ಕಲಾವಿದರ ಸಂಘದಲ್ಲಿ ಹೋಮ ಮಾಡೋದು ಯಾಕೆ? ಅನುಮಾನಗಳಿಗೆ ತೆರೆ ಎಳೆದ ರಾಕ್​ಲೈನ್ ವೆಂಕಟೇಶ್

ಕನ್ನಡ ಚಿತ್ರರಂಗಕ್ಕೆ ಸದ್ಯಕ್ಕೆ ಲಾಭದಾಯಕ ಪರಿಸ್ಥಿತಿ ಇಲ್ಲ. ಚಿತ್ರಮಂದಿರಗಳು ಕೂಡ ಮುಚ್ಚುತ್ತಿವೆ. ನಿರ್ಮಾಪಕರು ನಷ್ಟ ಅನುಭವಿಸುತ್ತಿದ್ದಾರೆ. ಇಂಥ ಅನೇಕ ಸಮಸ್ಯೆಗಳು ಎದುರಾಗಿವೆ. ಆದ್ದರಿಂದ ಚಿತ್ರರಂಗದ ಏಳಿಗೆಗಾಗಿ ಹೋಮ ಮತ್ತು ಪೂಜೆ ಮಾಡಿಸಲು ನಿರ್ಧರಿಸಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ರಾಕ್​ಲೈನ್​ ವೆಂಕಟೇಶ್​ ಮತ್ತು ದೊಡ್ಡಣ್ಣ ಅವರು ಸುದ್ದಿಗೋಷ್ಠಿ ನಡೆಸಿದರು.

ಕಲಾವಿದರ ಸಂಘದಲ್ಲಿ ಹೋಮ ಮಾಡೋದು ಯಾಕೆ? ಅನುಮಾನಗಳಿಗೆ ತೆರೆ ಎಳೆದ ರಾಕ್​ಲೈನ್ ವೆಂಕಟೇಶ್
ದರ್ಶನ್​, ರಾಕ್​ಲೈನ್​ ವೆಂಕಟೇಶ್​

Updated on: Aug 11, 2024 | 7:16 PM

ಆಗಸ್ಟ್​ 13 ಮತ್ತು 14ರಂದು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಹೋಮ ಮಾಡಲು ನಿರ್ಧರಿಸಲಾಗಿದೆ. ನಟ ದರ್ಶನ್​ ಜೈಲು ಸೇರಿರುವ ಕಾರಣದಿಂದ ಈ ಪೂಜೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಅನೇಕರಿಗೆ ಇತ್ತು. ಆ ಕುರಿತಂತೆ ರಾಕ್​ಲೈನ್​ ವೆಂಕಟೇಶ್​ ಅವರು ಉತ್ತರಿಸಿದ್ದಾರೆ. ಇಂದು (ಆಗಸ್ಟ್ 11) ಸುದ್ದಿಗೋಷ್ಠಿ ನಡೆಸಿ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ‘ದರ್ಶನ್​ಗಾಗಿ ಪೂಜೆ ಮಾಡಲಾಗುತ್ತಿದೆ ಎಂಬ ಭಾವನೆ ಯಾರಾದರೂ ಇಟ್ಟುಕೊಂಡಿದ್ದರೆ ಅದನ್ನು ತೆಗೆದುಬಿಡಿ. ದರ್ಶನ್​ಗಾಗಿ ಪೂಜೆ ಮಾಡಿಸುವುದಾಗಿದ್ದರೆ ನನ್ನ ಮನೆಯಲ್ಲಿ ಮಾಡುತ್ತಿದ್ದೆ’ ಎಂದು ಅವರು ಹೇಳಿದ್ದಾರೆ. ಹಿರಿಯ ನಟ ದೊಡ್ಡಣ್ಣ ಕೂಡ ಈ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು. ಹೋಮದ ಕುರಿತು ಸಂಪೂರ್ಣ ಮಾಹಿತಿಯನ್ನು ರಾಕ್​ಲೈನ್​ ವೆಂಕಟೇಶ್ ಅವರು ನೀಡಿದರು.

