AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜು ತಾಳಿಕೋಟೆ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ: ಇಲ್ಲಿದೆ ಜೀವನದ ಕಥೆ

‘ಕಲಿಯುಗದ ಕುಡುಕ’ ಹಾಸ್ಯ ನಾಟಕದ ಮೂಲಕ ತುಂಬಾ ಜನಪ್ರಿಯತೆ ಪಡೆದಿದ್ದ ಕಲಾವಿದ ರಾಜು ತಾಳಿಕೋಟೆ ಇನ್ನಿಲ್ಲ. ಬಾಲ ನಟನಾಗಿಯೇ ರಂಗಭೂಮಿಯಲ್ಲಿ ರಾಜು ತಾಳಿಕೋಟೆ ತೊಡಗಿಕೊಂಡಿದ್ದರು. ಸ್ವಂತ ನಾಟಕ ಕಂಪನಿಯನ್ನು ಅವರು ನಡೆಸುತ್ತಿದ್ದರು. ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ ಹೆಸರಿನ ಅವರು ರಾಜು ತಾಳಿಕೋಟೆ ಎಂದೇ ರಂಗಭೂಮಿ ಹಾಗೂ ಸಿನಿಮಾದಲ್ಲಿ ಫೇಮಸ್ ಆಗಿದ್ದರು.

ರಾಜು ತಾಳಿಕೋಟೆ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ: ಇಲ್ಲಿದೆ ಜೀವನದ ಕಥೆ
Raju Talikote
ಮದನ್​ ಕುಮಾರ್​
|

Updated on: Oct 13, 2025 | 7:50 PM

Share

ಖ್ಯಾತ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟೆ (Raju Talikote) ಅವರು ಇಂದು (ಅಕ್ಟೋಬರ್ 13) ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಸಿನಿಮಾ ಚಿತ್ರೀಕರಣದ ಸಲುವಾಗಿ ಉಡುಪಿಗೆ ತೆರಳಿದ್ದಾಗ ಅವರು ಹೃದಯಾಘಾತದಿಂದ (Heart Attack) ಮೃತರಾದರು. ರಾಜು ತಾಳಿಕೋಟೆ ಅವರ ಮೂಲ ಹೆಸರು ರಾಜೆಸಾಬ್ ಮಕ್ತುಂಸಾಬ್ ಯಂಕಂಚಿ. ಅವರು ಜನಿಸಿದ್ದು 1965ರಲ್ಲಿ. ತಾಳಿಕೋಟೆ ಊರಿನಲ್ಲಿ ಹುಟ್ಟಿಬೆಳೆದ ಕಾರಣ ರಾಜು ತಾಳಿಕೋಟೆ ಎಂಬುದೇ ಅವರ ಹೆಸರಾಯಿತು. ನಾಟಕಗಳಲ್ಲಿ ಹಾಗೂ ಸಿನಿಮಾದಲ್ಲಿ ಅದೇ ಹೆಸರಿನಿಂದ ಅವರು ಫೇಮಸ್ ಆದರು. ರಾಜು ತಾಳಿಕೋಟೆ ಅವರ ತಂದೆ-ತಾಯಿ ಕೂಡ ರಂಗಭೂಮಿ ಕಲಾವಿದರಾಗಿದ್ದರು. ‘ಶ್ರೀಗುರು ಖಾಸ್ಗತೇಶ್ವರ ನಾಟ್ಯ ಸಂಘ’ ಎಂಬ ನಾಟಕ ತಂಡವನ್ನು ನಡೆಸುತ್ತಿದ್ದರು.

ತಾಳಿಕೋಟೆಯ ಶ್ರೀಗುರು ಖಾಸ್ಗತೇಶ್ವರ ಮಠದಲ್ಲಿ ರಾಜು ತಾಳಿಕೋಟೆ ಅವರು ಶಾಲೆಗೆ ಸೇರಿದ್ದರು. ಬಾಲ ನಟನಾಗಿ ರಾಜು ತಾಳಿಕೋಟೆ ಅವರು ಅಭಿನಯಿಸುತ್ತಿದ್ದರು. 4ನೇ ತರಗತಿ ತನಕ ಅವರು ಅಲ್ಲಿ ಓದಿದರು. ತಂದೆ-ತಾಯಿ ತೀರಿಕೊಂಡ ನಂತರ ಶಿಕ್ಷಣ ಮೊಟಕುಗೊಳಿಸಿದರು. ಹೋಟೆಲ್ ಕ್ಲೀನರ್ ಆಗಿ ಕೆಲಸ ಮಾಡಿದರು. ಲಾರಿ ಕ್ಲೀನರ್ ಆಗಿದ್ದರು. ಬಳಿಕ ಮತ್ತೆ ರಂಗಭೂಮಿಯಲ್ಲೇ ಅವರು ತೊಡಗಿಕೊಂಡರು. ರಂಗಭೂಮಿಯ ವಿವಿಧ ವಿಭಾಗಗಳಲ್ಲಿ ಅವರು ಅನುಭವ ಪಡೆದರು. ಪಾಲಕರ ನಾಟಕ ತಂಡವನ್ನು ರಾಜು ತಾಳಿಕೋಟೆ ಮುಂದುವರಿಸಿದರು.

