ದೆವ್ವದ ಸಿನಿಮಾ ಶೂಟಿಂಗ್ ವೇಳೆ ಆದ ಅನುಭವಗಳ ಬಗ್ಗೆ ಪ್ರಿಯಾಂಕಾ ಉಪೇಂದ್ರ ಮಾತು
Priyanka Upendra: ನಟಿ ಪ್ರಿಯಾಂಕಾ ಉಪೇಂದ್ರ ಇತ್ತೀಚೆಗೆ ಹೆಚ್ಚು ಹೆಚ್ಚು ಹಾರರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದೆವ್ವದ ಸಿನಿಮಾಗಳ ಚಿತ್ರೀಕರಣದ ಸಂದರ್ಭದಲ್ಲಿ ಆಗಿರುವ ವಿಚಿತ್ರ ಅನುಭವಗಳ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.
ನಟಿ ಪ್ರಿಯಾಂಕಾ ಉಪೇಂದ್ರ (Priyanka Upendra) ಕಳೆದ ಕೆಲವು ವರ್ಷಗಳಿಂದಲೂ ಮಹಿಳಾ ಪ್ರಧಾನ ಸಿನಿಮಾಗಳು, ಹಾರರ್ ಕತೆಯುಳ್ಳ ಸಿನಿಮಾಗಳಲ್ಲಿಯೇ ಹೆಚ್ಚು ನಟಿಸುತ್ತಿದ್ದಾರೆ. ಅವರ ಹಾರರ್ ಸಿನಿಮಾಗಳಿಗೆ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ. ಇದೀಗ ‘ಕ್ಯಾಪ್ಚರ್’ ಹೆಸರಿನ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸಿದ್ದು, ಸಿನಿಮಾದ ಪ್ರಚಾರಾರ್ಥ ಪ್ರಿಯಾಂಕಾರ ಪುತ್ರ ಆಯುಷ್ ತಾಯಿಯನ್ನು ಸಂದರ್ಶನ ಮಾಡಿದ್ದಾರೆ. ಈ ವೇಳೆ ದೆವ್ವದ ಸಿನಿಮಾದ ಶೂಟಿಂಗ್ ಮಾಡುವಾಗಿನ ಕೆಲವು ವಿಚಿತ್ರ ಅನುಭವಗಳ ಬಗ್ಗೆ ಪ್ರಿಯಾಂಕಾ ಮಾತನಾಡಿದ್ದಾರೆ.
‘‘ಯಾವುದೇ ಸಿನಿಮಾ ಶೂಟಿಂಗ್ ಮಾಡುವಾಗಲೂ ಪೂಜೆ ಮಾಡಿ ಪಾಸಿಟಿವ್ ಎನರ್ಜಿಯನ್ನು ತೆಗೆದುಕೊಂಡು ಬರಲಾಗುತ್ತದೆ. ಅಂತೆಯೇ ಹಾರರ್ ಸಿನಿಮಾಗಳ ಶೂಟಿಂಗ್ ಸಂದರ್ಭದಲ್ಲಿ ಪ್ರತಿದಿನವೂ ಪೂಜೆ ಮಾಡಲಾಗುತ್ತದೆ. ಇದು ನಟರಿಗೆ, ತಂತ್ರಜ್ಞರಿಗೆ ಒಂದು ಪಾಸಿಟಿವ್ ಎನರ್ಜಿ ನೀಡುತ್ತದೆ. ನೆಗೆಟಿವ್ ಎನರ್ಜಿಗಳಿಂದ ನಮ್ಮನ್ನು ರಕ್ಷಿಸುತ್ತದೆ. ‘ಕಾಂಜರಿಂಗ್’ ಅಂಥಹಾ ಹಾಲಿವುಡ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿಯೂ ಈ ರೀತಿಯ ಸಂಪ್ರದಾಯಗಳನ್ನು ಪಾಲಿಸುತ್ತಾರೆ ಎಂದು ಕೇಳಿದ್ದೇನೆ’’ ಎಂದಿದ್ದಾರೆ ಪ್ರಿಯಾಂಕಾ.
‘‘ನಾವು ಶೂಟಿಂಗ್ ಮಾಡುತ್ತಿದ್ದೇವೇಯೋ ಅಥವಾ ನಿಜವಾಗಿಯೂ ಘಟನೆ ನಡೆಯುತ್ತಿದೆಯೋ ಎಂಬುದು ಅಗೋಚರ ಶಕ್ತಿಗಳಿಗೆ ಗೊತ್ತಾಗುವುದಿಲ್ಲ, ಒಮ್ಮೊಮ್ಮೆ ಶೂಟಿಂಗ್ನಲ್ಲಿ ಮಾಡಿದ ಯಾವುದೋ ವಿಧಿ-ವಿಧಾನವೂ ಸಹ ನಿಜವಾದ ದುಷ್ಟಶಕ್ತಿಗಳನ್ನು ಆಕರ್ಷಣೆ ಮಾಡಿ ಆ ಸ್ಥಳಕ್ಕೆ ಕರೆದುಬಿಡಬಹುದಾದ ಸಾಧ್ಯತೆ ಇದೆ. ಹಾಗಾಗಿ ನಾವುಗಳು ಸದಾ ನಮ್ಮ ಎಚ್ಚರಿಕೆಯಲ್ಲಿರಬೇಕು” ಎಂದರು ಪ್ರಿಯಾಂಕಾ.
