್ಷಿತ್ ಶೆಟ್ಟಿಯೇ ಕಾರಣ ಎಂದು ರಿಷಬ್ ಶೆಟ್ಟಿ ಇಂದಿಗೂ ಸ್ಮರಿಸುತ್ತಾರೆ ಎಂದಿದ್ದಾರೆ ಪ್ರಮೋದ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




