ಯಶ್ ಎಂದಿಗೂ ಮಾತಿಗೆ ತಪ್ಪಿದವರಲ್ಲ; ಹೊಗಳಿದ ನಿರ್ಮಾಪಕ ಜಯಣ್ಣ
ರಾಕಿಂಗ್ ಸ್ಟಾರ್ ಯಶ್ ಹಾಗೂ ನಿರ್ಮಾಪಕ ಜಯಣ್ಣ ಕಾಂಬಿನೇಷನ್‌ನ ‘ಜಾನು’ ಸಿನಿಮಾ ಸೆಟ್ಟೇರಿದ ರೋಚಕ ಕಥೆಯನ್ನು ಜಯಣ್ಣ ಹಂಚಿಕೊಂಡಿದ್ದಾರೆ. ಬೇರೊಬ್ಬ ನಟನಿಗೆ ನಿಗದಿಯಾಗಿದ್ದ ಈ ಚಿತ್ರಕ್ಕೆ, ಯಶ್ ಅವರ ‘ಮೊದಲಸಲ’ ಹಾಗೂ ‘ಕಿರಾತಕ’ ಸಿನಿಮಾಗಳ ಯಶಸ್ಸನ್ನು ನೋಡಿ ಜಯಣ್ಣ ಅವರು ಯಶ್ ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡ ಅಪರೂಪದ ಸಂಗತಿ ಇಲ್ಲಿದೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಜಯಣ್ಣ ಅವರ ನಡುವಿನ ಬಾಂಡಿಂಗ್ ಇವತ್ತಿನದಲ್ಲ. ಜಯಣ್ಣ-ಭೋಗೇಂದ್ರ ಪ್ರೊಡಕ್ಷನ್‌ನಲ್ಲಿ ಮೂಡಿಬಂದ ಯಶ್ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದ ನಿರ್ಮಾಪಕ ಜಯಣ್ಣ, ಯಶ್ ಅವರ ವೃತ್ತಿಜೀವನದ ಆರಂಭಿಕ ದಿನಗಳ ‘ಜಾನು’ ಸಿನಿಮಾ ಸೃಷ್ಟಿಯಾದ ರೋಚಕ ಕಥೆಯನ್ನು ಹಂಚಿಕೊಂಡಿದ್ದಾರೆ.
ನಿರ್ದೇಶಕ ಪ್ರೀತಂ ಗುಬ್ಬಿ ಅವರು ಕಥೆಯೊಂದನ್ನು ಸಿದ್ಧಪಡಿಸಿಕೊಂಡು ಜಯಣ್ಣ ಅವರೊಂದಿಗೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ‘ಜಾನು’ ಸಿನಿಮಾದ ಜರ್ನಿ ಆರಂಭವಾಯಿತು. ಮೊದಲು ಈ ಚಿತ್ರಕ್ಕಾಗಿ ಬೇರೊಬ್ಬ ನಟನನ್ನು ಸಂಪರ್ಕಿಸಲಾಗಿತ್ತು. ಆದರೆ ಕೆಲವು ಕಾರಣಗಳಿಂದಾಗಿ ಆ ಪ್ರಾಜೆಕ್ಟ್ ಕ್ಯಾನ್ಸಲ್ ಆಯಿತು.
ಕಿರಾತಕ ಬಳಿಕ ಬದಲಾದ ಪ್ಲಾನ್
ಅದೇ ಸಮಯದಲ್ಲಿ ಯಶ್ ನಟನೆಯ ‘ಮೊದಲಸಲ’ ಸಿನಿಮಾ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ 50 ದಿನ ಪೂರೈಸಿತ್ತು. ಆ ಚಿತ್ರದಲ್ಲಿ ಯಶ್ ನಟನೆ ಜಯಣ್ಣ ಅವರಿಗೆ ತುಂಬಾನೇ ಇಷ್ಟವಾಗಿತ್ತು. ಇದಾದ ಬೆನ್ನಲ್ಲೇ ‘ಕಿರಾತಕ’ ಸಿನಿಮಾ ಕೂಡ ತೆರೆಕಂಡಿತು. ಈ ಎರಡು ಸಿನಿಮಾಗಳ ಯಶಸ್ಸಿನ ನಂತರ ಯಶ್ ಅವರಲ್ಲಿ ಒಬ್ಬ ಭರವಸೆಯ ನಟನನ್ನು ಕಂಡ ಜಯಣ್ಣ, ಪ್ರೀತಂ ಗುಬ್ಬಿ ಅವರ ಬಳಿ ಈ ಚಿತ್ರವನ್ನು ಯಶ್ ಅವರೊಂದಿಗೆ ಮಾಡಲು ನಿರ್ಧರಿಸಿದರು.
