Puneeth Rajkumar: ನವೆಂಬರ್ 1ಕ್ಕಾಗಿ ಕಾದಿದ್ದ ಪುನೀತ್; ಮಹತ್ವದ ದಿನ ಬರೋದಕ್ಕೂ ಮುನ್ನವೇ ವಿಧಿವಶ: ಸಿಎಂ ಹೇಳಿದ್ದೇನು?
Puneeth Rajkumar Death: ‘ಪುನೀತ್ ರಾಜ್ಕುಮಾರ್ ನಿಧನದಿಂದ ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ ಆಗಿದೆ. ಚಿತ್ರರಂಗದಲ್ಲಿ ನಾಯಕತ್ವ ಗುಣ ಇರುವ ಒಬ್ಬ ನಟನನ್ನು ನಾವಿಂದು ಕಳೆದುಕೊಂಡಿದ್ದೇವೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರ ನಿಧನದಿಂದ ಇಡೀ ರಾಜ್ಯವೇ ಶೋಕದಲ್ಲಿ ಮುಳುಗಿದೆ. ಹೃದಯಾಘಾತದಿಂದ ಅಪ್ಪು ಮೃತರಾಗಿದ್ದಾರೆ. ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಪುನೀತ್ ರಾಜ್ಕುಮಾರ್ ಅವರನ್ನು ದಾಖಲು ಮಾಡಿದ್ದ ವಿಕ್ರಂ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದ ಅವರು ಪುನೀತ್ ಜೊತೆಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದರು. ಗುರುವಾರವಷ್ಟೇ (ಅ.28) ಪುನೀತ್ ಮತ್ತು ಬಸವರಾಜ ಬೊಮ್ಮಾಯಿ ಅವರು ದೂರವಾಣಿ ಮೂಲಕ ಮಾತನಾಡಿದ್ದರು.
‘ನನಗೆ ನಿನ್ನೆ ಫೋನ್ ಮಾಡಿ ಪುನೀತ್ ರಾಜ್ಕುಮಾರ್ ಮಾತನಾಡಿದ್ದರು. ಅವರನ್ನು ಭೇಟಿ ಮಾಡಲು ಇವತ್ತು ಸಮಯ ನಿಗದಿ ಆಗಿತ್ತು. ನವೆಂಬರ್ 1ರಂದು ಅವರ ವೆಬ್ಸೈಟ್ ಉದ್ಘಾಟನೆ ಮಾಡಬೇಕು ಎಂದು ಆಹ್ವಾನ ನೀಡಲು ಬರಬೇಕಿತ್ತು. ಆದರೆ ವಿಧಿ ಅವರನ್ನು ಬೇರೆ ಕಡೆಗೆ ಕರೆದುಕೊಂಡು ಹೋಗಿದೆ. ಬಹಳ ದೊಡ್ಡ ಆಘಾತ ಆಗಿದೆ’ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
‘ಪುನೀತ್ ನಿಧನದಿಂದ ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ ಆಗಿದೆ. ಚಿತ್ರರಂಗದಲ್ಲಿ ನಾಯಕತ್ವ ಗುಣ ಇರುವ ಒಬ್ಬ ನಟನನ್ನು ನಾವಿಂದು ಕಳೆದುಕೊಂಡಿದ್ದೇವೆ. ಡಾ. ರಾಜ್ಕುಮಾರ್ ಅವರ ಸಂಸ್ಕಾರದಲ್ಲಿ ಪುನೀತ್ ಬೆಳೆದಿದ್ದರು. ಅವರ ನಡೆ, ನುಡಿ ಎಲ್ಲವೂ ರಾಜ್ಕುಮಾರ್ ರೀತಿಯೇ ಅತ್ಯಂತ ವಿನಯಪೂರ್ವಕವಾಗಿತ್ತು. ಎಲ್ಲರಿಗೂ ಅವರ ವ್ಯಕ್ತಿತ್ವ ಮಾದರಿ ಆಗಿತ್ತು. ನಾನು ಎರಡು ತಿಂಗಳ ಹಿಂದೆ ಅವರು ಕರೆದು ಒಂದು ಸಭೆಗೆ ಹೋಗಿ ಎಜುಕೇಷನ್ ಆ್ಯಪ್ ಉದ್ಘಾಟನೆ ಮಾಡಿದ್ದೆ. ಅದಾದ ಬಳಿಕವೂ ಭೇಟಿ ಆಗಿದ್ದೆ. ಅವರು ಕುಟುಂಬದ ಜೊತೆ ನನಗೆ ಬಹಳ ವರ್ಷದಿಂದಲೂ ಒಡನಾಟ ಇದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಪ್ರಸ್ತುತ ಹಲವು ಸಿನಿಮಾ ಕೆಲಸಗಳಲ್ಲಿ ಅಪ್ಪು ತೊಡಗಿಕೊಂಡಿದ್ದರು. ಪವನ್ ಕುಮಾರ್ ನಿರ್ದೇಶನದ ‘ದ್ವಿತ್ವ’, ಚೇತನ್ಕುಮಾರ್ ನಿರ್ದೇಶನದ ‘ಜೇಮ್ಸ್’ ಮುಂತಾದ ಸಿನಿಮಾಗಳು ಅವರ ಕೈಯಲ್ಲಿದ್ದವು. ಆದರೆ ಎಲ್ಲವನ್ನೂ ಬಿಟ್ಟು ಪುನೀತ್ ಇಹಲೋಕ ತ್ಯಜಿಸಿದ್ದಾರೆ. ಶಿವರಾಜ್ಕುಮಾರ್ಗೆ ನಿರ್ದೇಶನ ಮಾಡಬೇಕು ಎಂದು ಕೂಡ ಪುನೀತ್ ಆಸೆ ಇಟ್ಟುಕೊಂಡಿದ್ದರು. ಆದರೆ ಅದು ಕೂಡ ನೆರವೇರಲೇ ಇಲ್ಲ.
ಇದನ್ನೂ ಓದಿ:
Puneeth Rajkumar: ಶಿವಣ್ಣನ ಎದುರು ಪುನೀತ್ ಹೇಳಿಕೊಂಡಿದ್ದ ಆಸೆ ಈಡೇರಲೇ ಇಲ್ಲ; ಅಭಿಮಾನಿಗಳ ಹೃದಯ ನುಚ್ಚುನೂರು
Puneeth Rajkumar Obituary: ಹೃದಯ ಬಡಿತ ನಿಲ್ಲಿಸುವುದಕ್ಕೂ ಮುನ್ನ ಕೋಟ್ಯಂತರ ಜನರ ಹೃದಯ ಗೆದ್ದಿದ್ದ ಪುನೀತ್
Published On - 4:23 pm, Fri, 29 October 21