ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕುಳಿತು ಮಜ್ಜಿಗೆ ಊಟ ಮಾಡಿದ ಪುನೀತ್​ ರಾಜ್​ಕುಮಾರ್​; ಫೋಟೋ ವೈರಲ್

ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್​ಕುಮಾರ್​ ಭೇಟಿ ಕೊಟ್ಟರು. ಆದರೆ, ಬೆಟ್ಟ ಬಂದ್ ಆಗಿತ್ತು. ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ.

ಕುರಿಗಾಹಿಗಳ ಜತೆ ಕಂಬಳಿ ಮೇಲೆ ಕುಳಿತು ಮಜ್ಜಿಗೆ ಊಟ ಮಾಡಿದ ಪುನೀತ್​ ರಾಜ್​ಕುಮಾರ್​; ಫೋಟೋ ವೈರಲ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 05, 2021 | 9:10 PM

ಡಾ. ರಾಜ್​ಕುಮಾರ್​ ಮೇರುನಟನಾದರೂ ಅಭಿಮಾನಿಗಳ ಜತೆ ಬೆರೆಯುತ್ತಿದ್ದರು. ಅವರು ಎಂದಿಗೂ ತಾವು ದೊಡ್ಡ ನಟ ಎನ್ನುವ ಭಾವನೆಯನ್ನು ತೋರಿಸಿಲ್ಲ. ಪುನೀತ್​ ರಾಜ್​ಕುಮಾರ್​ಗೂ ಇದೇ ಗುಣ ಬಂದಿದೆ. ಅವರು ಅಷ್ಟು ಎತ್ತರಕ್ಕೆ ಬೆಳೆದರೂ ಎಲ್ಲರ ಜತೆ ಬೆರೆಯುತ್ತಾರೆ. ಸಾಮಾನ್ಯರ ಜತೆ ತಾವು ಕೂಡ ಸಾಮಾನ್ಯರು ಎಂಬಂತೆ ಇದ್ದು ಬಿಡುತ್ತಾರೆ. ಇದು ಈಗ ಮತ್ತೊಮ್ಮೆ ಸಾಬೀತಾಗಿದೆ. ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಗುಡಿಸಲಲ್ಲಿ ಕುಳಿತು ಪುನೀತ್​ ಊಟ ಮಾಡಿರುವ ಫೋಟೋ ಈಗ ವೈರಲ್​ ಆಗುತ್ತಿದೆ.

ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಪುನೀತ್ ರಾಜ್​ಕುಮಾರ್​ ಭೇಟಿ ಕೊಟ್ಟರು. ಆದರೆ, ಬೆಟ್ಟ ಬಂದ್ ಆಗಿತ್ತು. ಹೀಗಾಗಿ, ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರು ಸುತ್ತಾಟ ನಡೆಸಿದ್ದಾರೆ. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪೂರ, ಬಂಡಿ ಹರ್ಲಾಪೂರ, ನಾರಾಯಣ ಪೇಟೆಗಳಿಗೆ ಪುನೀತ್​ ಭೇಟಿ ನೀಡಿದ್ದಾರೆ.

ಗಂಗಾವತಿಯಲ್ಲಿ ಸುತ್ತಾಟ ನಡೆಸಿ ಅವರು ವಿಜಯಪೂರಕ್ಕೆ ಹೋಗುವ ವೇಳೆಯಲ್ಲಿ ದಾರಿ ಪಕ್ಕದ ಜಮೀನಿನಲ್ಲಿ ಕುರಿಗಾಹಿಗಳು ಹಾಕಿರುವ ಕುರಿ ಹಟ್ಟಿ ಪುನೀತ್​ ಕಣ್ಣಿಗೆ ಬಿದ್ದಿದೆ. ಅವರು ಅಲ್ಲಿಗೆ ಭೇಟಿ ನೀಡಿದ್ದಾರೆ. ಖುಷಿಯಿಂದಲೇ ಕುರಿಗಾಹಿಗಳ ಜೊತೆ ಪುನೀತ್​ ಮಾತುಕತೆ ನಡೆಸಿದ್ದಾರೆ. ಕಂಬಳಿ ಮೇಲೆ ಕುಳಿತು, ಅವರು ಊಟ ಮಾಡುವ ಸಂಗಟಿ (ರಾಗಿ ಮುದ್ದೆ), ಹಾಲು, ಮಜ್ಜಿಗೆ ಅನ್ನ ಊಟ ಮಾಡಿ ಸರಳತೆ ಮೆರೆದಿದ್ದಾರೆ.

ಆನೆಗೊಂದಿ ಸಮೀಪದ ಐತಿಹಾಸಿಕ ಸ್ಥಳಗಳ ವೀಕ್ಷಣೆ ಮಾಡಬೇಕು ಎಂದು ಪುನೀತ್​ ಬಯಸಿದ್ದರು. ಅದೇ ರೀತಿ ಸಣಾಪೂರ ಕೆರೆ, ಸಣಾಪೂರ ಫಾಲ್ಸ್, ಕಲ್ಲಿನ ಸೇತುವೆ ಸೇರಿದಂತೆ ಇತರ ಸ್ಥಳಗಳ ವೀಕ್ಷಣೆ ಮಾಡಿದ್ದಾರೆ. ಪುನೀತ್​ ಆಗಮಿಸಿದ ವಿಚಾರ ತಿಳಿದ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ನೆಚ್ಚಿನ ನಟನ ಜತೆ ಫೋಟೋ ತೆಗೆಸಿಕೊಂಡು ಅವರು ಸಂಭ್ರಮಿಸಿದರು. ಅಷ್ಟೇ ಅಲ್ಲದೆ ಸ್ಥಳೀಯ ಕಲಾವಿದರೊಂದಿಗೆ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ: ಪುನೀತ್​​ ನೋಡಿ ಮೆಚ್ಚಿದ್ರು ಕನ್ನಡದ ‘ಓಲ್ಡ್​ ಮಾಂಕ್​’ ಟ್ರೇಲರ್​; ಇದರಲ್ಲಿದೆ ಹತ್ತಾರು ವಿಶೇಷತೆ

ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನೀತ್‌ ರಾಜ್‌ಕುಮಾರ್ ಭೇಟಿ; ಅಭಿಮಾನಿಗಳಿಗೆ ದರ್ಶನ ನೀಡಿದ ಪವರ್​ಸ್ಟಾರ್​