Interesting revelation from Producer Jayanna.#Yash wasn’t the first choice for #Jaanu. pic.twitter.com/IS2wTIR6Yn
— Karnataka Box Office | ಕರ್ನಾಟಕ ಬಾಕ್ಸ್ ಆಫೀಸ್ (@Kannada_BO) July 28, 2026
ಮಾತಿಗೆ ತಪ್ಪದ ರಾಕಿ ಭಾಯ್
ಜಯಣ್ಣ ಅವರು ಯಶ್‌ಗೆ ಫೋನ್ ಮಾಡಿ ಮಾತನಾಡಿದಾಗ, ಮೊದಲ ಭೇಟಿಯಲ್ಲೇ ಸಿನಿಮಾ ಮಾಡಲು ಎಲ್ಲವೂ ಓಕೆ ಆಯಿತು. ಆದರೆ ಯಶ್ ಅವರು ಅಡ್ವಾನ್ಸ್ ಪಡೆದುಕೊಳ್ಳಲು 5 ದಿನಗಳ ಕಾಲಾವಕಾಶ ಕೇಳಿದ್ದರು. ಅದಕ್ಕೆ ಕಾರಣ, ಅವರು ಈಗಾಗಲೇ ಬೇರೊಬ್ಬರ ಬಳಿ ಒಂದು ಸಣ್ಣ ಅಡ್ವಾನ್ಸ್ ಪಡೆದುಕೊಂಡಿದ್ದರು. ಅವರಿಂದ ಪರ್ಮಿಷನ್ ಪಡೆದುಕೊಂಡ ಬಳಿಕವೇ ಮುಂದಿನ ಹೆಜ್ಜೆ ಇಡುವುದಾಗಿ ಯಶ್ ತಿಳಿಸಿದ್ದರು. ಅಂದು ಕೂಡ ಯಶ್ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದನ್ನು ಜಯಣ್ಣ ನೆನಪಿಸಿಕೊಂಡಿದ್ದಾರೆ.
ಇದನ್ನೂ ಓದಿ: ‘ಟಾಕ್ಸಿಕ್ ನೋಡಿದವರು ವಾಟ್ ದ ಹೆಲ್ ವಾಸ್ ದ್ಯಾಟ್ ಅಂತ ಹೊರಗೆ ಬರ್ತಾರೆ’; ಯಶ್
ನಂತರ ಆ ಪ್ರಾಜೆಕ್ಟ್ ಅಂತಿಮಗೊಳ್ಳದ ಕಾರಣ, ಯಶ್ ಅವರು ಜಯಣ್ಣ ಅವರ ಆಫೀಸ್‌ಗೆ ಬಂದು ಕಥೆ ಕೇಳಿ ಅಡ್ವಾನ್ಸ್ ಪಡೆದುಕೊಂಡರು. ಹೀಗೆ ‘ಜಾನು’ ಸಿನಿಮಾ ಸೆಟ್ಟೇರಿತು.
ಫಸ್ಟ್ ಪಿಕ್ಚರ್‌ನಲ್ಲೇ ಇನ್ವಾಲ್ವ್‌ಮೆಂಟ್
‘ಯಶ್ ಅವರಿಗೆ ಸಿನಿಮಾದ ಬಗ್ಗೆ ಮೊದಲಿನಿಂದಲೂ ಅಪಾರ ಕಾಳಜಿ ಇತ್ತು. ಮೊದಲ ಚಿತ್ರದಲ್ಲೇ ಸ್ಕ್ರಿಪ್ಟ್ ಮತ್ತು ಮೇಕಿಂಗ್‌ನಲ್ಲಿ ಸಾಕಷ್ಟು ಇನ್ವಾಲ್ವ್ ಆಗುತ್ತಿದ್ದರು. ಆದರೆ ಆ ಸಮಯದಲ್ಲಿ ಸಿನಿಮಾ ತಂಡದವರು ಅವರ ಮಾತುಗಳನ್ನು ಹೆಚ್ಚಾಗಿ ಕೇಳುತ್ತಿರಲಿಲ್ಲ. ಆದರೆ ನಂತರದ ಸಿನಿಮಾಗಳಲ್ಲಿ ಅವರ ಮಾತನ್ನು ಕೇಳಿದರು’ ಎಂದು ಜಯಣ್ಣ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




