ಕೋರ್ಟ್ಗೆ ಹಾಜರಾದ ರಮ್ಯಾ, ಹಲವು ವಿಷಯಗಳ ಬಗ್ಗೆ ಮಾತು
Ramya: ನಟಿ ರಮ್ಯಾ ಇಂದು (ಜನವರಿ 07) ಬೆಂಗಳೂರು ನಗರದ ವಾಣಿಜ್ಯ ಸಂಕಿರ್ಣ ನ್ಯಾಯಾಲಯಕ್ಕೆ ಪ್ರಕರಣವೊಂದರ ಸಂಬಂಧ ಹಾಜರಾಗಿದ್ದರು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿದ್ದ ರಮ್ಯಾ, ವಿಚಾರಣೆ ಬಳಿಕ ಮಾಧ್ಯಮಗಳ ಬಳಿ ಹಲವು ವಿಷಯಗಳ ಬಗ್ಗೆ ಮಾತನಾಡಿದರು.
ನಟಿ ರಮ್ಯಾ ಇಂದು (ಜನವರಿ 07) ಬೆಂಗಳೂರು ನಗರದ ವಾಣಿಜ್ಯ ಸಂಕಿರ್ಣ ನ್ಯಾಯಾಲಯಕ್ಕೆ ಹಾಜರಾಗಿದ್ದರು. 2023 ರಲ್ಲಿ ಬಿಡುಗಡೆ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ತನ್ನ ಅನುಮತಿ ಮೀರಿ ತಮ್ಮ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಿನಿಮಾದ ನಿರ್ಮಾಪಕರು, ನಿರ್ದೇಶಕರ ವಿರುದ್ಧ ರಮ್ಯಾ ದೂರು ನೀಡಿದ್ದರು. 2023 ರಲ್ಲಿಯೇ ರಮ್ಯಾ ಕೇಸು ದಾಖಲಿಸಿ, ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದಿದ್ದರು. ಆದರೆ ನ್ಯಾಯಾಲಯ ಆಗ ತಡೆ ನೀಡಿರಲಿಲ್ಲ. ಆದರೆ ವಿಚಾರಣೆ ಮುಂದುವರೆದಿದ್ದು, ಇಂದು ನ್ಯಾಯಾಲಯದ ಮುಂದೆ ಹಾಜರಾದ ರಮ್ಯಾ ಕೆಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ.
ಡಿಸೆಂಬರ್ 30 ರಂದು ಸಹ ನಟಿ ರಮ್ಯಾ, ವಿಚಾರಣೆಗೆ ಹಾಜರಾಗಿದ್ದರು. ಇಂದು ಕೆಲ ದಾಖಲೆಗಳನ್ನು ಪ್ರಸ್ತುತಪಡಿಸುವಂತೆ ನ್ಯಾಯಾಲಯ ಸೂಚಿಸಿದ್ದ ಕಾರಣಕ್ಕೆ ಇಂದು ಆಗಮಿಸಿದ್ದ ರಮ್ಯಾ ದಾಖಲೆಗಳನ್ನು ನೀಡಿದ್ದಾರೆ. ವಿಚಾರಣೆ ಬಳಿಕ ಮಾಧ್ಯಮಗಳ ಬಳಿ ಮಾತನಾಡಿದ ರಮ್ಯಾ, ಪ್ರಕರಣದ ಬಗ್ಗೆ ಹೆಚ್ಚೇನು ಹೇಳಲಿಲ್ಲವಾದರೂ ಜನವರಿ 15 ಕ್ಕೆ ಮೂಲ ಒಪ್ಪಂದದ ಪ್ರತಿಯನ್ನು ಪ್ರಸ್ತುತ ಪಡಿಸುವಂತೆ ಹೇಳಿದ್ದಾರೆ ಅಂತೆಯೇ ಆ ದಿನ ಒರಿಜಿನಲ್ ಅಗ್ರಿಮೆಂಟ್ ಅನ್ನು ನೀಡುತ್ತಿರುವುದಾಗಿ ಹೇಳಿದರು.
