ಬಿಗ್ ಅಪ್​ಡೇಟ್​; ‘ಕಾಂತಾರ: ಚಾಪ್ಟರ್ 2’ ಸ್ಕ್ರಿಪ್ಟ್ ಆರಂಭಿಸಿದ ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 2' ಸ್ಕ್ರಿಪ್ಟ್ ಕೆಲಸ ಆರಂಭಿಸಿರುವುದಾಗಿ ಘೋಷಿಸಿದ್ದಾರೆ. ಫ್ರಾಂಚೈಸಿಯ ಮೂರನೇ ಭಾಗವಾಗಿರುವ ಈ ಚಿತ್ರದಲ್ಲಿ ಬುಡಕಟ್ಟು ಮತ್ತು ರಾಜಮನೆತನದ ನಡುವಿನ ಮುಂದಿನ ತಲೆಮಾರಿನ ದೈವಿಕ ಸಂಘರ್ಷವನ್ನು ಅನಾವರಣಗೊಳಿಸಲಾಗುತ್ತದೆ. ನಿರ್ದೇಶನದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ರಿಷಬ್, 'ಕಾಂತಾರ: ಚಾಪ್ಟರ್ 1' ಯಶಸ್ಸಿನ ಬಳಿಕ ಮತ್ತೊಂದು ರೋಚಕ ಕಥೆಗೆ ಸಜ್ಜಾಗಿದ್ದಾರೆ.

ಬಿಗ್ ಅಪ್​ಡೇಟ್​; ಕಾಂತಾರ: ಚಾಪ್ಟರ್ 2’ ಸ್ಕ್ರಿಪ್ಟ್ ಆರಂಭಿಸಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ

Updated on: Jul 08, 2026 | 10:41 AM

ಮುಖ್ಯಾಂಶಗಳು

  • ‘ಕಾಂತಾರ ಚಾಪ್ಟರ್ 2’ ಬಗ್ಗೆ ರಿಷಬ್ ಶೆಟ್ಟಿ ಬಿಗ್ ಅಪ್ಡೇಟ್
  • ರಾಜಮನೆತನದ ಕ್ರೌರ್ಯ ವರ್ಸಸ್ ದೈವಿಕ ಶಕ್ತಿಗಳ ಬಿಗ್ ಫೈಟ್
  • ‘ಕಾಂತಾರ 2’ ಕಥಾಹಂದರದಲ್ಲಿ ಏನೇನೆಲ್ಲಾ ಇರಲಿದೆ ಎಂಬುದು ರಿವೀಲ್

ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ‘ಕಾಂತಾರ’ ಚಿತ್ರದ ಪ್ರೀಕ್ವೆಲ್ ಆಗಿ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಡಿ ಬಂದಿತ್ತು. 2025ರಲ್ಲಿ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ ದಾಖಲೆಬರೆದಿತ್ತು. ದೈವಿಕ ಶಕ್ತಿಗಳ ಹಿನ್ನೆಲೆಯಲ್ಲಿ ಮೂಡಿಬಂದಿದ್ದ ಈ ಚಿತ್ರದ ಕೊನೆಯಲ್ಲಿ, ಈ ಫ್ರಾಂಚೈಸಿಗೆ ಮತ್ತೊಂದು ಪಾರ್ಟ್ ಬರಲಿದೆ ಎಂಬ ಸ್ಪಷ್ಟ ಸೂಚನೆಯನ್ನು ಚಿತ್ರತಂಡ ನೀಡಿತ್ತು. ಇದೀಗ ಆ ಕುತೂಹಲಕ್ಕೆ ಸ್ವತಃ ರಿಷಬ್ ಶೆಟ್ಟಿ ಅವರೇ ತೆರೆ ಎಳೆದಿದ್ದು, ‘ಕಾಂತಾರ ಚಾಪ್ಟರ್ 2’ (ಫ್ರಾಂಚೈಸಿಯ 3ನೇ ಭಾಗ) ಬರೆಯುವ ಕೆಲಸ ಈಗಾಗಲೇ ಆರಂಭವಾಗಿದೆ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

‘ಸುಮ್ಮನೆ ಕೂರಲು ಸಾಧ್ಯವಿಲ್ಲ’

ಅಂತರರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡುತ್ತಾ ರಿಷಬ್ ಶೆಟ್ಟಿ ಅವರು ತಮ್ಮ ಮುಂದಿನ ಸಿನೆಮಾ ನಿರ್ದೇಶನದ ಕನಸನ್ನು ಹಂಚಿಕೊಂಡಿದ್ದಾರೆ. ‘ನಾನು ಆ ಸಿನಿಮಾ ಮಾಡಿಯೇ ತೀರುತ್ತೇನೆ. ನನ್ನ ನಿರ್ದೇಶನದ ಕೆಲಸದ ಬಗ್ಗೆ ನನಗೆ ಸುಮ್ಮನೆ ಕೂರಲು ಸಾಧ್ಯವೇ ಇಲ್ಲ. ಆ ಕೆಲಸ ಮಾಡುತ್ತಿದ್ದಾಗಷ್ಟೇ ನನಗೆ ನಿಜವಾದ ನೆಮ್ಮದಿ ಮತ್ತು ಸಂತೋಷ ಸಿಗುತ್ತದೆ. ನನ್ನ ಲೇಖಕರ ತಂಡ ಈಗಾಗಲೇ ನನ್ನೊಂದಿಗಿದೆ. ನಾವೆಲ್ಲರೂ ಒಟ್ಟಾಗಿ ‘ಕಾಂತಾರ: ಚಾಪ್ಟರ್ 2′ ಸ್ಕ್ರಿಪ್ಟ್ ಕೆಲಸವನ್ನು ಈಗಾಗಲೇ ಆರಂಭಿಸಿದ್ದೇವೆ’ ಎಂದು ರಿಷಬ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಯಾವ ಹಂತದಲ್ಲಿದೆ ಕಥೆ?

2025ರ ಸೂಪರ್ ಹಿಟ್ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಕಾಂತಾರ ಬುಡಕಟ್ಟು ಜನಾಂಗ ಮತ್ತು ಕ್ರೂರ ರಾಜನ ನಡುವಿನ ಸಂಘರ್ಷ ಕಥೆಯನ್ನು ತೋರಿಸಲಾಗಿತ್ತು. ರಾಜನ ಮಕ್ಕಳು ಕೂಡ ಕ್ರೂರ ಗುಣಗಳನ್ನು ಹೊಂದಿದ್ದು ಹೈಲೈಟ್ ಆಗಿತ್ತು. ಈಗ ಬರಲಿರುವ ಭಾಗದಲ್ಲಿ ಆ ರಾಜಮನೆತನ ಹಾಗೂ ಬುಡಕಟ್ಟು ಸಮುದಾಯದ ನಡುವಿನ ಮುಂದಿನ ತಲೆಮಾರಿನ ಬಿಗ್ ಫೈಟ್ ಮತ್ತು ದೈವಿಕ ಶಕ್ತಿಗಳ ಹಸ್ತಕ್ಷೇಪದ ರೋಚಕ ಕಥೆ ಅನಾವರಣಗೊಳ್ಳಲಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿ  ಜನ್ಮದಿನ; ಸ್ಟಾರ್ ನಟ ನಡೆದು ಬಂದ ಹಾದಿ ಇಲ್ಲಿದೆ

ರಿಷಬ್ ಕೈಯಲ್ಲಿವೆ ಎರಡು ಮೆಗಾ ಸಿನಿಮಾಗಳು

ಚಿತ್ರ ನಿರ್ದೇಶನದ ಜೊತೆಗೆ ರಿಷಬ್ ಶೆಟ್ಟಿ ಅವರ ನಟನಾ ಬತ್ತಳಿಕೆಯಲ್ಲೂ ಎರಡು ದೈತ್ಯ ಪ್ಯಾನ್-ಇಂಡಿಯಾ ಸಿನಿಮಾಗಳಿವೆ. ಆದರೆ, ಏಕಕಾಲಕ್ಕೆ ಎರಡು ಸಿನಿಮಾಗಳನ್ನು ಮಾಡಲು ತಮಗೆ ಇಷ್ಟವಿಲ್ಲ ಎಂದು ಅವರು ಹೇಳಿದ್ದಾರೆ. ‘ನನ್ನ ಕೈಯಲ್ಲಿ ಎರಡು ಬಿಗ್ ಸಿನಿಮಾಗಳಿವೆ. ನನಗೆ ಮಲ್ಟಿಟಾಸ್ಕ್ ಮಾಡಲು ಸಾಧ್ಯವಿಲ್ಲ. ಅಂದರೆ ಒಟ್ಟಿಗೆ ಎರಡು ಸಿನಿಮಾಗಳಲ್ಲಿ ನಟಿಸಲು ಆಗುವುದಿಲ್ಲ. ಹಾಗಾಗಿ ಮೊದಲು ‘ಜೈ ಹನುಮಾನ್’ ಮುಗಿಸಿ, ಆ ಬಳಿಕ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಲ್ಲಿ ನಟಿಸಲಿದ್ದೇನೆ. ಎರಡು ಚಿತ್ರಗಳಿಗೂ ನನಗೆ ಸಂಪೂರ್ಣ ಭಿನ್ನವಾದ ಲುಕ್ ಮತ್ತು ತಯಾರಿ ಬೇಕಾಗಿದೆ’ ಎಂದು ರಿಷಬ್ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us