ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕನ್ನಡದ ನೆಲ, ಜಲ, ಭಾಷೆ ವಿಷಯಕ್ಕೆ ಕಲಾವಿದರು ಬೆಂಬಲ ನೀಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಇಂಥವರ ನಟ್ಟು ಬೋಲ್ಟ್ ಟೈಟ್ ಮಾಡುವುದು ಕೂಡ ತಮಗೆ ಗೊತ್ತು ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ಚರ್ಚೆ ಜೋರಾಗಿದೆ. ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಕೂಡ ಈ ಕುರಿತು ತಮ್ಮ ಅಭಿಪ್ರಾಯ ಏನು ಎಂಬುದನ್ನು ತಿಳಿಸಿದ್ದಾರೆ. ಹಂಪಿ ಉತ್ಸವದಲ್ಲಿ ಅವರು ಮಾತನಾಡಿದ್ದಾರೆ.
‘ಸಾಹೇಬ್ರು ಹೇಳಿದ್ರಲ್ಲಿ ಏನೂ ತಪ್ಪಿಲ್ಲ. ಅವರು ಹೇಳಿದ್ದು ಸರಿಯಾಗಿದೆ. ಕಲಾವಿದರಾಗಿ ನಮಗೆ ಒಂದು ಜವಾಬ್ದಾರಿ ಇದ್ದೇ ಇರುತ್ತದೆ. ಡಾ. ರಾಜ್ಕುಮಾರ್ ಅವರನ್ನು ನೋಡಿ.. ಕನ್ನಡ ಭಾಷೆಗಾಗಿ ಅವರು ಎಷ್ಟು ಹೋರಾಟ ಮಾಡಿದ್ದಾರೆ. ಸಿನಿಮಾ ಮತ್ತು ರಾಜಕೀಯದ ನಡುವೆ ಮೊದಲು ಇದ್ದ ಬೆಂಬಲ, ಪ್ರೋತ್ಸಾಹ ಇವತ್ತು ನನಗೆ ಕಾಣಿಸುತ್ತಿಲ್ಲ’ ಎಂದಿದ್ದಾರೆ ರಮ್ಯಾ.
‘ನಮಗೆ ಒಂದು ಜವಾಬ್ದಾರಿ ಇರುತ್ತದೆ ಎಂದು ಓರ್ವ ನಟಿಯಾಗಿ ನಾನು ಭಾವಿಸುತ್ತೇನೆ. ನಮ್ಮ ಭಾಷೆ, ಜಾಗ, ಸಂಸ್ಕೃತಿಗೆ ನಾವು ಯಾವಾಗಲೂ ಬೆಂಬಲ ನೀಡಬೇಕು. ಹಾಗಾಗಿ ಡಿಕೆ ಶಿವಕುಮಾರ್ ಅವರು ಹೇಳಿದ್ದರಲ್ಲಿ ನನಗೆ ಏನೂ ತಪ್ಪು ಎನಿಸಲಿಲ್ಲ’ ಎಂದು ರಮ್ಯಾ ಅವರು ಹೇಳಿದ್ದಾರೆ.
ರಮ್ಯಾ ಅವರು ಮತ್ತೆ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಬೇಕು ಎಂಬುದು ಅಭಿಮಾನಿಗಳ ಆಸೆ. ಹೊಸ ಸಿನಿಮಾ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ. ‘ಸದ್ಯಕ್ಕೆ ಯಾವುದೇ ಸಿನಿಮಾ ಮಾಡುವ ಬಗ್ಗೆ ನಿರ್ಧಾರ ಆಗಿಲ್ಲ. ನಾನು ಸ್ಕ್ರಿಪ್ಟ್ಗಳನ್ನು ಓದುತ್ತಿದ್ದೇನೆ. ನೋಡೋಣ. ಏನಾದರೂ ಇಂಟರೆಸ್ಟಿಂಗ್ ಆಗಿದ್ದರೆ ನಾನು ಮಾಡುತ್ತೇನೆ’ ಎಂದಿದ್ದಾರೆ ರಮ್ಯಾ ದಿವ್ಯ ಸ್ಫಂದನಾ.
‘ಬಹಳ ಖುಷಿ ಆಗುತ್ತಿದೆ. ನಾನು ಇದೇ ಮೊದಲ ಬಾರಿ ಹಂಪಿ ಉತ್ಸವಕ್ಕೆ ಬರುತ್ತಿರುವುದು. ಜಮೀರ್ ಅಹ್ಮದ್ ಅವರಿಗೆ ನಾನು ಧನ್ಯವಾದ ಹೇಳಲು ಇಷ್ಟಪಡುತ್ತೇನೆ. ಡಿಸಿ ಸಾಹೇಬರಿಗೂ ಧನ್ಯವಾದ. ತುಂಬ ಚೆನ್ನಾಗಿ ಆಯೋಜನೆ ಮಾಡಿದ್ದಾರೆ. ಕಾರ್ಯಕ್ರಮ ನೋಡಲು ಕಾಯುತ್ತಿದ್ದೇನೆ. ನನಗೆ ಹಂಪಿ ಇಷ್ಟ. ಇದು ಸುಂದರವಾಗಿದೆ. ನಾನು ಇಲ್ಲಿ ಶೂಟಿಂಗ್ ಮಾಡಿದ್ದೇನೆ. ಕರ್ನಾಟಕದ ಅತಿ ಸುಂದರ ಸ್ಥಳಗಳಲ್ಲಿ ಇದು ಕೂಡ ಒಂದು’ ಎಂದು ರಮ್ಯಾ ಅವರು ಹಂಪಿ ಬಗ್ಗೆ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.