ಇದೇ ವೇಳೆ ತಮ್ಮ ಸಿನಿಮಾ ರಂಗಕ್ಕೆ ಮರು ಎಂಟ್ರಿ ಬಗ್ಗೆ ಮಾತನಾಡಿ, ‘ಒಳ್ಳೆಯ ಕತೆ ಸಿಕ್ಕರೆ ಖಂಡಿತ ನಟಿಸುತ್ತೀನಿ. ಆದರೆ ಯಾವುದೂ ಸಹ ಒಳ್ಳೆಯ ಕತೆಗಳು ಸಿಗುತ್ತಿಲ್ಲ’ ಎಂದರು. ಇನ್ನು ‘ಯುಐ’ ಮತ್ತು ‘ಮ್ಯಾಕ್ಸ್’ ಸಿನಿಮಾಗಳು ಬಹಳ ಒಳ್ಳೆಯ ಪ್ರದರ್ಶನ ಕಾಣುತ್ತಿವೆ ಎಂದ ರಮ್ಯಾ, ಅದರ ಬಗ್ಗೆ ಬಹಳ ಖುಷಿಯಿದೆ ಎಂದರು. ಈ ನಡುವೆ ಕೆಲವು ಒಳ್ಳೆಯ ಮಹಿಳಾ ಪ್ರಧಾನ ಸಿನಿಮಾಗಳು ಸಹ ತೆರೆಗೆ ಬರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ:‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ರಾಜಕೀಯಕ್ಕೆ ಮರು ಎಂಟ್ರಿ ಕೊಡುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ರಮ್ಯಾ, ‘ಸದ್ಯಕ್ಕಂತೂ ಇಲ್ಲ’ ಎಂದು ಚುಟುಕಾಗಿ ಉತ್ತರಿಸಿದರು. ಸಣ್ಣ ಆಗಿದ್ದೀರಲ್ಲ? ಎಂಬ ಪ್ರಶ್ನೆಗೆ, ನನಗೆ ಆಗಬೇಕು ಅನ್ನಿಸಿತು ಹಾಗಾಗಿ ನನ್ನಿಷ್ಟಕ್ಕೆ ಸಣ್ಣ ಆಗಿದ್ದೀನಿ ಎಂದರು. ಕೊನೆಗೆ ಮತ್ತೆ ರಮ್ಯಾ ಅವರನ್ನು ಮದುವೆ ಬಗ್ಗೆ ಕೇಳಲಾಯ್ತು. ರಮ್ಯಾ ಹೆಚ್ಚಿಗೇನು ಉತ್ತರಿಸದೆ ನಗುತ್ತಾ ನಡೆದರು.
ಪ್ರಕರಣ ಏನು?
ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿ, ವರುಣ್ ಹಾಗೂ ಪ್ರಜ್ವಲ್ ಬಿ ಪಿ ನಿರ್ಮಾಣ ಮಾಡಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ನಟಿಸಿದ್ದರು. ಸಿನಿಮಾದ ಪ್ರೋಮೋನಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನ ಇದೆ ಎನ್ನುವಾಗ ರಮ್ಯಾ ಸಿನಿಮಾದ ಮೇಲೆ ಪ್ರಕರಣ ದಾಖಲಿಸಿ, ನನ್ನ ಅನುಮತಿ ಇಲ್ಲದೆ ಸಿನಿಮಾದಲ್ಲಿ ನನ್ನ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದರು. ಆದರೆ ನ್ಯಾಯಾಲಯ ರಮ್ಯಾ ವಾದವನ್ನು ಪುರಸ್ಕರಿಸಲಿಲ್ಲ, ಸಿನಿಮಾ ಬಿಡುಗಡೆ ಆಗಿ ಯಶಸ್ಸನ್ನೂ ಸಹ ಗಳಿಸಿತು. ಸಿನಿಮಾವನ್ನು ನಟ ರಕ್ಷಿತ್ ಶೆಟ್ಟಿ ಪ್ರೆಸೆಂಟ್ ಮಾಡಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