ಇದನ್ನೂ ಓದಿ: ತಾಯಿ-ಮಗಳ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ-ಮಾನ್ವಿತಾ ಕಾಮತ್; ಇದು ‘ಕ್ಯಾಪ್ಚರ್’ ಸಿನಿಮಾ ಸ್ಪೆಷಲ್
‘‘ಮಮ್ಮಿ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಮಗಳ ಪಾತ್ರ ಮಾಡಿದ್ದ ಹುಡುಗಿ ಬಹಳ ಧೈರ್ಯವಂತೆ ಆ ಹುಡುಗಿ ಬೈಕ್ನಿಂದ ಬೀಳುವ ಸೀನ್ನ ಚಿತ್ರೀಕರಣ ಮಾಡಿದ್ದೆವು, ಆಕೆಗೆ ಗಾಯ ಆಗುತ್ತದೆ ಆಕೆಯನ್ನು ನಾನು ಆರೈಕೆ ಮಾಡುವ ದೃಶ್ಯ ಅದು. ಅದಾದ ಮಾರನೇಯ ದಿನ ಆ ಹುಡುಗಿ ಶೂಟಿಂಗ್ ಸೆಟ್ನಲ್ಲಿಯೇ ರಾತ್ರಿ ಸೈಕಲ್ ತುಳಿದುಕೊಂಡು ಹೋಗಿ ಬಿದ್ದು ಬಿಟ್ಟಳು, ನಾವು ಶೂಟಿಂಗ್ ಮಾಡಿದಾಗ ಎಲ್ಲಿ ಆಕೆಗೆ ಗಾಯವಾದಂತೆ ತೋರಿಸಿದ್ದೆವೋ ಅಲ್ಲಿಯೇ ಆಕೆಗೆ ನಿಜಕ್ಕೂ ಗಾಯವಾಯ್ತು. ಇಂಥಹಾ ಹಲವು ಘಟನೆಗಳನ್ನು ನಾನು ಹೇಳಬಹುದು. ಇಂಥಹಾ ಹಲವು ಸನ್ನಿವೇಶಗಳು ಇವೆ” ಎಂದಿದ್ದಾರೆ ಪ್ರಿಯಾಂಕಾ.
‘‘ಇತ್ತೀಚೆಗೆ ಒಂದು ಹಾರರ್ ಸಿನಿಮಾದ ಶೂಟಿಂಗ್ಗಾಗಿ ಒಂದು ದೆವ್ವದ ಮುಖವನ್ನು ಮಾಡಿದ್ದರು. ಆ ಮುಖವನ್ನು ಶೂಟಿಂಗ್ ಮಾಡುತ್ತಿದ್ದ ಮನೆಯ ಮೇಲಿನ ರೂಂನಲ್ಲಿ ಇಟ್ಟಿದ್ದರು. ಆ ಮುಖವನ್ನು ನೋಡಿ ಸೆಟ್ನ ಸಿಬ್ಬಂದಿ ಒಬ್ಬರು ಹೆದರಿ ಬಿದ್ದುಬಿಟ್ಟರು. ಅದಾದ ಬಳಿಕ ಆ ರೂಂನಲ್ಲಿ ಪ್ರತಿದಿನ ನಮ್ಮ ನಿರ್ದೇಶಕರು ಮಲಗುತ್ತಿದ್ದರು, ಅವರಿಗೆ ಪ್ರತಿ ರಾತ್ರಿ ಬಾಗಿಲು ಬಡಿದ ಶಬ್ದಗಳು ಕೇಳುತ್ತಿತ್ತಂತೆ” ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.
‘‘ನಾನು ಹಾರರ್ ಸಿನಿಮಾದ ಶೂಟಿಂಗ್ ಮುಗಿಸಿ ಬಂದಾಗ ಕೆಲವು ವಿಧಿ-ವಿಧಾನಗಳನ್ನು ಪಾಲಿಸುತ್ತೇನೆ. ಮನೆ ತಲುಪುತ್ತಿದ್ದಂತೆ ಸ್ನಾನ ಮಾಡಿ, ಪೂಜೆ ಮಾಡಿ ಧ್ಯಾನ ಮಾಡುತ್ತೇನೆ. ಶೂಟಿಂಗ್ನಲ್ಲಿ ನಡೆದ ಯಾವ ವಿಷಯಗಳ ಬಗ್ಗೆಯೂ ಯೋಚನೆ ಮಾಡುವುದಿಲ್ಲ. ಅಲ್ಲದೆ ನನ್ನ ಕೊರಳಲ್ಲಿ ದೇವಿಯ ಸಣ್ಣ ವಿಗ್ರಹ ಇದ್ದೇ ಇರುತ್ತದೆ. ಅದು ನನ್ನನ್ನು ದುಷ್ಟ ಶಕ್ತಿಗಳಿಂದ ಕಾಪಾಡುತ್ತದೆ ಎಂಬುದು ನನ್ನ ನಂಬಿಕೆ’’ ಎಂದಿದ್ದಾರೆ ಪ್ರಿಯಾಂಕಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