ಪುನೀತ್ ರಾಜ್ಕುಮಾರ್ ಅವರನ್ನು ಅಭಿಮಾನಿಗಳು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರ ಸಿನಿಮಾಗಳನ್ನು ಮತ್ತೆ ಮತ್ತೆ ನೋಡಲಾಗುತ್ತಿದೆ. ಅಪ್ಪು ನಟನೆಯ ಹಾಡುಗಳು, ದೃಶ್ಯಗಳು ಎಲ್ಲರ ವಾಟ್ಸಾಪ್ ಸ್ಟೇಟಸ್ಗಳಲ್ಲಿ ರಾರಾಜಿಸುತ್ತಿವೆ. ಈಗ ‘ಪವರ್ ಸ್ಟಾರ್’ ಅಭಿಮಾನಿಗಳಿಂದ ಹೊಸದೊಂದು ಬೇಡಿಕೆ ಕೇಳಿಬಂದಿದೆ. ಪುನೀತ್ ಬದುಕಿದ್ದಾಗ ರಿಲೀಸ್ ಆದ ಅವರ ಕೊನೇ ಸಿನಿಮಾ ‘ಯುವರತ್ನ’. ಆ ಸಿನಿಮಾ ನೋಡಿ ಅಭಿಮಾನಿಗಳು ಸಖತ್ ಇಷ್ಟಪಟ್ಟಿದ್ದರು. ‘ಯುವರತ್ನ’ ಚಿತ್ರದ ಮೂಲಕ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಯುವಜನತೆಗೆ ಒಳ್ಳೆಯ ಸಂದೇಶ ನೀಡಿದ್ದರು. ಆ ಸಿನಿಮಾದ ಡಿಲೀಟೆಡ್ ದೃಶ್ಯಗಳನ್ನು ಬಿಡುಗಡೆ ಮಾಡುವಂತೆ ಫ್ಯಾನ್ಸ್ ಮನವಿ ಮಾಡಿಕೊಳ್ಳುತ್ತಿದ್ದಾರೆ.
‘ದಯವಿಟ್ಟು ಯುವರತ್ನ ಸಿನಿಮಾದ ಡಿಲೀಡೆಟ್ ದೃಶ್ಯಗಳನ್ನಾದರೂ ಬಿಡುಗಡೆ ಮಾಡಿ ಸರ್. ಇದು ಎಲ್ಲ ‘ಪವರ್ ಸ್ಟಾರ್’ ಅಭಿಮಾನಿಗಳ ಮನವಿ. ಪ್ಲೀಸ್ ಸರ್’ ಎಂದು ಅಭಿಮಾನಿಗಳು ಟ್ವಿಟರ್ನಲ್ಲಿ ಸಂತೋಷ್ ಆನಂದ್ರಾಮ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ನಿರ್ದೇಶಕರು, ‘ಶೀಘ್ರದಲ್ಲೇ ಅಪ್ಡೇಟ್ ತಿಳಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಅದಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ ಮತ್ತು ಸಂತೋಷ್ ಆನಂದ್ರಾಮ್ ಅವರದ್ದು ಕನ್ನಡ ಚಿತ್ರರಂಗದಲ್ಲಿ ಹಿಟ್ ಕಾಂಬಿನೇಷನ್. ಇಬ್ಬರು ಮೊದಲ ಬಾರಿಗೆ ಜೊತೆಯಾಗಿ ಮಾಡಿದ ‘ರಾಜಕುಮಾರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ವರ್ಷ ಏಪ್ರಿಲ್ 1ರಂದು ಬಿಡುಗಡೆಯಾದ ‘ಯುವರತ್ನ’ ಚಿತ್ರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು.
ಪ್ರತಿ ಹಬ್ಬದ ಸಂದರ್ಭದಲ್ಲಿ ಸ್ಟಾರ್ ನಟರ ಸಿನಿಮಾಗಳ ಹೊಸ ಪೋಸ್ಟರ್, ಟೀಸರ್ ಅಥವಾ ಟ್ರೇಲರ್ಗಳು ಬಿಡುಗಡೆ ಆಗುವುದು ಸಹಜ. ಆದರೆ ಈ ದೀಪಾವಳಿ ಹಬ್ಬದಲ್ಲಿ ಸ್ಯಾಂಡಲ್ವುಡ್ಗೆ ಕತ್ತಲು ಕವಿದಿದೆ. ಪುನೀತ್ ನಿಧನದಿಂದ ಚಿತ್ರರಂಗದಲ್ಲಿ ಸೂತಕದ ಛಾಯೆ ಆವರಿಸಿದೆ. ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕ ಕೂಡ ಮುಂದೂಡಲ್ಪಟ್ಟಿದೆ.
ಪುನೀತ್ ರಾಜ್ಕುಮಾರ್ ಇಹಲೋಕ ತ್ಯಜಿಸಿ ಒಂದು ವಾರ ಕಳೆದಿದೆ. ಕುಟುಂಬದವರು ಅಪ್ಪು ಸಮಾಧಿಗೆ ಹಾಲು-ತುಪ್ಪ ಅರ್ಪಿಸಿದ ಬಳಿಕ ಅಭಿಮಾನಿಗಳಿಗೆ ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪ್ರತಿ ದಿನ 20 ಸಾವಿರಕ್ಕೂ ಅಧಿಕ ಮಂದಿ ಕಂಠೀರವ ಸ್ಟುಡಿಯೋ ಆವರಣಕ್ಕೆ ಆಗಮಿಸಿ ಅಪ್ಪುಗೆ ನಮನ ಸಲ್ಲಿಸುತ್ತಿದ್ದಾರೆ.
will update soon ? https://t.co/KlvMm0cd1j
— Santhosh Ananddram (@SanthoshAnand15) November 5, 2021
ನಿಧನರಾಗುವುದಕ್ಕೂ ಮುನ್ನ ಹಲವು ಪ್ರಾಜೆಕ್ಟ್ಗಳಲ್ಲಿ ಪುನೀತ್ ಬ್ಯುಸಿ ಆಗಿದ್ದರು. ಚೇತನ್ಕುಮಾರ್ ನಿರ್ದೇಶನದ ‘ಜೇಮ್ಸ್’, ಪವನ್ ಕುಮಾರ್ ನಿರ್ದೇಶನ ‘ದ್ವಿತ್ವ’ ಚಿತ್ರಗಳಲ್ಲಿ ಪುನೀತ್ ನಟಿಸುತ್ತಿದ್ದರು. ‘ಜೇಮ್ಸ್’ ಶೂಟಿಂಗ್ ಬಹುತೇಕ ಮುಗಿದಿದ್ದು, 2022ರ ಮಾ.17ರಂದು ಪುನೀತ್ ರಾಜ್ಕುಮಾರ್ ಜನ್ಮದಿನದ ಪ್ರಯುಕ್ತ ಬಿಡುಗಡೆ ಆಗುವ ಸಾಧ್ಯತೆ ಇದೆ.
ಇದನ್ನೂ ಓದಿ:
Puneeth Rajkumar: ‘ಪುನೀತ್ ಅತಿಯಾಗಿ ಜಿಮ್ ಮಾಡಿದ್ರು’: ಕರಾಳ ಶುಕ್ರವಾರದ ಘಟನೆ ವಿವರಿಸಿದ ಸೆಕ್ಯೂರಿಟಿ ಸಿಬ್ಬಂದಿ