‘ಕಲಾವಿದರ ಸಂಘದಲ್ಲಿ ಆಗಸ್ಟ್​ 13 ಮತ್ತು 14ರಂದು ನಡೆಯುವ ಪೂಜೆ ಏನು ಎಂದು ಅನೇಕರು ಕರೆ ಮಾಡಿ ಕೇಳುತ್ತಿದ್ದರು. ಹೋಮ ಮತ್ತು ಪೂಜೆ ಹೊರತು ಬೇರೆ ಏನೂ ಇಲ್ಲ. ಕೊವಿಡ್​ ಆದಬಳಿಕ ಹೋಮ ಮಾಡಬೇಕು ಅಂತ ಅಂದುಕೊಂಡಿದ್ದೆವು. ಚಿತ್ರರಂಗದಲ್ಲೂ ಅನೇಕರನ್ನು ನಾವು ಕಳೆದುಕೊಂಡೆವು. ಪೂಜೆ ಮಾಡಿಸುವ ಬಗ್ಗೆ ದೊಡ್ಡಣ್ಣ ಅವರು ಒಂದು ತಿಂಗಳು ಮುಂಚೆ ನನ್ನ ಬಳಿ ಪ್ರಸ್ತಾಪಿಸಿದ್ದರು. ಈ ತಿಂಗಳ 14ನೇ ತಾರೀಕು ಒಳ್ಳೆಯ ದಿನ. ಆ ದಿನ ಪೂಜೆ ಮಾಡಿದರೆ ಒಳ್ಳೆಯದು ಆಗುತ್ತದೆ’ ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದ್ದಾರೆ.

‘ಇಡೀ ಚಿತ್ರರಂಗದ ಉಳಿವಿಗಾಗಿ, ಏಳಿಗೆಗೋಸ್ಕರ ಈ ಹೋಮವನ್ನು ಮಾಡಬೇಕು ಎಂದುಕೊಂಡಿದ್ದೇವೆ. ಇಡೀ ಚಿತ್ರರಂಗ ಇದರಲ್ಲಿ ಭಾಗವಹಿಸಬೇಕು ಎಂಬುದಲ್ಲ. ಯಾವುದಾದರೂ ಒಳ್ಳೆಯ ಕೆಲಸ ಮಾಡುವಾಗ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ಕಾರ್ಮಿಕರ ಒಕ್ಕೂಟ ಮುಂತಾದ್ದಕ್ಕೆ ಆಹ್ವಾನ ನೀಡುತ್ತೇವೆ. ಆದರೆ ಈ ಪೂಜೆಗೆ ಆಹ್ವಾನ ನೀಡುವುದು ಬೇಡ ಅಂತ ನಾನು ದೊಡ್ಡಣ್ಣ ಅವರಿಗೆ ಹೇಳಿದ್ದೇನೆ. ಎಲ್ಲರೂ ಸೇರಿ ಇದನ್ನು ಮಾಡುತ್ತಿರುವುದು. ನಮ್ಮೆಲ್ಲ ಉದ್ದೇಶ ಒಂದೇ’ ಎಂದಿದ್ದಾರೆ ರಾಕ್​ಲೈನ್​ ವೆಂಕಟೇಶ್​.

ಇದನ್ನೂ ಓದಿ: ದರ್ಶನ್​ ಅನುಪಸ್ಥಿತಿಯಲ್ಲಿ ನಡೆಯಿತು ಮದುವೆ: ಎಮೋಷನಲ್​ ಆದ​ ತರುಣ್​ ಸುಧೀರ್​

‘ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾ ಇಲ್ಲ ಎಂಬ ಕೊರಗು ಇದೆ. ಚಿತ್ರಮಂದಿರಗಳು ಮುಚ್ಚುತ್ತಿವೆ. ಅಂಥ ಅನೇಕ ಸಮಸ್ಯೆಗಳು ಎದುರಾಗಿವೆ. ಇದಕ್ಕೆಲ್ಲ ಒಂದು ಪರಿಹಾರ ಬೇಕು. ಯಾರ ಬಳಿ ಕೇಳುವುದು? ಜನರ ಅಭಿಪ್ರಾಯವನ್ನು ನಾವು ಬದಲಾಯಿಸೋಕೆ ಆಗಲ್ಲ. ಎಲ್ಲ ಭಾಷೆಯ ಚಿತ್ರಗಳು ತೆರೆಕಾಣುತ್ತದೆ. ಮೊದಲು ಡಾ. ರಾಜ್​ಕುಮಾರ್​, ಅಂಬರೀಶ್​, ಪಾರ್ವತಮ್ಮ ಅವರು ಇದ್ದಾಗ ಡಬ್ಬಿಂಗ್​ ಸಿನಿಮಾಗಳು ಇಲ್ಲಿ ತೆರೆಕಾಣತ್ತಿರಲಿಲ್ಲ. ಅವರನ್ನೆಲ್ಲ ಕಳೆದುಕೊಂಡಿದ್ದು ನಮ್ಮ ದುರಂತ. ಡಬ್ಬಿಂಗ್​ ಸಿನಿಮಾಗಳು ಸುನಾಮಿ ರೀತಿ ಬರುತ್ತಿವೆ. ಅದು ತಪ್ಪಲ್ಲ. ನಮ್ಮ ಪ್ರೇಕ್ಷಕರು ಕೂಡ ಅದಕ್ಕೆ ಅಡಿಕ್ಟ್​ ಆಗಿದ್ದಾರೆ’ ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us