ಆತ್ಮಹತ್ಯೆಗೂ ಮುನ್ನ ಅಪ್ಪನಿಂದ 1 ಲಕ್ಷ ರೂ. ಪಡೆದಿದ್ದ ನಟಿ ಸವಿ ಮಾದಪ್ಪ; ಸಾವಿನ ಸುತ್ತ ಹೆಚ್ಚಿತು ಅನುಮಾನ
ಯಾರನ್ನೂ ಕೀಳಾಗಿ ಕಾಣಬೇಡಿ. ನಗುತ್ತಾ ಇರುವ ವ್ಯಕ್ತಿಗಳ ಹಿಂದೆಯೂ ಸಾಕಷ್ಟು ನೋವಿರುತ್ತದೆ, ಆ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ ಎಂದು ಸವಿ ಬರೆದುಕೊಂಡಿದ್ದರು.
‘ಚೌಕಟ್ಟು’, ‘ಫನ್’ ಸಿನಿಮಾದಲ್ಲಿ ನಟಿಸಿದ್ದ ಸವಿ ಮಾದಪ್ಪ ಅವರು ದೊಡ್ಡಬೆಲೆ ಗ್ರಾಮದ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಣ್ಣ ವಯಸ್ಸಿಗೆ ಅವರು ಎಲ್ಲರನ್ನೂ ಬಿಟ್ಟು ತೆರಳಿರುವುದು ಅವರ ಕುಟುಂಬ ಹಾಗೂ ಆಪ್ತರಿಗೆ ನಿಜಕ್ಕೂ ಶಾಕ್ ನೀಡಿದೆ. ಇನ್ನು, ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸವಿ ಮಾದಪ್ಪ ಪಾಲಕರು ಟಿವಿ9ಗೆ ಪ್ರತಿಕ್ರಿಯೆ ನೀಡಿದ್ದು, ಸಾಕಷ್ಟು ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸವಿ ತಂದೆ ಪ್ರಭು ಮಾದಪ್ಪ ‘ನಮ್ಮ ಮಗಳ ಆತ್ಮಹತ್ಯೆ ಬಗ್ಗೆ ನಮಗೆ ಅನುಮಾನ ಇದೆ. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಂತವಳಲ್ಲ. ನಮ್ಮ ಮಗಳು ಫ್ಲ್ಯಾಟ್‌ನಲ್ಲಿ ಒಬ್ಬಳೇ ವಾಸವಿದ್ದಳು. ಮೂರು ದಿನದ ಹಿಂದೆ ಕರೆ ಮಾಡಿ 1 ಲಕ್ಷ ರೂಪಾಯಿ ಕೇಳಿದ್ದಳು. ಏಕೆ ಎಂದು ಪ್ರಶ್ನಿಸಿದ್ದಕ್ಕೆ ಕಮಿಟ್ಮೆಂಟ್ ಇದೆ ಎಂದಿದ್ದಳು. ಇಂದು ಬೆಳಗ್ಗೆಯೂ ಸವಿ ಜತೆ ನನ್ನ ಪತ್ನಿ ರೇಣುಕಾ ಮಾತಾಡಿದ್ದರು. ಇವತ್ತೇ ಊರಿಗೆ ಬರುತ್ತಿದ್ದೇನೆ ಎಂದಿದ್ದಳು. ಮಗಳ ಸಾವಿನ ಕುರಿತು ದೂರು ಕೊಡುತ್ತೇವೆ. ಶವ ಇಳಿಸುವಾಗಲೂ ಸಹ ನಮಗೆ ಮಾಹಿತಿ ನೀಡಿಲ್ಲ’ ಎಂದು ಪೊಲೀಸರ ಕ್ರಮದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ಸವಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಮನಗರ ಎಸ್ಪಿ ಎಸ್. ಗಿರೀಶ್ ಹೇಳಿಕೆ ನೀಡಿದ್ದಾರೆ. ‘ಬೆಳಗ್ಗೆ 9 – 11 ಗಂಟೆ ಸಮಯದಲ್ಲಿ ಸವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್ ನೋಟ್ನಲ್ಲಿ ಬರೆದಿರುವುದು ತಿಳಿದುಬಂದಿದೆ. ಮುಂದೆ ತನಿಖೆಯ ನಂತರ ಮತ್ತಷ್ಟು ವಿಚಾರ ತಿಳಿಯಲಿದೆ’ ಎಂದಿದ್ದಾರೆ ಅವರು.
ಸವಿ ಮಾದಪ್ಪ ಬಾಯ್‌ಫ್ರೆಂಡ್ ವಿವೇಕ್ ಜತೆ ವಾಸವಿದ್ದರು ಎನ್ನಲಾಗಿದೆ. ಊಟ ತರುವಂತೆ ವಿವೇಕ್ಗೆ ಹೇಳಿದ್ದರು. ವಿವೇಕ್ ಊಟ ತರೋಕೆ ಹೊರಗೆ ಹೋಗಿದ್ದರು. ಈ ವೇಳೆ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಬುಧವಾರ (ಸೆಪ್ಟೆಂಬರ್ 29) ಸವಿ ಅವರು ಕೆಲವು ಪೋಸ್ಟ್ಗಳನ್ನು ಹಾಕಿದ್ದರು. ‘ಯಾರನ್ನೂ ಕೀಳಾಗಿ ಕಾಣಬೇಡಿ. ನಗುತ್ತಾ ಇರುವ ವ್ಯಕ್ತಿಗಳ ಹಿಂದೆಯೂ ಸಾಕಷ್ಟು ನೋವಿರುತ್ತದೆ, ಆ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ’ ಎಂದು ಸವಿ ಬರೆದುಕೊಂಡಿದ್ದರು. ಮತ್ತೊಂದು ಪೋಸ್ಟ್ನಲ್ಲಿ ತಮ್ಮದೇ ಫೋಟೋ ಹಾಕಿ ‘happiness, Sadness, ’ ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇದರ ಜತೆಗೆ ಗೆಳೆಯರು ಹಾಗೂ ಸಹೋದರರ ಫೋಟೋ ಹಾಕಿ ಅವರಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಟಿ ಸವಿ ಮಾದಪ್ಪ ಆತ್ಮಹತ್ಯೆ; ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣು
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಭಾವುಕ ಪೋಸ್ಟ್ ಹಾಕಿದ್ದ ಸ್ಯಾಂಡಲ್ವುಡ್ ನಟಿ
Published On - 3:00 pm, Thu, 30 September 21