ಕ್ಯಾಸೆಟ್ ಸಲುವಾಗಿಯೇ ಹಲವು ನಾಟಕಗಳನ್ನು ರಾಜು ತಾಳಿಕೋಟೆ ಅವರು ರಚಿಸಿದರು. ‘ಕಲಿಯುಗದ ಕುಡುಕ’ ನಾಟಕದ ಮೂಲಕ ರಾಜು ತಾಳಿಕೋಟೆ ಅವರು ಫೇಮಸ್ ಆದರು. 15 ಸಾವಿರಕ್ಕೂ ಅಧಿಕ ಪ್ರದರ್ಶನಗಳನ್ನು ಆ ನಾಟಕ ಕಂಡಿತ್ತು. 1990ರ ದಶಕದಲ್ಲಿ ‘ಕಲಿಯುಗದ ಕುಡುಕ’ ನಾಟಕದ ಕ್ಯಾಸೆಟ್ ರೆಕಾರ್ಡ್ ಮಾಡಲಾಯಿತು. ಆ ಕ್ಯಾಸೆಟ್ ಬಿಡುಗಡೆ ಆದ ಬಳಿಕ ಅವರು ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದರು. ‘ಕುಡುಕರ ಸಾಮ್ರಾಜ್ಯ’, ‘ಹತ್ತಿಗುಡಿ ಲಕ್ಕವ್ವ’ ಮುಂತಾದ ನಾಟಕಗಳಿಂದಲೂ ಅವರ ಖ್ಯಾತಿ ಹೆಚ್ಚಿತು.

ಇದನ್ನೂ ಓದಿ: ‘ಇಬ್ಬರು ಹೆಂಡತಿಯರು ನನ್ನ ಪಾಲಿನ ಶಕ್ತಿ’; ಸಂಸಾರದ ಬಗ್ಗೆ ರಾಜು ತಾಳಿಕೋಟೆ ಮುಕ್ತ ಮಾತು

ರಾಜು ತಾಳಿಕೋಟೆ ಅವರ ತಾಯಿ ಹೆಸರು ಮಹಬೂಬಿ ತಾಳಿಕೋಟೆ. ಹಿರಿಯ ಸಹೋದರ ವಿಜಯಕುಮಾರ. ಸಹೋದರಿಯರು ಮಮತಾಜ್ ಶೇಖ್ ಮತ್ತು ಸೈದಾಮಾ ಕರ್ಜಗಿ. ರಾಜು ಅವರ ಮೊದಲ ಪತ್ನಿ ಪ್ರೇಮಾ. ಅವರಿಗೆ ಎರಡು ಗಂಡು, ಒಂದು ಹೆಣ್ಣು ಮಗಳು. ಎರಡನೇ ಪತ್ನಿ ಪ್ರೇಮಾ ಸಿಂಧನೂರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು. ಶಾಜೀದಾ ಹಾಗೂ ಶಬ್ಬು ಎಂಬುದು ಮಕ್ಕಳ ಹೆಸರು. ‘ಹೆಂಡತಿ ಅಂದರೆ‌ ಹೆಂಡತಿ’ ರಾಜೂ ತಾಳಿಕೋಟೆ ನಟನೆ ಮೊದಲ ಸಿನಿಮಾ. ‘ಪಂಜಾಬಿ ಹೌಸ್’ ಎರಡನೇ ಸಿನಿಮಾ.

‘ಮನಸಾರೆ’, ‘ಪಂಚರಂಗಿ’, ‘ರಾಜಧಾನಿ’, ‘ಲೈಫು ಇಷ್ಟೇನೇ’, ‘ಅಲೆಮಾರಿ’, ‘ಮೈನಾ’, ‘ಟೋಪಿವಾಲಾ’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 7’ ರಿಯಾಲಿಟಿ ಶೋನಲ್ಲಿ ರಾಜು ತಾಳಿಕೋಟೆ ಅವರು ಸ್ಪರ್ಧಿಸಿದ್ದರು. ಚಿತ್ರರಂಗ ಹಾಗೂ ನಾಟಕದಲ್ಲಿ ಎಷ್ಟೇ ಬೇಡಿಕೆ ಇದ್ದರೂ ಕೂಡ ರಾಜು ತಾಳಿಕೋಟೆ ಅವರು ಕೃಷಿಯಲ್ಲಿ ತೊಡಗಿಕೊಂಡಿದ್ದರು. ಆಡು ಸಾಕಣೆ ಮಾಡುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.